

ಮಂಗಳೂರು: ಮೈದಾನದ ತುಂಬೆಲ್ಲಾ ಹಿರಿ ಜೀವಿಗಳ ಕಲರವ. 60 ರಿಂದ 90 ವರ್ಷದ ಹಿರಿಯರು ಅಲ್ಲಿದ್ದರು. ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಮುಪ್ಪಾಗಿಲ್ಲ ಎಂಬುದನ್ನು ಪಾದರಸದಂತೆ ಓಡಾಡಿ ನವ ಚೈತನ್ಯದಿಂದ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಯುವಕರನ್ನು ನಾಚಿಸುವಂತೆ ಮಾಡಿದರು.
ನಗರದ ಬಲ್ಮಠ ಮೈದಾನದಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಚಲೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಂಗಳೂರು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಫರ್ಧೆಯಲ್ಲಿ ಕಂಡು ಬಂದ ದೃಶ್ಯ.
ಬಡತನ, ಅನಾರೋಗ್ಯ ಹಾಗೂ ಏಕಾಂಗಿತನ ಪ್ರಸ್ತುತ ಹಿರಿಯರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ. ನಗರ ಪ್ರದೇಶದಲ್ಲಿ ಬಹುತೇಕ ಮಕ್ಕಳು ಹಿರಿಯರನ್ನು ಒಂಟಿಯಾಗಿ ಬಿಟ್ಟು ಉದ್ಯೋಗಕ್ಕಾಗಿ ದೂರದ ಊರಿಗೆ ತೆರಳುತ್ತಾರೆ. ಈ ಸಂದರ್ಭ ಹಿರಿ ಜೀವಗಳು ಮಾನಸಿಕ ಖಿನ್ನತೆಗೆ ಒಳಗಾಗುವ ಸಂಭವ ಹೆಚ್ಚು. ಏಕಾಂಗಿಯಾಗಿರುವಾಗ ಆಹಾರ, ವೈದ್ಯಕೀಯ ನಿಗಾ, ಮನೆಯ ಕೆಲಸ, ಭದ್ರತೆ, ಹಣಕಾಸು, ಪ್ರಯಾಣ ಮೊದಲಾದ ಸಮಸ್ಯೆಗಳು ಕಾಡುವುದು ಸಹಜ. ಇಂತಹ ಹಿರಿಯರಿಗಾಗಿ ಅವರಲ್ಲಿ ನವ ಚೈತನ್ಯ ತುಂಬುವ ನಿಟ್ಟಿನಲ್ಲಿ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕ್ರೀಡಾಕೂಟ ಆಯೋಜಿಸುತ್ತಿದೆ.
ಏನೆಲ್ಲಾ ಸ್ಪರ್ಧೆ?
ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ವೇಗದ ನಡಿಗೆ, ಏಕಪಾತ್ರಾಭಿನಯ, ಬಕೆಟ್‌ಗೆ ರಿಂಗ್ ಹಾಕುವುದು, ಸಂಗೀತ ಕುರ್ಚಿ, ಡ್ರಾಯಿಂಗ್ ಮೊದಲಾದ ಸ್ಪರ್ಧೆಗಳಲ್ಲಿ ಸುಮಾರು 100ಕ್ಕೂ ಅಧಿಕ ಹಿರಿಯರು ಸ್ಪೂರ್ತಿಯಿಂದ ಪಾಲ್ಗೊಂಡರು. ಬಳಿಕ ಒಳಾಂಗಣ ಕ್ರೀಡೆ, ನೃತ್ಯ, ಸಂಗೀತ ಮುಂತಾದ ಮನೋರಂಜನಾ ಕಾರ್ಯಕ್ರಮ ನಡೆಯಿತು.
200 ಮಂದಿ ಭಾಗಿ
ಉದ್ಯೋಗದಿಂದ ನಿವೃತ್ತರಾಗಿ ವಿಶ್ರಾಂತ ಜೀವನ ನಡೆಸುತ್ತಿರುವ ಹಿರಿಯ ನಾಗರಿಕರಿಗೆ ಸಂಘಟಕರು ಉತ್ತಮ ಅವಕಾಶ ಮಾಡಿಕೊಟ್ಟಿದ್ದಾರೆ. ದೇಹಕ್ಕೆ ವಯಸ್ಸಾದರೂ, ಮನಸ್ಸಿಗೆ ವಯಸ್ಸಾಗುವುದಿಲ್ಲ ಎಂಬುದು ಇಲ್ಲಿ ಸಾಬೀತಾಯಿತು. ಸುಮಾರು 200 ರಷ್ಟು ಹಿರಿಯರು ಕ್ರೀಡಾಂಗಣದಲ್ಲಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ಮೊದಲಾದ ಎಲ್ಲ ತಾಲೂಕುಗಳಿಂದ ಸ್ಪರ್ಧಿಗಳು ಆಗಮಿಸಿದ್ದರು.
ಉದ್ಘಾಟನೆ: ಹಿರಿಯ ನಾಗರಿಕರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ. ಜಿ. ಉದ್ಘಾಟಿಸಿದರು. ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕುಮಾರ್ ಮಳವಳ್ಳಿ, ಬಲ್ಮಠ ಕೆಟಿಸಿ ಪ್ರಾಂಶುಪಾಲ ಡಾ.ಎಚ್.ಎಂ.ವಾಟ್ಸನ್, ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಕೆ.ಎನ್.ಶಶಿಧರ, ಕಲಾವಿದೆ ಗೌರಿ ಕೆ. ಮಲ್ಯ ಉಪಸ್ಥಿತರಿದ್ದರು. ಜಯಪ್ರಕಾಶ್ ಸ್ವಾಗತಿಸಿದರು. ನಾಗರಾಳ್ ವಂದಿಸಿದರು.