

ಮಂಗಳೂರು: ಪರಿಸರ, ವಾಹನ ದಟ್ಟಣೆ ಸಮಸ್ಯೆ ನಿವಾರಿಸಲು ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ಯೋಜನೆ ರೂಪಿಸಿರುವುದು ಇತರ ಸಂಘ ಸಂಸ್ಥೆಗಳಿಗೆ ಮಾದರಿ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಪುರಭವನದಲ್ಲಿ ಭಾನುವಾರ ಭರವಸೆ ಹೆಜ್ಜೆ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಮಾದರಿ ವಾರ್ಡ್ ರೂಪಿಸಲು ಹೊರಟಿರುವುವ ಸಂಸ್ಥೆಗೆ ಪೂರ್ಣ ಸಹಕಾರ ನೀಡಲು ಬದ್ಧ ಎಂದವರು ಹೇಳಿದರು.
ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮನಂದ ಸ್ವಾಮೀಜಿ ಅವರು ಉದ್ಘಾಟಿಸಿದರು. ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ವಿನೂತನವಾಗಿ ಯೋಜನೆ ಮತ್ತು ಯೋಚನೆ ಮಾಡಿಕೊಂಡು ಸಮಾನ ಮನಸ್ಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ನಾಗರಿಕ ಸಮಾಜವನ್ನು ಒಗ್ಗೂಡಿಸಿ ಇಂತಹ ಒಂದು ಉತ್ತಮ ಕಾರ್ಯಕ್ರಮ ಸಂಘಟಿಸಿರುವುದು ಶ್ಲಾಘನೀಯ ಎಂದರು.
ಶಾಸಕ ಡಿ .ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರು ನಗರದಲ್ಲಿ ತ್ಯಾಜ್ಯ ನಿರ್ವಹಣೆಯು ಒಂದು ದೊಡ್ಡ ಸಮಸ್ಯೆಯಾಗಿತ್ತು. ದಿನಂಪ್ರತಿ ಇದು ಮಹಾನಗರ ಪಾಲಿಕೆಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಈ ಸಮಸ್ಯೆ ಕೇವಲ ಸರ್ಕಾರದ ಸಮಸ್ಯೆ ಅಲ್ಲ ಸಮುದಾಯದ ಸಮಸ್ಯೆ ಎಂದು ತಿಳಿದು ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ಭರವಸೆಯ ಹೆಜ್ಜೆ ಎಂಬ ಕಾರ್ಯಕ್ರಮದ ಮುಖಾಂತರ ಎಲ್ಲ ಸಂಘ ಸಂಸ್ಥೆಗಳಿಗೂ ಪ್ರೇರಣೆ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ನಾಗರಿಕ ಸಮಾಜದಲ್ಲಿ ಒಂದು ಉತ್ತಮವಾದ ಕಾರ್ಯ ಎಂದರು.
ಕೆ.ಎಸ್.ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ದಿಲೀಪ್ ಕುಮಾರ್ ಕೆ. ಶುಭ ಹಾರೈಸಿದರು.
ಟ್ರಸ್ಟ್ ಅಧ್ಯಕ್ಷ ಸೀತಾರಾಮ ಎ ಅಧ್ಯಕ್ಷತೆ ವಹಿಸಿದ್ದರು. ಭಜನಾ ಮಂಡಳಿಯನ್ನು ಸ್ಥಾಪಿಸಿ ಧಾರ್ಮಿಕ ಕ್ಷೇತ್ರದಲ್ಲಿ ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದಿನ ಕಾರ್ಯ ಯೋಜನೆಯಾಗಿ ಟ್ರಸ್ಟನ್ನು ಸ್ಥಾಪಿಸಿ ಆರೋಗ್ಯಕರ ಮತ್ತು ಸ್ವಚ್ಛ ಸಮಾಜದ ನಿರ್ಮಾಣದ ಆಶಯವನ್ನು ಇರಿಸಿಕೊಂಡು ಇಂದು ಸಂಘ-ಸಂಸ್ಥೆಗಳ ಜೊತೆಗೆ ಸಂವಾದ ಕಾರ್ಯಕ್ರಮವನ್ನು ಜಾಗೃತ ಜವಾಬ್ದಾರಿತ ಸಮಾಜಕ್ಕಾಗಿ ಪ್ರಯತ್ನಿಸುತ್ತಿದೆ ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರ್ ಮತ್ತು ಪ್ರತಿ ಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಉಪಸ್ಥಿತರಿದ್ದರು. ಟ್ರಸ್ಟ್ ನಡೆಸಿದ 5585 ಮನೆಗಳ ಹಸಿ ಮತ್ತು ಒಣ ತ್ಯಾಜ್ಯದ ಅಧ್ಯಯನದ ವರದಿಯನ್ನು ಮತ್ತು ಮುಂದಿನ ಹಂತದಲ್ಲಿ ತ್ಯಾಜ್ಯ ನಿರ್ವಹಣೆಯ ಸಲಹೆಯ ಮನವಿಯನ್ನು ಮೇಯರ್ ಅವರಿಗೆ ಸಲ್ಲಿಸಲಾಯಿತು
ಟ್ರಸ್ಟಿನ ಉಪಾಧ್ಯಕ್ಷ ಡಾ. ಪ್ರವೀಣ್ ಕೆ. ಸ್ವಾಗತಿಸಿದರು. ಟ್ರಸ್ಟ್ ಸಲಹೆಗಾರರಾದ ಡಾ. ನಯನ ವಂದಿಸಿದರು. ಅಭಿಷೇಕ್ ಶೆಟ್ಟಿ ನಿರೂಪಿಸಿದರು.