

ಮಂಗಳೂರು: ನೃತ್ಯ, ಯಕ್ಷಗಾನ, ನಾಟಕ ಮುಂತಾದ ಕಲೆಗಳು ಗುರು ಪರಂಪರೆಯನ್ನು ಉಳಿಸಿ, ಶ್ರೀಮಂತಗೊಳಿಸಿವೆ ಎಂದು ಉಡುಪಿ ರಾಧಾಕೃಷ್ಣ ನೃತ್ಯನಿಕೇತನ ಕೇಂದ್ರದ ವಿದುಷಿ ವೀಣಾ ಎಂ.ಸಾಮಗ ಹೇಳಿದರು.
ಸೌರಭ ಸಂಗೀತ ನೃತ್ಯ ಕಲಾ ಪರಿಷತ್ ಮಂಗಳೂರು ಇದರ 33ನೇ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಚಿಣ್ಣರ ನೃತ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಯೂ ಟ್ಯೂಬ್ ನೋಡಿ ಕಲಿಯುವುದಕ್ಕಿಂತ ಗುರುಗಳ ಮೂಲಕ ಕಲಿಯುವ ವಿದ್ಯೆ ಶಾಶ್ವತ. ನಿರ್ಲಿಪ್ತ ಮನಸ್ಸಿನಿಂದ ಮಾಡುವ ನಾಟ್ಯ ದೇವತೆ ನಟರಾಜನನ್ನು ತಲುಪುತ್ತದೆ. ಎಲ್ಲಾ ಮಕ್ಕಳು ಚೆನ್ನಾಗಿ ನೃತ್ಯ ಮಾಡಿದ್ದಾರೆ. ಹಿಂದೆ ಗುರು, ಮುಂದೆ ಗುರಿ ಇದ್ದಾಗ ಯಶಸ್ಸು ಸಾಧ್ಯ ಎಂದರು.
ಉರ್ವ ಸಂಜೀವಿನಿ ಹೋಲಿಸ್ಟಿಕ್ ವೆಲ್ ನೆಸ್ ಕೇಂದ್ರದ ರೇವತಿ ಸನಿಲ್ ಅತಿಥಿಯಾಗಿದ್ದರು. ನೃತ್ಯ ಜೀವನ ಕಲೆ ಮತ್ತು ಬದುಕಿನಲ್ಲಿ ಜೀವನ ಮೌಲ್ಯ ಕಲಿಸುತ್ತದೆ. ಈ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಲು ಸಾಧ್ಯ. ನೃತ್ಯ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ಹಿತಕಾರಿಯಾಗಿದೆ ಎಂದರು.
ಉರ್ವ ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ಯದರ್ಶಿ ಶ್ರೀಧರ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಸೌರಭ ಮಂಗಳೂರಿನ ಅಗ್ರಗಣ್ಯ ನೃತ್ಯ ಸಂಸ್ಥೆ. ಮಕ್ಕಳು ನೃತ್ಯದ ಮೂಲಕ ಸ್ವರ್ಗಲೋಕ ಸೃಷ್ಟಿ ಮಾಡಿದ್ದಾರೆ. ಇಂದಿನ ಮಕ್ಕಳಿಗೆ ಧರ್ಮ ಶಿಕ್ಷಣದ ಅವಶ್ಯಕತೆ ಇದೆ. ಹೆತ್ತವರು ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದರು.
ಸೌರಭ ಸಂಗೀತ ನೃತ್ಯ ಕಲಾ ಪರಿಷತ್ ನ ಅಧ್ಯಕ್ಷ ಕೆ.ರಾಮನ್, ಆಶಾ ರಾವ್, ಬಬಿತಾ ಕೃಷ್ಣ ಉಪಸ್ಥಿತರಿದ್ದರು. ನಿರ್ದೇಶಕಿ ಡಾ.ಶ್ರೀವಿದ್ಯ ಮುರಳೀಧರ ಸ್ವಾಗತಿಸಿದರು. ಕಾರ್ಯದರ್ಶಿ ಶಾರದಾ ರಾಮನ್ ವಂದಿಸಿದರು. ಪ್ರಾಧ್ಯಾಪಕಿ ಡಾ.ವಿದ್ಯಾ ಶೇಡಿಗುಮ್ಮೆ ಕಾರ್ಯಕ್ರಮ ನಿರೂಪಿಸಿದರು.
ಚಿಣ್ಣರ ನೃತ್ಯೋತ್ಸವದಲ್ಲಿ ಸುಮಾರು 150 ವಿದ್ಯಾರ್ಥಿಗಳು ಪಾಲ್ಗೊಂಡು ಭರತನಾಟ್ಯ ಹಾಗೂ ಲಘು ಶಾಸ್ತ್ರೀಯ ನೃತ್ಯ ಪ್ರಸ್ತುತಪಡಿಸಿದರು.