ಮಂಗಳೂರು ಸ್ಮಾರ್ಟ್ ಸಿಟಿ ಉಳಿಕೆ ಕಾಮಗಾರಿ ಕಾಲಮಿತಿ ವಿಸ್ತರಣೆ

IMG-20250610-WA0036
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ನಿಗದಿಪಡಿಸಿರುವ ಕಾಲಮಿತಿಯನ್ನು ಸರ್ಕಾರ ಮತ್ತೆ ಇದೇ ಡಿಸೆಂಬರ್ ತನಕ ವಿಸ್ತರಣೆಗೊಳಿಸಿದೆ. ಪ್ರಸ್ತಾವಿತ ಕಾಮಗಾರಿ ಅನುಷ್ಠಾನ ಕಾಲಮಿತಿ ಕೆಲವು ಬಾರಿ ವಿಸ್ತರಣೆ ಬಳಿಕ ಕಳೆದ ಮಾರ್ಚ್ 31 ಕ್ಕೆ ಪೂರ್ಣಗೊಂಡಿತ್ತು.

ಬಹು ಕೋಟಿ ವೆಚ್ಚದ ನೇತ್ರಾವತಿ ನದಿಯ ಜಲಾಭಿಮುಖ ಪ್ರದೇಶ (ವಾಟರ್ ್ರಂಟ್) ಯೋಜನೆ, ಸುಲ್ತಾನ್ ಬತ್ತೇರಿ- ಬೆಂಗರೆ ಸೇತುವೆ ಸಹಿತ ಸ್ಮಾರ್ಟ್ ಸಿಟಿಯ ಪ್ರಮುಖ ಆರು ಕಾಮಗಾರಿಗಳು ಅರ್ಧದಲ್ಲೇ ಬಾಕಿ ಇರುವ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕಾಲಾವಕಾಶ ಒದಗಿಸಲಾಗಿದೆ.

ವಾಟರ್ ಫ್ರಂಟ್ ಯೋಜನೆ ಸೇರಿದಂತೆ ಇನ್ನೂ ಪ್ರಮುಖ ಆರು ಕಾಮಗಾರಿಗಳು ಪೂರ್ಣಗೊಳ್ಳಬೇಕಾಗಿದ್ದು, ಸುಮಾರು 80 ಕೋಟಿ ರೂ.ಗಳ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಸಂಬಂಧಿಸಿ ಆಯ್ಕೆಯಾದ ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ಮಂಗಳೂರು ಹಾಗೂ ದಾವಣಗೆರೆಯ ಕಾಮಗಾರಿಗಳ ಪೂರ್ಣಗೊಳಿಸುವ ಅವಧಿಯನ್ನು ಡಿಸೆಂಬರ್‌ವರೆಗೆ ವಿಸ್ತರಿಸಲಾಗಿದೆ.

ಸ್ಮಾರ್ಟ್ ಸಿಟಿಯಡಿ ಒಟ್ಟು 1000 ಕೋಟಿ ರೂ. (ಒಟ್ಟು 960 ಕೋಟಿರೂ. ಸಮಗ್ರ ಯೋಜನಾ ವೆಚ್ಚವಾಗಿರುತ್ತದೆ.)ಗಳ ಯೋಜನಾ ಮೊತ್ತದಲ್ಲಿ ಕೇಂದ್ರ ಸರ್ಕಾರದಿಂದ 453ಕೋಟಿರೂ. ಹಾಗೂ ರಾಜ್ಯದಿಂದ 463 ಕೋಟಿ ರೂ.ಗಳು ಬಿಡುಗಡೆಯಾಗಿದೆ.

105 ಕಾಮಗಾರಿಗಳಲ್ಲಿ ನೇತ್ರಾವತಿ ನದಿಯ ಜಲಾಭಿಮುಖ ಪ್ರದೇಶ (ವಾಟರ್ ಫ್ರಂಟ್ ಯೋಜನೆ)ದ ಅಭಿವೃದ್ಧಿಯ ಐದು ಪ್ಯಾಕೇಜ್‌ಗಳು, ಮಹಾಕಾಳಿಪಡ್ಪು - ಮೋರ್ಗನ್ ಗೇಟ್ ರಸ್ತೆ ಅಭಿವೃದ್ಧಿ, ಪಡೀಲ್- ಪಂಪ್‌ವೆಲ್ ರಸ್ತೆ, ಸುಲ್ತಾನ್ ಬತ್ತೇರಿ- ತಣ್ಣೀರುಬಾವಿ ಸೇತುವೆ, ಎಲ್‌ಇಡಿ ದೀಪ ಅಳವಡಿಕೆ ಕಾಮಗಾರಿ ಇನ್ನೂ ನಡೆಯುತ್ತಿದೆ.

ಉಳಿದಂತೆ ಕ್ಲಾಕ್ ಟವರ್, ಸ್ಮಾರ್ಟ್ ರಸ್ತೆ, ಸ್ಮಾರ್ಟ್ ಶೆಲ್ಟರ್, ಇ ಟಾಯ್ಲೆಟ್, ವೆನ್‌ಲಾಕ್ ಆಸ್ಪತ್ರೆಯ ಐಸಿಯು ವಿಭಾಗ ಮತ್ತು ಸರ್ಜಿಕಲ್ ಬ್ಲಾಕ್, ಇ- ಸ್ಕೂಲ್‌ಗಳು, ಕಮಾಂಡ್ ಕಂಟ್ರೋಲ್ ಸೆಂಟರ್, ಪಾದಾಚಿರ ಅಂಡರ್ ಪಾಸ್, ಮಂಗಳಾ ಕ್ರೀಡಾಂಗಣ ಅಭಿವೃದ್ಧಿ, ಕೆರೆಗಳ ಅಭಿವೃದ್ಧಿ, ಈಜುಕೊಳ ಮೊದಲಾದ ಕಾಮಗಾರಿಗಳು ಪೂರ್ಣಗೊಂಡಿವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ತಲಾ 500 ಕೋಟಿ ರೂ ಅನುದಾನದ ನೆರವಿನ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯ್ಕೆಯಾದ ದೇಶದ ಪ್ರಧಾನ ನಗರಗಳ ಮೊದಲ ಪಟ್ಟಿಯಲ್ಲಿ ಮಂಗಳೂರು ಇರಲಿಲ್ಲ. 2016 ರಲ್ಲಿ ಯೋಜನೆಗೆ ಆಯ್ಕೆಯಾಯಿತು. ಕಾಮಗಾರಿ ಪೂರ್ಣಗೊಳಿಸಲು ಐದು ವರ್ಷ ಕಾಲಮಿತಿ ನಿಗದಿಪಡಿಸಲಾಗಿತ್ತು.

2015-16ರಲ್ಲಿ ಆರಂಭವಾದ ಈ ಯೋಜನೆ ಕಾಮಗಾರಿಗಳನ್ನು 2022, ಮಾರ್ಚ್‌ನಲ್ಲಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿತ್ತು. ಆದರೆ ಪ್ರಥಮ ಮೂರು ವರ್ಷಗಳು ಅಧಿಕಾರಿಗಳು ಮತ್ತು ಸರ್ಕಾರದ ನಡುವೆ ಗೊಂದಲ, ಹೊಂದಾಣಿಕೆ ಕೊರತೆ ಸಮಸ್ಯೆಯಲ್ಲೇ ಕಳದುಹೋಗಿದ್ದವು. ಆರಂಭಿಕ ದಿನಗಳಲ್ಲಿ ಒಟ್ಟು ಯೋಜನೆಯ ಸ್ವರೂಪದ ಬಗ್ಗೆಯೇ ಯಾರಲ್ಲೂ ಸ್ಪಷ್ಟತೆ ಇದ್ದಂತೆ ಇರಲಿಲ್ಲ. ಬಳಿಕ ಯೋಜನೆಯು ವೇಗ ಪಡೆದಿತ್ತು.

ಕರೊನಾ ಕಾರಣ ಒಪ್ಪಿ ಸರ್ಕಾರ ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳಿಸಲು 2023 ಮಾರ್ಚ್ ತನಕ ಕಾಲಾವಕಾಶ ಒದಗಿಸಿತ್ತು. ಈ ಅವಧಿಯಲ್ಲಿ ಕೂಡ ಕಾಮಗಾರಿ ಪೂರ್ಣಗೊಳ್ಳದೆ ಕಾಲಮಿತಿ ವಿಸ್ತರಣೆಗೊಳಿಸಲಾಗಿತ್ತು.

-----------

ಮಂಗಳೂರು ಸ್ಮಾರ್ಟ್ ಸಿಟಿಯ ಬಹುಪಾಲು ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲವು ಮಾತ್ರ ಮುಕ್ತಾಯದ ಹಂತದಲ್ಲಿದೆ. ಬಾಕಿ ಕಾಮಗಾರಿ ಪೂರ್ಣಗೊಳಿಸಲು ನಿಗದಿಪಡಿಸಿದ ಕಾಲಮಿತಿಯನ್ನು ಸರ್ಕಾರ ಡಿಸೆಂಬರ್ ತನಕ ವಿಸ್ತರಿಸಿದೆ. ಆದ್ದರಿಂದ ಉಳಿಕೆ ಕಾಮಗಾರಿ ಪೂರ್ಣಗೊಳಿಸಲು ಯಾವುದೇ ಸಮಸ್ಯೆಯಾಗುವುದಿಲ್ಲ.

* ಅರುಣ್ ಪ್ರಭ ಕೆ.ಎಸ್

ಜನರಲ್ ಮ್ಯಾನೇಜರ್ (ಆಡಳಿತ), ಮಂಗಳೂರು ಸ್ಮಾರ್ಟ್ ಸಿಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net