ಮಂಗಳೂರು ಕ್ರೀಡಾ ಸ್ಪೂರ್ತಿ ಮೆರೆದ ಭಿನ್ನ ಸಾಮರ್ಥ್ಯದ ಮಕ್ಕಳು

mnf-nov9-sports2
Published on

ಮಂಗಳೂರು: ಪೂರ್ಣ ಅಂಧತ್ವ ಇದ್ದರೂ ಭಾರದ ಗುಂಡು ಎಸೆದರು, ಕೈಯ ನ್ಯೂನತೆ ಹೊಂದಿದ್ದರೂ ಉದ್ದ ಜಿಗಿತ, 100 ಮೀ., 50 ಮೀ. ಓಟ ಓಡಿದರು. ಕಾಲಿನ ನ್ಯೂನತೆ ಇದ್ದರೂ ಜಾವೆಲಿನ್ ಎಸೆದರು, ಶ್ರವಣದೋಷ ಇದ್ದವರು ಭಾರದ ಗುಂಡು, ಜಾವೆಲಿನ್ ಎಸೆದರು, ಓಟ ಓಡಿದರು. ಕೆಲವರು ಪದಕ ಪಡೆದರು, ಇನ್ನು ಕೆಲವರು ಪ್ರತಿ ಸ್ಪರ್ಧಿಗೆ ತೀವ್ರ ಸ್ಫರ್ಧೆ ನೀಡಿ ನೋಡುಗರ ಹುಬ್ಬೇರಿಸಿದರು.

ಇದು ಮಂಗಳಾ ಕ್ರೀಡಾಂಗಣದಲ್ಲಿ ಶನಿವಾರ ಲಯನ್ಸ್ ಕ್ಲಬ್ ವೆಲೆನ್ಸಿಯಾ ಮಂಗಳೂರು, ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ಹಾಗೂ ದ.ಕ. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ವಲಯ ಮಟ್ಟದ ಸ್ಪೆಷಲ್ ಒಲಿಂಪಿಕ್ಸ್‌ನಲ್ಲಿ ಕಂಡು ಬಂದ ದೃಶ್ಯ.

ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸುಮಾರು 400 ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳು ಪಾಲ್ಗೊಂಡರು. ಲಯನ್ಸ್ ಜಿಲ್ಲೆ 317 ವೈಸ್ ಗವರ್ನರ್ ಕೆ. ಅರವಿಂದ್ ಶೆಣೈ ಸ್ಪೆಷಲ್ ಒಲಿಂಪಿಕ್ಸ್ ಉದ್ಘಾಟಿಸಿದರು. ದ.ಕ. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ಪ್ರದೀಪ್ ಡಿಸೋಜ ಮುಖ್ಯ ಅತಿಥಿಯಾಗಿದ್ದರು.

ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ಉಪಾಧ್ಯಕ್ಷ ರೂಪ್ ಸಿಂಗ್, ಖಜಾಂಚಿ ಆನಂದ ಡಿ.ಸಿ., ಐಡಿ ಸ್ಪೆಷಲ್ ಡೆಸ್ಕ್ ಶಾಂತಳಾ ಭಟ್, ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಲಯನ್ಸ್ ಕ್ಲಬ್ ಖಜಾಂಚಿ ಸಿರಿಲ್ ಜೀವನ್ ಉಪಸ್ಥಿತರಿದ್ದರು.

ಮಂಗಳೂರು ವಾಲೆನ್ಸಿಯಾ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲೆಸ್ಲಿ ಡಿಸೋಜ ಸ್ವಾಗತಿಸಿದರು. ಲಯನ್ಸ್ ಕ್ಲಬ್ ವೆಲೆನ್ಸಿಯಾ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯೊಂದಿಗೆ 25 ವರ್ಷಗಳಿಂದ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುತ್ತಿರುವ ಬಗ್ಗೆ ವಿವರಿಸಿದರು. ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ಕ್ರೀಡಾ ನಿರ್ದೇಶಕ ನಾರಾಯಣ್ ಶೆರಿಗಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಆಸ್ವಾಲ್ಡ್ ಡಿಕುನ್ಹಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net