

ಮಂಗಳೂರು: ನಗರದ ಶರವು ಶ್ರೀ ಮಹಾಗಣಪತಿ ದೇವಳ ಸೇರಿದಂತೆ ಜಿಲ್ಲೆಯ ಗಣಪತಿ ಹಾಗೂ ಇತರ ಪ್ರಮುಖ ದೇವಳದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿ ಮಹೋತ್ಸವ ಮಂಗಳವಾರ ಸಂಭ್ರಮದಿಂದ ನಡೆಯಿತು. ಜಿಲ್ಲೆಯಾದ್ಯಂತ ಸಾವಿರಾರು ಮಂದಿ ಸಂಕಷ್ಟಹರ ವ್ರತಾಚರಣೆಗೈದರು.
ಶರವು ದೇವಸ್ಥಾನಕ್ಕೆ ಬೆಳಗ್ಗಿನಿಂದಲೇ ಭಕ್ತಾದಿಗಳ ದಂಡೇ ಹರಿದು ಬಂದಿತ್ತು. ದೇವರಿಗೆ ಗರಿಕೆ, ಹಿಂಗಾರ, ಹೂ ಅರ್ಪಿಸಿ, ಪಂಚಕಜ್ಜಾಯ, ಗಣಹೋಮ, ಅಪ್ಪದ ಪೂಜೆ ಸೇವೆ ಸಲ್ಲಿಸಿದರು. ಮಧ್ಯಾಹ್ನ ವೇಳೆ 11.45ರ ವೇಳಗೆ ದೇವರ ಗಣಹೋಮ, ಅಪ್ಪದ ಪ್ರಸಾದ ವಿತರಣೆ ನಡೆಯಿತು. ಶರವು ದೇವಳದ ದೇವಳದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸಿ, ಸುದೇಶ್ ಶಾಸಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭ ಎಸ್. ರಾಹುಲ್ ಶಾಸಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ದೇಗುಲಗಳಲ್ಲಿ ವಿಶೇಷ ಪೂಜೆ: ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಬಿಕರ್ನಕಟ್ಟೆ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಳ, ಗಣೇಶಪುರ ಮಹಾಗಣಪತಿ ದೇವಸ್ಥಾನ, ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳೂರು ಮಾರಿಯಮ್ಮ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ದೇವಳಗಳಲ್ಲಿ ಅಂಗಾರಕ ಸಂಕಷ್ಟಿ ವೃತಾಚರಣೆ ಅಂಗವಾಗಿ ವಿಶೇಷ ಪೂಜೆ ನಡೆಯಿತು.