ರಾಜಕೀಯದಲ್ಲಿ ಮಹಿಳಾ ದೌರ್ಜನ್ಯ ಆಗಿದ್ದರೆ ಅಕ್ಷಮ್ಯ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಸಿ.ಮಂಜುಳಾ ಹೇಳಿಕೆ

mng--5 Sep Manjula C
Published on

ಮಂಗಳೂರು : ರಾಜಕೀಯ ಪಕ್ಷದಲ್ಲಿ ಮಹಿಳಾ ದೌರ್ಜನ್ಯ ಆಗಿದ್ದರೆ ಅಕ್ಷಮ್ಯ. ಅಂಥವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಸಿ.ಮಂಜುಳಾ ಹೇಳಿದ್ದಾರೆ.


ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಲೈಂಗಿಕ ದೌರ್ಜನ್ಯ ಸದ್ದಿನ ಬೆನ್ನಲ್ಲೇ ರಾಜಕೀಯ ರಂಗದ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ರಾಜಕೀಯದ ಲೈಂಗಿಕ ದೌರ್ಜನ್ಯಗಳ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ದೌರ್ಜನ್ಯಗಳಾದಾಗ ಮಹಿಳೆಯರು ಹೊರಗೆ ಬಂದು ಅದನ್ನು ಪ್ರತಿಭಟಿಸಬೇಕು. ಮಹಿಳೆ ಯಾರ ಸರಕೂ ಅಲ್ಲ, ಅವಳು ಸಮಾಜಕ್ಕೋಸ್ಕರ ಕೆಲಸ ಮಾಡಬೇಕು ಎಂದು ರಾಜಕೀಯಕ್ಕೆ ಬರುತ್ತಾಳೆ. ಆಗ ಅವಳಿಗೆ ದೌರ್ಜನ್ಯ ಆದರೆ ಮೊದಲು ಅದನ್ನ ಪ್ರತಿಭಟಿಸಬೇಕು. ಅದನ್ನ ಬಹಿರಂಗ ಮಾಡದೇ ಅನುಭವಿಸೋದು ಮಹಿಳೆ ತನಗೆ ತಾನು ಮಾಡುವ ಅನ್ಯಾಯ ಎಂದರು.


ಲೈಂಗಿಕ ದೌರ್ಜನ್ಯ ರಾಜಕಾರಣದಲ್ಲಿದ್ದರೂ ಅದನ್ನ ಹೊರ ತಂದು ಹೋರಾಟ ಮಾಡಬೇಕು. ಒಂದು ರಾಜಕೀಯ ಪಕ್ಷ ಬೆಳೆಯುತ್ತಾ ಹೋದಂತೆ ಅದರಲ್ಲಿ ಎಲ್ಲಾ ರೀತಿಯ ಜನರೂ ಬರುತ್ತಾರೆ. ತನಿಖೆ ಆಗದಿದ್ದರೆ ಇವರ ಯಾವುದೇ ಅಟ್ಟಹಾಸ ನಿಲ್ಲೋದಿಲ್ಲ ಎಂದರು.


ದುರ್ಯೋಧನ, ದುಷ್ಯಾಸನರೂ ಇದ್ದಾರೆ:
ಸಿನಿಮಾ ರಂಗದ ಈ ನಡೆಯನ್ನ ನಾನು ಸ್ವಾಗತ ಮಾಡ್ತೇನೆ. ಎಲ್ಲಾ ಕಡೆ ದುರ್ಯೋಧನರೂ ಇರ್ತಾರೆ, ದುಷ್ಯಾಸನರೂ ಇದ್ದಾರೆ. ಕನ್ನಡ ಚಿತ್ರರಂಗದ ವಿಚಾರದಲ್ಲಿ ಇನ್ನೂ ಹೆಚ್ಚು ಕಲಾವಿದರು ಇದಕ್ಕೆ ಸಹಿ ಮಾಡಬೇಕು. ಕನ್ನಡ ಚಿತ್ರರಂಗದ ಈ ನಡೆಯನ್ನ ನಾನು ಸ್ವಾಗತ ಮಾಡುತ್ತೇನೆ ಎಂದರು.


ಸಮಿತಿ ರಚನೆಯಾಗಲಿ:
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೇವಲ 150 ಕಲಾವಿದರು ಇಲ್ಲ, ಸಾಕಷ್ಟು ಕಲಾವಿದರು ಇದ್ದಾರೆ. ಇದಕ್ಕೆ ಒಂದು ಸಮಿತಿ ರಚನೆ ಮಾಡಬೇಕು, ಜೊತೆಗೆ ಕಾರ್ಯ ಸ್ಥಳ ಕಮಿಟಿ ಗಟ್ಟಿಯಾಗಿರಬೇಕು. ಕಾರ್ಯ ಸ್ಥಳ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಇದನ್ನು ತನಿಖೆ ಮಾಡಬೇಕು. ಇಲ್ಲಿಯವರೆಗೂ ಹೆಣ್ಮಕ್ಕಳು ಅನುಭವಿಸಿದ್ದನ್ನ ಸಮಾಜದ ಮುಂದೆ ಬಹಿರಂಗಪಡಿಸಬೇಕು. ಹಾಲಿ ಹೈಕೋರ್ಟ್ ನ್ಯಾಯಾಧೀಶರ ಸುಪರ್ದಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಇದರ ಬಗ್ಗೆ ತನಿಖೆ ಮಾಡಲಿ ಎಂದರು.


ಕಾರ್ಕಳ ಪ್ರಕರಣ ದ್ವಂದ್ವ ನಿಲುವು ಇಲ್ಲ:
ಕಾರ್ಕಳದಲ್ಲಿ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಸಂಘಟನೆ ಯುವಕ ಭಾಗಿಯಾದ ಹಿನ್ನೆಲೆ ಬಿಜೆಪಿ ಸುಮ್ಮನಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ದ್ವಂದ್ವ ನಿಲುವು ಇಲ್ಲ. ಪಕ್ಷದಿಂದ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.
ಕರಾವಳಿ ಸೇರಿದಂತೆ ರಾಜ್ಯದೆಲ್ಲೆಡೆ ಮಹಿಳಾ ದೌರ್ಜನ್ಯ ಹೆಚ್ಚಾಗುತ್ತಿದ್ದು, ಗೃಹ ಇಲಾಖೆ ಮೌನ ವಹಿಸಿದೆ. ಗೃಹ ಸಚಿವರು ಯಾವುದೇ ಕ್ರಮ ವಹಿಸುತ್ತಿಲ್ಲ. ಇದರಿಂದಾಗಿ ಆರೋಪಿಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಮಂಜುಳಾ ಹೇಳಿದರು.


ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿ, ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net