

ಮಂಗಳೂರು: ಸಿಪಿಐ ಪಕ್ಷದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿಯ ಮಾಜಿ ಕಾರ್ಯದರ್ಶಿ ಬಿ.ಕೆ. ಕೃಷ್ಣಪ್ಪ (91) ಬುಧವಾರ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಕೃಷ್ಣಪ್ಪನವರು ಸಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಹಾಗೂ ರಾಜ್ಯ ಶಿಸ್ತು ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದರು. ಎಐಟಿಯುಸಿಯ ಜಿಲ್ಲಾ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಕೌನ್ಸಿಲ್‌ನ ಸದಸ್ಯರಾಗಿ ಕೆಲಸ ಮಾಡಿ ಅಪಾರ ಕಾರ್ಮಿಕರ ಕಣ್ಮಣಿಯಾಗಿದ್ದರು. ಹಂಚಿನ ಕಾರ್ಖಾನೆಯ ಉದ್ಯೋಗಿಯಾಗಿ ಕೆಲಸ ಪ್ರಾರಂಭಿಸಿದ ಇವರು ಅಂದು ಕಾರ್ಮಿಕ ವರ್ಗವನ್ನು ಸಂಘಟಿಸುತ್ತಿದ್ದ ಬಿ.ವಿ. ಕಕ್ಕಿಲ್ಲಾಯ, ಸಿಂಪ್ಸನ್ ಸೋನ್ಸ್, ಶಾಂತಾರಾಮ ಪೈ, ಲಿಂಗಪ್ಪ ಸುವರ್ಣ, ಮೋನಪ್ಪ ಶೆಟ್ಟಿ ಮುಂತಾದವರ ಒಡನಾಡಿಯಾಗಿ ಕಾರ್ಮಿಕ ವರ್ಗಕ್ಕಾಗಿ ದುಡಿದರು.
ಮಂಗಳೂರು ಮಹಾಪಾಲಿಕೆಯ ಪಂಜಿಮೊಗರು ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಅಲ್ಲಿನ ಜನರು ಇಂದಿಗೂ ಅವರ ಕೊಡುಗೆಗಳನ್ನು ಸ್ಮರಿಸುತ್ತಿದ್ದಾರೆ.