ಅತ್ತಾವರ ಶ್ರೀಮತಿ ಶೆಟ್ಟಿ ಭೀಬತ್ಸ ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

mng--24 Sep srimathi judgement
Published on


ಮಂಗಳೂರು: ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ (42) ಅವರ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳ ಅಪರಾಧ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, 1ನೇ ಮತ್ತು 2ನೇ ಅಪರಾಧಿಗಳಿಗೆ ಜೀವಾವಧಿ ಹಾಗೂ 3ನೇ ಆರೋಪಿಗೆ 6 ತಿಂಗಳ ಸಜೆ ವಿಧಿಸಿ ತೀರ್ಪು ನೀಡಿದೆ.


ನಗರದ ಸೂಟರ್‌ಪೇಟೆಯ ಜೋನಸ್ ಸ್ಯಾಮ್ಸನ್ ಆಲಿಯಾಸ್ ಜೋನಸ್ ಜೌಲಿನ್ ಸ್ಯಾಮ್ಸನ್ (40), ವಿಕ್ಟೋರಿಯಾ ಮಥಾಯಿಸ್ (47) ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು. ಸಹಕಾರ ನೀಡಿದ ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ಎಂಬಾತನಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.


ಪ್ರಕರಣದ ಹಿನ್ನೆಲೆ: ಶ್ರೀಮತಿ ಶೆಟ್ಟಿ ಅವರು ಅತ್ತಾವರದಲ್ಲಿ ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದ್ದರು. ಈ ವ್ಯವಹಾರದಲ್ಲಿ ಜೋನಸ್ ಸ್ಯಾಮ್ಸನ್ 2 ಸದಸ್ಯತ್ವ ಹೊಂದಿದ್ದು, ಮಾಸಿಕ ಕಂತು ಕ್ರಮಬದ್ಧವಾಗಿ ಕಟ್ಟಲು ವಿಫಲನಾಗಿದ್ದರಿಂದ ಶ್ರೀಮತಿ ಶೆಟ್ಟಿ ಹಣವನ್ನು ನಿಯತ್ತಾಗಿ ಕಟ್ಟುವಂತೆ ಹೇಳಿದ್ದರು. ಇದೇ ವಿಚಾರದಲ್ಲಿ 2019ರ ಮೇ 11ರಂದು ಬೆಳಗ್ಗೆ 9.15ಕ್ಕೆ ಹಣ ಕೇಳುವುದಕ್ಕಾಗಿ ಶ್ರೀಮತಿ ಅವರು ಆರೋಪಿ ಜೋನಸ್ ಸ್ಯಾಮ್ಸನ್‌ನ ಮನೆಗೆ ತೆರಳಿದ್ದರು. ಅಲ್ಲಿ ಸ್ಯಾಮ್ಸನ್ ಏಕಾಏಕಿ ಮರದ ಪಟ್ಟಿಯ ತುಂಡಿನಿಂದ ಶ್ರೀಮತಿ ಶೆಟ್ಟಿ ತಲೆಗೆ ಹೊಡೆದು ಕೊಲೆಗೈದಿದ್ದ. ಬಳಿಕ ಜೋನಸ್ ಮತ್ತು ವಿಕ್ಟೋರಿಯಾ ಬಚ್ಚಲು ಕೋಣೆಗೆ ಕೊಂಡೊಯ್ದು ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ರುಂಡ, ಕೈ, ಕಾಲು ಸೇರಿದಂತೆ ಒಟ್ಟು 29 ತುಂಡುಗಳನ್ನು ಮಾಡಿದ್ದರು. ಬಳಿಕ ಪ್ಲಾಸ್ಟಿಕ್ ಗೋಣಿಚೀಲದಲ್ಲಿ ತುಂಬಿಸಿ ನಗರದ ವಿವಿಧ ಕಡೆ ಎಸೆದಿದ್ದರು.


ಆಶ್ರಯ ನೀಡಿದ್ದ 3ನೇ ಆರೋಪಿ: ಶ್ರೀಮತಿ ಶೆಟ್ಟಿಯ ಚಿನ್ನಾಭರಣಗಳನ್ನು 3ನೇ ಆರೋಪಿ ರಾಜುವಿಗೆ ಕೊಟ್ಟಿದ್ದು, ಕೊಲೆಯ ವಿಷಯವನ್ನು ಆತನಿಗೆ ಹೇಳಿದ್ದರು. ಆದರೂ ರಾಜು ಅವರಿಗೆ ತನ್ನ ಮನೆಯಲ್ಲೇ ಆಶ್ರಯ ನೀಡಿದ್ದಲ್ಲದೆ, ಜೋನಸ್ ಸ್ಕೂಟರ್‌ನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ. ಅಲ್ಲದೆ ಆರೋಪಿಗಳು ತಲೆಮರೆಸಿಕೊಳ್ಳಲು ನೆರವಾಗಿದ್ದ.


ರುಂಡ ಪತ್ತೆಯಿಂದ ಪ್ರಕರಣ ಬೆಳಕಿಗೆ: ಕದ್ರಿ ಬಳಿಯ ಅಂಗಡಿಯೊಂದರ ಬಳಿ ರುಂಡ ಪತ್ತೆಯಾದ ಮೇಲೆ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ನಂದಿಗುಡ್ಡೆಯಲ್ಲಿ ದೇಹದ ತುಂಡುಗಳು ಪತ್ತೆಯಾಗಿದ್ದವು. ರುಂಡವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ, ಹೆಲ್ಮೆಟ್‌ನೊಳಗಿಟ್ಟು ಆ ಹೆಲ್ಮೆಟ್, ಕೈ, ಮಾಂಸದ ತುಂಡುಗಳಿದ್ದ ಗೋಣಿ ಚೀಲವನ್ನು ಕೆಪಿಟಿ ಸಮೀಪದ ಗೂಡಂಗಡಿಯೊಂದರ ಬಳಿ ಇಟ್ಟಿದ್ದ. ಕಾಲುಗಳನ್ನು ಪದವು ಹಾಸ್ಟೆಲೊಂದರ ಕಂಪೌಂಡ್ ಬಳಿ, ಕುತ್ತಿಗೆಯಿಂದ ಸೊಂಟದವರೆಗಿನ ಭಾಗ ಹಾಗೂ ಇತರ ಭಾಗಗಳನ್ನು ನಂದಿಗುಡ್ಡೆ ಸ್ಮಶಾನದ ಬಳಿ ರಸ್ತೆ ಬದಿಯಲ್ಲಿ ಇಟ್ಟಿದ್ದ. ಇತರ ಕೆಲವು ತುಂಡುಗಳನ್ನು ರಸ್ತೆಯ ಮಧ್ಯೆ ಹಾಗೂ ಸ್ಮಶಾನದ ಒಳಗಡೆ ಬಿಸಾಡಿದ್ದ. ಶ್ರೀಮತಿ ಶೆಟ್ಟಿಯವರ ವ್ಯಾನಿಟಿ ಬ್ಯಾಗ್ ಹಾಗೂ ಚಪ್ಪಲಿಯನ್ನು ಒಲೆಯಲ್ಲಿ ಸುಟ್ಟು ಹಾಕಿದ್ದರು.


ಜೀವಂತ ದೇಹವನ್ನು ತುಂಡರಿಸಿದ್ದರು
ಶ್ರೀಮತಿ ಶೆಟ್ಟಿ ಅವರ ಹಣೆಗೆ ಜೋನಸ್ ಬಲವಾಗಿ ಹೊಡೆದಿದ್ದ. ಆಕೆ ನೆಲಕ್ಕೆ ಬಿದ್ದಾಗ ಆಕೆಯ ಮುಖ ಹಾಗೂ ಗಲ್ಲಕ್ಕೆ ಹೊಡೆದು ಪ್ರಜ್ಞಾಹೀನಳನ್ನಾಗಿಸಿದ್ದ. ಬಳಿಕ ವಿಕ್ಟೋರಿಯಾಳ ಸಹಾಯದಿಂದ ಕೋಣೆಯಲ್ಲಿ ಮಲಗಿಸಿ, ಶ್ರೀಮತಿ ಶೆಟ್ಟಿಯವರು ಚಲಾಯಿಸಿಕೊಂಡು ಬಂದ್ದಿ ಸ್ಕೂಟರನ್ನು ನಾಗುರಿಗೆ ಕೊಂಡೊಯ್ದು ರಸ್ತೆ ಬದಿ ನಿಲ್ಲಿಸಿ ಮನೆಗೆ ಬಂದಿದ್ದ. ಬಳಿಕ ದೇಹವನ್ನು ಬಚ್ಚಲು ಮನೆಗೆ ಎಳೆದುಕೊಂಡು ಹೋಗಿ ಮರದ ಹಲಗೆಯ ಮೇಲಿಟ್ಟು ಹರಿತವಾದ ಕತ್ತಿಯಿಂದ ತುಂಡುಗಳನ್ನಾಗಿ ಮಾಡಿದ್ದ. ಈ ರೀತಿ ತುಂಡು ಮಾಡುವಾಗಲೂ ಶ್ರೀಮತಿ ಅವರ ಪ್ರಾಣ ಹೋಗಿರಲಿಲ್ಲ. ಆದರೂ ಪಾಪಿಗಳು ವಿಕೃತಿ ಮೆರೆದಿದ್ದರು. ಸಾಕ್ಷೃ ನಾಶ ಮಾಡುವ ಉದ್ದೇಶದಿಂದ ಈ ರೀತಿ ತುಂಡುಗಳನ್ನಾಗಿ ಮಾಡಿ ಎಲ್ಲೆಂದರಲ್ಲಿ ಎಸೆದಿದ್ದರು.


ತನಿಖೆ, ವಿಚಾರಣೆ, ಶಿಕ್ಷೆ
ಕದ್ರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.
ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು 1ನೇ ಮತ್ತು 2 ಆರೋಪಿಗಳಿಗೆ ಐಪಿಸಿ 302 ಜತೆ 34 (ಸಮಾನ ಉದ್ದೇಶದ ಕೊಲೆ) ಜೀವಾವಧಿ ಶಿಕ್ಷೆ ಹಾಗೂ ತಲಾ 25ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 1ವರ್ಷ ಸಾದಾ ಸಜೆ, ಐಪಿಸಿ 201ರಡಿ (ಸಾಕ್ಷೃ ನಾಶ) 7ವರ್ಷಗಳ ಸಾದಾ ಸಜೆ ಮತ್ತು ತಲಾ 5 ಸಾವಿರ ರೂ. ದಂಡ, ದಂಡ ತೆರಲು ವಿಫಲವಾದಲ್ಲಿ 3 ತಿಂಗಳ ಸಾದಾ ಸಜೆ, ಐಪಿಸಿ 392 ಜತೆಗೆ 34ರಡಿ (ಸುಲಿಗೆ)ಯಲ್ಲಿ 5ವರ್ಷಗಳ ಸಾದಾ ಶಿಕ್ಷೆ ಹಾಗೂ ತಲಾ 5ಸಾವಿರ ರೂ. ದಂಡ, ದಂಡ ಪಾವತಿಸುವಲ್ಲಿ ವಿಫಲನಾದರೆ 6 ತಿಂಗಳ ಸಾದಾ ಸಜೆ ವಿಧಿಸಿದೆ. 3ನೇ ಆರೋಪಿಗೆ ಐಪಿಸಿ 414ರಡಿ (ಆಶ್ರಯ)ಯಲ್ಲಿ ಆರೂವರೆ ತಿಂಗಳು ಸಾದಾ ಸಜೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.


ದಂಡದ ಮೊತ್ತದಲ್ಲಿ ಶ್ರೀಮತಿ ಶೆಟ್ಟಿ ಅವರ ತಾಯಿಗೆ 75 ಸಾವಿರ ರೂ. ಪರಿಹಾರ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆಯಡಿಯಲ್ಲಿ ಪರಿಹಾರ ನೀಡಬೇಕೆಂದು ತೀರ್ಪಿನಲ್ಲಿ ನಿರ್ದೇಶನ ನೀಡಲಾಗಿದೆ.
ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕ ಮಹೇಶ್ ಎಂ. ತನಿಖೆ ಕೈಗೊಂಡಿದ್ದರು. ಫಾರೆನ್ಸಿಕ್ ವಿಭಾಗದ ವೈದ್ಯಾಧಿಕಾರಿ ಡಾ.ಜಗದೀಶ್ ರಾವ್ ಮೃತದೇಹ ಮರಣೋತ್ತರ ವರದಿ ನೀಡಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.


ಮರಣದಂಡನೆಗೆ ಹೈಕೋರ್ಟ್‌ಗೆ ಮೇಲ್ಮನವಿ
ಆರೋಪಿಗಳಾದ ಜೋಸನ್ ಸ್ಯಾಮ್ಸನ್ ಮತ್ತು ವಿಕ್ಟೋರಿಯಾ ಮಥಾಯಿಸ್ ಶ್ರೀಮತಿ ಶೆಟ್ಟಿ ಅವರನ್ನು ಕೊಲೆಗೈದು 29 ತುಂಡುಗಳನ್ನಾಡಿ ಮಾಡಿ ನಗರದ ವಿವಿಧ ಕಡೆ ಬಿಸಾಡಿದ್ದರು. ಇದು ಭೀಭತ್ಸ, ತೀರಾ ಅಪರೂಪದ ಪ್ರಕರಣವಾಗಿದ್ದು, 1ನೇ ಆರೋಪಿಗೆ ಮರಣದಂಡನೆ ಶಿಕ್ಷೆ ನೀಡುವ ನಿರೀಕ್ಷೆಯಿತ್ತು. ಆದರೆ ಜೀವಾವಧಿ ಶಿಕ್ಷೆ ವಿಧಿಸಿದ ಕಾರಣ 1ನೇ ಆರೋಪಿಗೆ ಮರಣ ದಂಡನೆ ಹಾಗೂ 3ನೇ ಆರೋಪಿಗೆ ವಿಷಯ ಗೊತ್ತಿದ್ದರೂ ಮುಚ್ಚಿಟ್ಟ ಕಾರಣ ತೀರ್ಪು ಪ್ರತಿ ಸಿಕ್ಕ ಬಳಿಕ ಹೆಚ್ಚುವರಿ ಶಿಕ್ಷೆ ನೀಡುವಂತೆ ಸರ್ಕಾರದ ಮೂಲಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ನಿರ್ಧರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net