

ಮಂಗಳೂರು: ಶಾಸನ ಸಭೆಗಳಲ್ಲಿ ನಡೆಯುವ ಶಾಸನ ರಚನೆ ಪ್ರಕ್ರಿಯೆಯಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ತರವಾದದ್ದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಭಿಪ್ರಾಯ ಪಟ್ಟರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದು ದೇಶಕ್ಕೆ ಉತ್ತಮ ಶಾಸನ ರಚನೆಕಾರರ ಅಗತ್ಯವಿದೆ. ಕಾನೂನು ಪದವೀಧರರಿಗೆ ಸಂವಿಧಾನ ಹಾಗೂ ಕಾನೂನುಗಳ ಕುರಿತು ಉತ್ತಮ ಜ್ಞಾನ ಇರುವುದರಿಂದ ಶಾಸನ ರಚನೆಯಲ್ಲಿ ತೊಡಗಿಕೊಂಡಾಗ ಪರಿಣಾಮಕಾರಿ ಶಾಸನಗಳು ಹೊರಬರಲು ಸಾಧ್ಯ ಎಂದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್.ವಿ., ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಸಂಜಯ್ ಬಲಿಪ, ನ್ಯಾಯಾಧೀಶೆಯಾಗಿ ಆಯ್ಕೆಗೊಂಡ ಗೀತಾ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ತಾರಾನಾಥ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲೆ ಡಾ.ಬಾಲಿಕಾ, ವಿಭಾಗ ಮುಖ್ಯಸ್ಥರುಗಳಾದ ಪ್ರೊ. ಶಾರಿಕಾ ರೈ , ಪ್ರೊ. ಉಜ್ವಲಾ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಚಂದ್ರಲೇಖಾ, ವಿದ್ಯಾರ್ಥಿ ಕಾರ‌್ಯದರ್ಶಿ ಪ್ರತೀಕ್ಷಾ ಪೈ ಹಾಗೂ ಇತರ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳ ಬಹುಮಾನ ವಿಜೇತರ ಪಟ್ಟಿಗಳನ್ನು ಡಾ. ಅನ್ನಪೂರ್ಣ ಶೇಟ್, ಡಾ.ರೇಶ್ಮಾ, ವಿನುತಾ ಹಾಗೂ ಡಾ.ಡಿಂಪಲ್ ವಾಚಿಸಿದರು. ಮುಖ್ಯ ಅತಿಥಿಗಳನ್ನು ಕಾಲೇಜಿನ ಹಳೇ ವಿದ್ಯಾರ್ಥಿಗಳ ನೆಲೆಯಲ್ಲಿ ಸನ್ಮಾನಿಸಲಾಯಿತು. ಪ್ರೊ. ಪುಪ್ಪರಾಜ್ ಕೆ. ಅತಿಥಿಗಳನ್ನು ಪರಿಚಯಿಸಿದರು. ಡಾ.ಶಹೀಮಾ ವಂದಿಸಿದರು. ಮೇಘ ಮತ್ತು ಅಪೇಕ್ಷ ನಿರೂಪಿಸಿದರು.