ಟೈಗರ್ ಕಾರ್ಯಾಚರಣೆ ತಾರತಮ್ಯ ಆರೋಪಿಸಿ ಪ್ರತಿಭಟನೆ ಸ್ಟೇಟ್‌ಬ್ಯಾಂಕ್‌ನಲ್ಲಿ ಐದನೇ ದಿನವೂ ಅನಧಿಕೃತ ಅಂಗಡಿಗಳ ತೆರವು

mng-aug2-tiger1
Published on

ಮಂಗಳೂರು: ಮಹಾನಗರ ಪಾಲಿಕೆ ವತಿಯಿಂದ ಬೀದಿ ಬದಿ ವ್ಯಾಪಾರಸ್ಥರ ವಿರುದ್ಧ ಟೈಗರ್ ಕಾರ್ಯಾಚರಣೆ ಐದನೇ ದಿನವೂ ಶುಕ್ರವಾರ ಸ್ಟೇಟ್‌ಬ್ಯಾಂಕ್ ಪರಿಸರದಲ್ಲಿ ಮುಂದುವರಿಯಿತು.


ಈ ನಡುವೆ ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ಸ್ಟೇಟ್‌ಬ್ಯಾಂಕ್ ಸರ್ವೀಸ್ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು. ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಮಾತನಾಡಿ, ಟೈಗರ್ ಕಾರ್ಯಾಚರಣೆಯಲ್ಲಿ ರಾಜಕೀಯ ತಾರತಮ್ಯ ಮಾಡುತ್ತಿದೆ. ಸ್ಟೇಟ್‌ಬ್ಯಾಂಕ್ ಬಸ್ ತಂಗುದಾಣದ ಒಳಗಿರುವ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಪೊಲೀಸ್ ರಕ್ಷಣೆಯಲ್ಲಿ ಬಸ್ ತಂಗುದಾಣದ ಒಳಗಿದ್ದ ನಂದಿನಿ ಬೂತ್‌ಗೆ ಹೆಚ್ಚುವರಿ ಶೀಟು ಅಳವಡಿಸಿ ವಿಸ್ತಾರ ಮಾಡಿರುವುದನ್ನು ಅಧಿಕಾರಿಗಳು ತೆರವುಗೊಳಿಸಿದರು. ರಸ್ತೆ ಬದಿಯಗಳಲ್ಲಿದ್ದ ಸಿಯಾಳ, ಆಮ್ಲೇಟ್, ಬಟ್ಟೆ, ಹಣ್ಣು ಹಂಪಲು ಮೊದಲಾದ ಅಂಗಡಿಗಳನ್ನು ಬೀದಿ ಬದಿ ವ್ಯಾಪಾರಸ್ಥರ ವಿರೋಧದ ನಡುವೆಯೇ ತೆರವು ಮಾಡಿದರು. ಗುರುತಿನ ಚೀಟಿ ಇದ್ದವರಿಗೆ, ಅಂಗವಿಕಲರಿಗೆ ಮಾನವೀಯ ನೆಲೆಯಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.

  • ಬೀದಿಗೆ ಬಿದ್ದ ಬದುಕು: ಪಾಲಿಕೆಯ ನಿರಂತರ ಟೈಗರ್ ಕಾರ್ಯಾಚರಣೆಯಿಂದ ಸುಮಾರು 250ಕ್ಕಿಂತಲೂ ಅಧಿಕ ಮಂದಿ ಬೀದಿ ಬದಿ ವ್ಯಾಪಾರಿಗಳ ಕುಟುಂಬ ಬೀದಿಗೆ ಬಿದ್ದಿದೆ. ಬಹಳಷ್ಟು ಕುಟುಂಬಗಳು ಈ ವ್ಯಾಪಾರವನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ಏಕಾಏಕಿ ಕಾರ್ಯಾಚರಣೆ ನಡೆಸಿ ಬದುಕನ್ನು ಕಸಿದುಕೊಂಡಿರುವುದರ ವಿರುದ್ಧ ವಿರೊಧ ಚರ್ಚೆಯಾಗುತ್ತಿದೆ. ವ್ಯಾಪಾರಿಗಳ ಗೂಡಂಗಡಿ, ತಳ್ಳುಗಾಡಿಗಳು ಜೆಸಿಬಿ ದಾಳಿಯಿಂದ ಹಾನಿಗೊಳಗಾಗಿವೆ. ಮುಂದೇನು ಮಾಡುವುದೆಂದು ಬಹಳಷ್ಟು ವ್ಯಾಪಾರಿಗಳು ಆತಂಕಕ್ಕೊಳಗಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net