ಬೀದಿ ಬದಿ ವ್ಯಾಪಾರ ನಮ್ಮ ಹಕ್ಕು ಟೈಗರ್ ಕಾರ್ಯಾಚರಣೆ ವಿರುದ್ಧ ಬೃಹತ್ ಪ್ರತಿಭಟನೆ

mng-aug7-protest2
Published on

ಮಂಗಳೂರು: ನಗರದ ಪ್ರಮುಖ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರ ನಡೆಸುವವರ ಮೇಲೆ ಮಂಗಳೂರು ಮಹಾ ನಗರ ಪಾಲಿಕೆಯಿಂದ ನಡೆಸುತ್ತಿರುವ ಟೈಗರ್ ಕಾರ್ಯಾಚರಣೆ ವಿರೋಧಿಸಿ ಬುಧವಾರ ಬೀದಿ ಬದಿ ವ್ಯಾಪಾರಿಗಳು ಬೀದಿಗಿಳಿದು ಹೋರಾಟ ನಡೆಸಿದರು.


ನಗರದ ಪಿವಿಎಸ್ ಬಳಿಯಿಂದ ಮನಪಾ ಕಚೇರಿವರಗೆ ಬೃಹತ್ ಮೆರವಣಿಗೆ ನಡೆಸಿ ಪಾಲಿಕೆ ಕಚೇರಿ ಎದುರು ಪ್ರತಿಭಟಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ನಗರದ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರು ಮೆರವಣಿಗೆ ಹಾಗೂ ಪ್ರತಿಭಟನೆಗೆ ಸಾಥ್ ನೀಡಿದರು.


ಮನಪಾ ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಹೋರಾಟಗಾರರಿಂದ ಪಾಲಿಕೆಗೆ ಮುತ್ತಿಗೆ ಯತ್ನ ತಡೆದರು.


ಪಾಲಿಕೆ ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಬೀದಿ ಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ .ಇಮ್ತಿಯಾಜ್ ಮಾತನಾಡಿದರು. ಪಟ್ಟಣ ವ್ಯಾಪಾರ ಸಮಿತಿ ಸಭೆ ಮಾಡದೆ ಟೈಗರ್ ಕಾರ್ಯಾಚರಣೆ ಮಾಡುವುದು ಕಾನೂನು ಬಾಹಿರ. ಕಾರ್ಯಾಚರಣೆ ವೇಳೆ ಅಧಿಕಾರಿಗಳು ಬಡ ವ್ಯಾಪಾರಿಗಳ ಜೊತೆ ಅನಾಗರಿಕವಾಗಿ, ಅಮಾನುಷವಾಗಿ ವರ್ತಿಸಿದ್ದಾರೆ ಎಂದು ದೂರಿದರು.
ಮೇಯರ್ ಸುಧೀರ್ ಶೆಟ್ಟಿ ಅವರೂ ಕೂಡ ಒಬ್ಬ ಬೀದಿ ವ್ಯಾಪಾರಿ ಮಗ ಎಬುದು ನೆನಪಿರಲಿ. ಇದೀಗ ನೀವು ಮೇಯರ್ ಆಗಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿರುವುದು ಅಮಾನವೀಯ. ನೀವು ಹೇಳಿರುವಂತೆ ಒಬ್ಬರಿಗೆ ಇನ್ನೂರು ಗಾಡಿ ಇದೆ ಎಂಬುದನ್ನು ತೋರಿಸಿ. ನಾವು ಹೋರಾಟ ಬಿಡುತ್ತೇವೆ ಎಂದು ಸವಾಲು ಹಾಕಿದ ಅವರು, 10 ಕಡೆ ವ್ಯಾಪಾರ ವಲಯ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದ್ದು ಬೀದಿ ಬದಿ ವ್ಯಾಪಾರಸ್ಥರ ಸಂಘಟನೆ. ನಿಮ್ಮ ಪ್ರಯತ್ನ ಅಲ್ಲ ಎಂದು ಇಮ್ತಿಯಾಜ್ ಹೇಳಿದರು.


ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ ರೈತ ಮುಖಂಡ ಯಾದವ ಶೆಟ್ಟಿ, ಮಂಗಳೂರು ಪಾಲಿಕೆ ವ್ಯಾಪ್ತಿ ಮೇಯರ್, ಅಥವಾ ಸದಸ್ಯರ ಪಿತ್ರಾರ್ಜಿತ ಆಸ್ತಿ ಅಲ್ಲ. ಇದು ನಮ್ಮ ಭೂಮಿ. ಬೀದಿ ಬದಿ ವ್ಯಾಪಾರ ನಮ್ಮ ಹಕ್ಕು ಎಂದು ಹೇಳಿದರು.
ಸಮಾನ ಮನಸ್ಕ ಸಂಘಟನೆಯ ಪ್ರಮುಖರಾದ ಮಂಜುಳಾ ನಾಯಕ್ ಮಾತನಾಡಿ, ಶಾಸಕ ವೇದವ್ಯಾಸ ಕಾಮತ್ ಅವರಿಗೆ ತಾಕತ್ತಿದ್ದರೆ ಬೀದಿ ಬದಿ ವ್ಯಾಪಾರಿಗಳಿಗೆ ಕೆಲಸ ಕೊಡಲಿ. ಅವರು ಬೀದಿ ವ್ಯಾಪಾರ ನಿಲ್ಲಿಸುತ್ತಾರೆ. ಇಲ್ಲಿ ಬಿಜೆಪಿಯ ಉತ್ತರ ಪ್ರದೇಶ ಮಾದರಿ ನಡೆಯದು ಎಂದರು.

  • ಶೀಘ್ರ ವೆಂಡಿಂಗ್ ರೆನ್
    ಟೈಗರ್ ಕಾರ್ಯಾಚರಣೆ ವೇಳೆ ತಳ್ಳುಗಾಡಿ ವ್ಯಾಪಾರಿಗಳಿಗೆ ತೊಂದರೆ ಮಾಡಿಲ್ಲ. ಒಂದೇ ಸ್ಥಳದಲ್ಲಿ ಶೆಡ್ ಹಾಕಿಕೊಂಡು ವ್ಯಾಪಾರ ಮಾಡುವುದಕ್ಕೆ ಅವಕಾಶವಿಲ್ಲ. ಶೀಘ್ರದಲ್ಲೇ ವೆಂಡಿಂಗ್ ರೆನ್ ಮಾಡಿ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಲಾಗುವುದು. ವ್ಯಾಪಾರಿಗಳ ಸಮಸ್ಯೆಗೆ ಸ್ಪಂದನೆ ನೀಡುತ್ತೇವೆ ಎಂದು ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಹೇಳಿದರು.

  • ಪ್ರಮುಖರಾದ ಎಂ. ದೇವದಾಸ್ , ಕರುಣಾಕರ್, ಪದ್ಮಾವತಿ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ವಿ. ಕುಕ್ಯಾನ್, ಸೀತಾರಾಂ ಬೇರಿಂಜ, ಮುಹಮ್ಮದ್ ಕುಂಜತ್ತಬೈಲ್, ಬಿ.ಎಂ. ಭಟ್, ಸಂತೋಷ್ ಕುಮಾರ್ ಬಜಾಲ್, ನವೀನ್ ಕೊಂಚಾಡಿ, ರಿಜ್ವಾನ್ ಹರೇಕಳ, ಮೀನ ಟೆಲ್ಲಿಸ್, ಯೋಗೀಶ್ ಜಪ್ಪಿನಮೊಗರು, ಸುರೇಶ್ ಕುಮಾರ್, ಶೇಖರ್, ದಯಾನಂದ್ ಶೆಟ್ಟಿ , ಕವಿತಾ ವಾಸು, ಜಯಂತಿ ಶೆಟ್ಟಿ, ಭಾರತಿ ಬೋಳಾರ್, ಬೀದಿ ಬದಿ ವ್ಯಾಪಾರಿಗಳ ಸಂಘಟನೆಯ ಅಧ್ಯಕ್ಷ ಮುಹಮ್ಮದ್ ಮುಸ್ತಾಫ ಕಾರ್ಯದರ್ಶಿ ಹರೀಶ್ ಪೂಜಾರಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
    ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

  • ಎಸ್‌ಡಿಟಿಯು ಭಾಗಿಗೆ ಆಕ್ಷೇಪ
    ಪ್ರತಿಭಟನೆಯಲ್ಲಿ ಎಸ್.ಡಿ.ಟಿ.ಯು ಕಾರ್ಯಕರ್ತರು ತಮ್ಮ ಸಂಘಟನೆಯ ಬಾವುಟದೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದನ್ನು ಪ್ರತಿಭಟನಾಕಾರರು ಆಕ್ಷೇಪಿಸಿದರು. ಸಮಾನ ಮನಸ್ಕ ಸಂಘಟನೆ ಸಮಸ್ತ ಧರ್ಮಗಳ ಪರವಾದ ಬಾವುಟ ಇದೆ. ಯಾವುದೇ ಧರ್ಮದ ಬಾವುಟ ಪ್ರತಿಭಟನೆಯಲ್ಲಿ ಬೇಡ ಎಂದು ಪ್ರತಿಭಟನಾ ಸಂಘಟಕರು ವಿರೋಧಿಸಿದರು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಅಲ್ಲಿ ಸೇರಿದ್ದ ಎಸ್.ಡಿ.ಟಿ.ಯು ಕಾರ್ಯಕರ್ತರನ್ನು ಹೊರ ಕಳಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net