

ಮಂಗಳೂರು: ವಕೀಲರಿಗೆ ತಮ್ಮ ವೃತ್ತಿ ಬದುಕಿನಲ್ಲಿ ಸಾಮಾಜಿಕ ಸಂವೇದನಾಶೀಲತೆ ಅತ್ಯಂತ ಅಗತ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎಲ್.ಧರ್ಮ ಅಭಿಪ್ರಾಯಪಟ್ಟರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ರಾಷ್ಟ್ರೀಯ ಕಾನೂನು ಹಬ್ಬ ಲೆಕ್ಸ್ ಅಲ್ಟಿಮಾ-2024 ನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಮಾಜವು ಬಹು ಸಂಸ್ಕೃತಿಯನ್ನು ಹೊಂದಿದ್ದು, ವಕೀಲರ ಬಳಿ ಬರುವ ಪ್ರತಿಯೊಬ್ಬ ಕಕ್ಷಿದಾರನಿಗೂ ವಿಭಿನ್ನವಾದ ಹಿನ್ನೆಲೆ ಇರುತ್ತದೆ. ಈ ಹಿನ್ನೆಲೆಯಲ್ಲಿ ವಕೀಲರಿಗೆ ಸಾಮಾಜಿಕ ಸಂರಚನೆಯ ಕುರಿತಾದ ಜ್ಞಾನವನ್ನು ಹೊಂದುವುದು ಅಪೇಕ್ಷಣೀಯ ಎಂದು ಹೇಳಿದರು.
ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ದೇವರಾಜ್ ಕೆ. ಮುಖ್ಯ ಅತಿಥಿಗಳಾಗಿದ್ದರು. ಪ್ರಾಂಶುಪಾಲ ಡಾ.ತಾರಾನಾಥ ಅಧ್ಯಕ್ಷತೆ ವಹಿಸಿದ್ದರು.
ಕಾರ‌್ಯಕ್ರಮ ಸಂಯೋಜಕಿ ಡಾ. ಸುಮಾ ಸುರೇಶ್ ಕೋಗಿಲಗೇರಿ ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕ ಮಯೂರ್ ಭಟ್ ವಂದಿಸಿದರು. ವಿದ್ಯಾರ್ಥಿ ಕಾರ‌್ಯದರ್ಶಿ ಸಚಿನ್ ಹೆಗ್ಡೆ ಲೆಕ್ಸ್ ಅಲ್ಟಿಮಾದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿ ನಾಯಕಿ ಪ್ರತೀಕ್ಷಾ ಪೈ, ವಿದ್ಯಾರ್ಥಿ ಸಂಯೋಜಕರುಗಳಾದ ಶ್ರೀವರ, ಭಾರ್ಗವಿ ಹಾಗೂ ಅಶ್ವತಿ ಉಪಸ್ಥಿತರಿದ್ದರು. ನೇಹಾ ರಾಮಕೃಷ್ಣ ನಿರೂಪಿಸಿದರು.
ಕಾರ್ಗಿಲ್ಸ್ ವಿಜಯೋತ್ಸವ
ಲೆಕ್ಸ್ ಅಲ್ಟಿಮಾ-2024ರ ವೇದಿಕೆಯ ಸಭಾ ಕಾರ‌್ಯಕ್ರಮ ಕಾರ್ಗಿಲ್ ವಿಜಯೋತ್ಸವದ ಆಚರಣೆಯೊಂದಿಗೆ ಆರಂಭಗೊಂಡಿತು. ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಹಾಗೂ ವೀರ ಮರಣವನ್ನಪ್ಪಿದ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಯಿತು.