

ಮಂಗಳೂರು: ಮಂಗಳೂರು ನಗರ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 1401 ಮಂದಿಗೆ ಮನೆಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗಿದೆ. ಏ.15,16 ಹಾಗೂ 17ರಂದು ಮನೆ ಮತದಾನ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಗಿರೀಶ್ ನಂದನ್ ಎಂ. ತಿಳಿಸಿದ್ದಾರೆ.'
ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಮಂಗಳೂರು ನಗರ ದಕ್ಷಿಣ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರ ದಕ್ಷಿಣದಲ್ಲಿ ಈಗಾಗಲೇ 2,52,583 ಮಂದಿ ಮತದಾರರಿದ್ದು, ಇದರಲ್ಲಿ 1,20,575(ಪುರುಷರು) ಹಾಗೂ 1,31,958(ಮಹಿಳೆಯರು) ಹಾಗೂ 50 ಇತರ ಮತದಾರರು ಇದ್ದಾರೆ. ಈಗಾಗಲೇ 85 ದಾಟಿದ ಹಾಗೂ ವಿಕಲಚೇತನರಿಗೆ ಮನೆ ಮತದಾನಕ್ಕೆ 1401 ಮಂದಿಯನ್ನು ಗುರುತಿಸಲಾಗಿದ್ದು, ಇದರಲ್ಲಿ 1310 ಮಂದಿ ಹಿರಿಯ ಮತದಾರರು ಹಾಗೂ 91 ಮಂದಿ ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ ಎಂದರು.
ಏ.15 ಹಾಗೂ 16ರಂದು ಮನೆಮನೆಗೆ ಮೊದಲ ಭೇಟಿ ನಡೆದರೆ, ಏ.17ರಂದು ಎರಡನೇ ಭೇಟಿ ನೀಡಲಾಗುತ್ತದೆ. ಈಗಾಗಲೇ ಬಿಎಲ್‌ಒಗಳ ಮೂಲಕ ಸಂಬಂಧಪಟ್ಟ ಮತದಾರರಿಗೆ ಮಾಹಿತಿ ನೀಡಲಾಗಿದೆ. ಅವಕಾಶ ಸಿಕ್ಕಿದ ಮತದಾರರಿಗೆ ಮೊದಲ ಭೇಟಿಯಲ್ಲಿ ಗೈರು ಅಗದೇ ಮತದಾನ ಮಾಡಲು ವಿನಂತಿ ಮಾಡಲಾಗಿದೆ. ಬೆಳಗ್ಗೆ 8ರಿಂದಲ್ಲೇ ಮನೆ ಮತದಾನಕ್ಕೆ ಚುನಾವಣಾ ಸಿಬ್ಬಂದಿಗಳು ಸಿದ್ಧವಾಗಿರುತ್ತಾರೆ. ಮಂಗಳೂರು ನಗರ ದಕ್ಷಿಣದಲ್ಲಿ ಅತೀ ಹೆಚ್ಚು ವೃದ್ದಾಶ್ರಮ ಸೇರಿದಂತೆ ಅನಾಥ ಆಶ್ರಮಗಳು ಇರುವುದರಿಂದ ಇಲ್ಲಿ ಮನೆ ಮತದಾನಕ್ಕೆ ಹೆಚ್ಚು ಮತದಾರರು ಇದ್ದಾರೆ. ಮತದಾನಕ್ಕೆ 23 ಸೆಕ್ಟರ್‌ಗಳನ್ನು ಮಾಡಲಾಗಿದೆ.
ಈಗಾಗಲೇ ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳ ತರಬೇತಿ ಕಾರ‌್ಯಕ್ರಮವೊಂದು ಮುಗಿದಿದೆ. ಮತ್ತೊಂದು ಏ.20ರಂದು ಉರ್ವ ಕೆನರಾ ಶಾಲೆಯಲ್ಲಿ ನಡೆಯಲಿದೆ. ಮಂಗಳೂರು ನಗರ ದಕ್ಷಿಣದಲ್ಲಿ 249 ಮತಗಟ್ಟೆಗಳು ಈ ಬಾರಿ ಇರಲಿದೆ. ಇದರಲ್ಲಿ 9 ವಿಶೇಷ ಬೂತ್‌ಗಳಿದ್ದು, 5 ಸಖಿ ಬೂತ್‌ಗಳು, ತಲಾ ಒಂದರಂತೆ ವಿಶೇಷ ಚೇತನರಿಗೆ, ಯುವಜನರಿಗೆ, ಧ್ಯೇಯ ಹಾಗೂ ಸಾಂಪ್ರಾದಾಯಿಕ ಬೂತ್‌ಗಳು ಇದೆ ಎಂದರು. ಈ ಸಂದರ್ಭ ಎಇಆರ್‌ಒ ದೇವೇಂದ್ರಪ್ಪ ಉಪಸ್ಥಿತರಿದ್ದರು.