ತಂತ್ರಜ್ಞಾನದ ಸವಾಲು ಎದುರಿಸಲು ಕಾನೂನು ಶಿಕ್ಷಣಕ್ಕೆ ಬಲ -- ಎಸ್‌ಡಿಎಂ ಕಾನೂನು ಕಾಲೇಜಿನ ‘ಸುವರ್ಣ ಪಥ’ದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶಯ

mng-dec14-sdm1
Published on

ಮಂಗಳೂರು: ಆಧುನಿಕ ತಂತ್ರಜ್ಞಾನದ ಸವಾಲು ಸಮರ್ಥವಾಗಿ ಎದುರಿಸಲು ಕಾನೂನು ಶಿಕ್ಷಣ ಬಲಗೊಳ್ಳಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಆಶಯ ವ್ಯಕ್ತಪಡಿಸಿದರು.

ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಶನಿವಾರ ಜರುಗಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವದ ಸಂಭ್ರಮ ‘ಸುವರ್ಣ ಪಥ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಚತುರ್ ದಾನಗಳಲ್ಲಿ ನ್ಯಾಯವೂ ಒಂದಾಗಿದ್ದು, ವೇದ ಹಾಗೂ ಉಪನಿಷತ್‌ಗಳು ಕೂಡಾ ಮಾನವತೆ, ಧರ್ಮ, ಕಾನೂನು ಪರಿಪಾಲನೆಯನ್ನು ಪ್ರತಿಪಾದಿಸುತ್ತವೆ. ನೈತಿಕತೆ, ನಿಯತ್ತು, ಸಾಮಾಜಿಕ ಬದ್ಧತೆ ಜೀವನದಲ್ಲಿ ಅಡಕವಾಗಿರಬೇಕು. ಯುವ ಪೀಳಿಗೆ ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆಗೆ ಒತ್ತು ನೀಡುವ ಜತೆಗೆ ಕಾನೂನು ಅರಿವನ್ನು ಹೊಂದಿರಬೇಕು ಎಂದರು.

ಕೇರಳ ಉಚ್ಚ ನ್ಯಾಯಾಲಯದ ನ್ಯಾಯಾಧೀಶ, ಎಸ್.ಡಿ. ಎಂ. ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ ನ್ಯಾ. ಮುರಳೀಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಜನಸಾಮಾನ್ಯರಿಗೆ ನ್ಯಾಯ ಒದಗಿಸುವಲ್ಲಿ ಆಧುನಿಕ ಸವಾಲುಗಳು ಕಾನೂನಿನ ವ್ಯಾಖ್ಯಾನದಲ್ಲಿಯೂ ಹಲವಷ್ಟು ಬದಲಾವಣೆಗೆ ಕಾರಣವಾಗಿದ್ದು, ಕಾನೂನು ವಿದ್ಯಾರ್ಥಿಗಳು ಈ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ತಮ್ಮ ಶಿಕ್ಷಣವನ್ನು ಕೇಂದ್ರೀಕರಿಸಬೇಕು.

ಪ್ರಜಾಪ್ರಭುತ್ವದ ಅಡಿಪಾಯಗಳಲ್ಲಿ ಒಂದಾದ ನ್ಯಾಯಾಂಗ ವ್ಯವಸ್ಥೆಯು ಸಂವಿಧಾನದ ಚೌಕಟ್ಟಿನಿಂದ ನಿಂಯತ್ರಿಸಲ್ಪಟ್ಟಿದೆ. ಅಂತಹ ಮಹತ್ತರವಾದ ಸಂವಿಧಾನದಿಂದಾಗಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವೂ ದೃಢವಾಗಿದೆ. 25 ವರ್ಷಗಳ ಹಿಂದೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಯಾಗಿದ್ದ ವೇಳೆ, ವಿದ್ಯುತ್ ಸಂಪರ್ಕದ ಕೊರತೆ, ನೀರಿನ ಸಮಸ್ಯೆ ಮೊದಲಾದ ಮೂಲಭೂತ ಸಮಸ್ಯೆಗಳ ಬಗ್ಗೆ ನ್ಯಾಯಕ್ಕಾಗಿ ಜನರ ಬೇಡಿಕೆಗಳನ್ನು ನೋಡುತ್ತಿದ್ದೆವು. ಆದರೆ ಈಗ ಬದಲಾದ ಕಾಲಘಟ್ಟದಲ್ಲಿ ಜನರ ಸಮಸ್ಯೆಗಳೂ ಬದಲಾಗಿವೆ. ಸೈಬರ್ ಕ್ರೈಂ, ಹಣದ ಸಮಸ್ಯೆ ಜನರನ್ನು ಬಹುವಾಗಿ ಕಾಡುತ್ತಿದೆ. ಆಧುನಿಕ ತಂತ್ರಜ್ಞಾನದ ಪರಿಣಾಮವಾಗಿ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ಸವಾಲು ನ್ಯಾಯಾಂಗದ ಮುಂದಿದೆ. ಈ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳು ಸಿದ್ಧಗೊಳ್ಳಬೇಕು ಎಂದವರು ಹೇಳಿದರು.

ಹಿರಿಯ ವಕೀಲರಾದ ಉದಯ ಹೊಳ್ಳ ಸಂಸ್ಥಾಪನಾ ದಿನದ ಉಪನ್ಯಾಸ ನೀಡಿದರು. ಧರ್ಮಾಧಿಕಾರಿಯಾಗಿದ್ದು ಸ್ವತಹ ಜನರ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ಕೆಲಸ ನಿರ್ವಹಿಸುತ್ತಾ ಬಂದಿರುವ ಡಾ. ವೀರೇಂದ್ರ ಹೆಗ್ಗಡೆಯವರು ಕಾನೂನು ಕಾಲೇಜು ಸ್ಥಾಪನೆಯ ಮೂಲಕ ಸಮಾಜಕ್ಕೆ ಬೆಳಕು ನೀಡುವ ದೀವಿಗೆಗಳಾಗಿ ಕೆಲಸ ಮಾಡುವ ವಕೀಲರನ್ನು ಸೃಷ್ಟಿಸುವ ಕಾರ್ಯವನ್ನು ಕಾನೂನು ಕಾಲೇಜಿನ ಮೂಲಕ ಮಾಡಿದ್ದಾರೆ. ಇದು ಡಾ. ವೀರೇಂದ್ರಹೆಗ್ಗಡೆಯವರ ದೃಷ್ಟಿಕೋನದ ಸಾಕ್ಷೃವಾಗಿದೆ ಎಂದು ಶ್ಲಾಘಿಸಿದರು.

ಕಾನೂನು ಎಂಬುದು ಸೇವೆಯನ್ನು ಆಧರಿಸಿದ ವೃತ್ತಿ ಎಂಬುದನ್ನು ಕಾನೂನು ವಿದ್ಯಾರ್ಥಿಗಳು ಅರಿತುಕೊಂಡು, ಭ್ರಷ್ಟಾಚಾರದಿಂದ ಹದಗೆಟ್ಟಿರುವ ಸಮಾಜದ ಮೌಲ್ಯ ವ್ಯವಸ್ಥೆಯನ್ನು ಎತ್ತಿಹಿಡಿಯುವ ಕಾರ್ಯವನ್ನು ಕಾನೂನು ಪದವೀಧರರು ನಿರ್ವಹಿಸಬೇಕಿದೆ. ನ್ಯಾಯಕ್ಕಾಗಿ ಪರಿತಪಿಸುವ ಜನರ ಕಣ್ಣೊರೆಸುವ ಅವಕಾಶವು ಕಾನೂನು ಪದವೀಧಕರಿಗೆ ಲಭ್ಯವಾಗಿದ್ದು, ಜಿಲ್ಲಾ ನ್ಯಾಯಾಲಗಳಲ್ಲಿ ಸೂಕ್ತವಾಗಿ ತಮ್ಮ ಕಾರ್ಯವೈಖರಿಯ ಮೂಲಕ ಸಮಾಜದ ಸಬಲೀಕರಣಕ್ಕೆ ಮುಂದಾಗುವಂತೆ ಅವರು ಕಾನೂನು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾಲೇಜಿನ ಮ್ಯಾಗಝೀನ್ ಅನಾವರಣಗೊಳಿಸಲಾಯಿತು. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಉಜ್ವರ ಅವರ ‘ಲೀಗಲ್ ಲಾಂಗ್ವೇಜ್ ಆ್ಯಂಡ್ ಜನರಲ್ ಇಂಗ್ಲಿಷ್’ ಪುಸ್ತಕವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.

ಕಾಲೇಜಿನ ಸಂಸ್ಥಾಪಕ ಡಾ.ಡಿ. ವೀರೇಂದ್ರ ಹೆಗ್ಗಡೆ, ನ್ಯಾ.ಮುರಳಿ ಕೃಷ್ಣ, ವಕೀಲ ಉದಯ ಹೊಳ್ಳ, ಪ್ರೊ.ಎ. ರಾಜೇಂದ್ರ ಶೆಟ್ಟಿ, ವಕೀಲ ರೋಹಿತ್ ರಾವ್ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ದೇವರಾಜ್ ಕೆ., ಶಿಕ್ಷಕ-ರಕ್ಷಕದ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್,ಸುಧಾಕರ ಪೈ ಮೊದಲಾದವರಿದ್ದರು.

ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ತಾರನಾಥ ಸ್ವಾಗತಿಸಿದರು. ಡಾ.ಶುಭಲಕ್ಷ್ಮಿ ಪಿ. ಸನ್ಮಾನಿತರ ಪರಿಚಯ ವಾಚಿಸಿದರು. ಡಾ. ಬಾಲಿಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net