ಮಂಗಳೂರಿನಲ್ಲೂ ಅಕ್ರಮ ಬಾಂಗ್ಲಾ ನಿವಾಸಿಗಳಿರುವ ಶಂಕೆ ಸೂಕ್ತ ತನಿಖೆಗೆ ದಲಿತ ಕುಂದು ಕೊರತೆ ಸಭೆಯಲ್ಲಿ ಮುಖಂಡರ ಆಗ್ರಹ

mng--27 Oct Sc st
Published on

ಮಂಗಳೂರು: ಮಲ್ಪೆಯಲ್ಲಿ ಬಾಂಗ್ಲಾ ನಿವಾಸಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಭಾರಿ ಸಂಖ್ಯೆಯಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವ ಶಂಕೆ ಇದ್ದು, ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ಡಿಸಿಪಿ ಸಿದ್ಧಾರ್ಥ ಗೋಯಲ್ ಅಧ್ಯಕ್ಷತೆಯಲ್ಲಿ ನಡೆದ ದಲಿತ ಕುಂದು ಕೊರತೆ ಸಭೆಯಲ್ಲಿ ಈ ಅಗ್ರಹ ವ್ಯಕ್ತವಾಯಿತು.

ದಲಿತ ಮುಖಂಡ ಸದಾಶಿವ ಉರ್ವಾಸ್ಟೋರ್ ವಿಷಯ ಪ್ರಸ್ತಾಪಿಸಿ, ಮಂಗಳೂರು ನಗರಕ್ಕೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರಾಗಿ ಬರುತ್ತಿದ್ದಾರೆ. ಹೆಚ್ಚಿನವರು ಬಿಹಾರ, ಅಸ್ಸಾಂನವರು ಎಂದು ಹೇಳುತ್ತಾರೆ. ಅವರಲ್ಲಿ ಪಶ್ಚಿಮ ಬಂಗಾಳದ ಗಡಿ ಭಾಗದಿಂದ ಬಾಂಗ್ಲಾ ಅಥವಾ ಇತರ ದೇಶಗಳಿಂದ ಬಂದಿರುವ ಶಂಕೆಯೂ ಇದೆ. ಈ ಕಾರ್ಮಿಕರನ್ನು ಕರೆತರಲು ಏಜೆಂಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಸಿ ಕರೆ ತರಲಾಗುತ್ತದೆ. ಅವರಿಗೆ ಶೆಡ್ ನಿರ್ಮಿಸಿ ಕೂಡಾ ಕೊಡುತ್ತಾರೆ. ಮುಂದೆ ಏನಾದರೂ ಅಹಿತಕರ ಘಟನೆ ನಡೆದರೆ ನಗರಕ್ಕೆ ಕೆಟ್ಟ ಹೆಸರು ಬರಲಿದೆ. ಪೊಲೀಸರು ವಿವಿಧ ಟೆಂಟ್, ಗೋದಾಮುಗಳಲ್ಲಿ ಬೀಡು ಬಿಟ್ಟಿರುವ ಕೂಲಿ ಕಾರ್ಮಿಕರ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಬೆಲೂನ್ ಮಾರಾಟ ಮಾಡುವವವರು, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರ ಬಗ್ಗೆ ಆಗಾಗ ತಪಾಸಣೆ ಕಾರ್ಯ ನಡೆಯುತ್ತಿದೆ. ಮಾತ್ರವಲ್ಲದೆ ಅಂತಹ ಕಾರ್ಮಿಕರ ಬೆರಳಚ್ಚು ಸ್ಕಾೃನಿಂಗ್ ಮಾಡುವ ಕಾರ್ಯವೂ ನಡೆಯುತ್ತಿದೆ ಎಂದು ಡಿಸಿಪಿ ಸಿದ್ಧಾರ್ಥ ಗೋಯಲ್ ಹೇಳಿದರು.

ಪುರಭವನದಲ್ಲಿ ಆ.24ರಂದು ನಡೆದ ತುಳು ಜಾನಪದ ನೃತ್ಯ 2024 ಕಾರ್ಯಕ್ರಮದಲ್ಲಿ ದಲಿತ ಸಮುದಾಯಕ್ಕೆ ಅವಮಾನ ಮಾಡುವ ನಿಷೇಧಿತ ಜಾತಿ ನಿಂದನೆ ಪದವನ್ನು ಬಳಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ದಲಿತ ನಾಯಕ ಎಸ್.ಪಿ. ಆನಂದ್ ಒತ್ತಾಯಿಸಿದರು.

ಅಕ್ರಮ ಮರಳು ಸಾಗಾಟ: ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿದ್ದು, ಪ್ರಕರಣಗಳು ದಾಖಲಾಗುತ್ತಿದ್ದರೂ, ಪ್ರತಿನಿತ್ಯ ಸುಮಾರು 20ರಷ್ಟುಲಾರಿಗಳಲ್ಲಿ ಮರಳು ಸಾಗಾಟ ಮುಂದುವರಿದಿದೆ. ದಲಿತ ಕಾಲನಿಯ ಸಮೀಪದಿಂದಲೇ ಇದು ನಡೆಯುತ್ತಿದೆ ಎಂದು ರಾಮಚಂದ್ರ ಮುಲ್ಕಿ ದೂರಿದರು.

ಗಂಜಿಮಠ ಮೂಡುಪೆರಾರದ ಗ್ರಾಮದ ವಿಠಲ ಎಂಬ ದಲಿತ ಸಮುದಾಯದ ವ್ಯಕ್ತಿಗೆ ಮಹಾಲಕ್ಷ್ಮೀ ಹೆಸರಿನಲ್ಲಿ ಪೊಲೀಸ್ ಪೇದೆ ಎಂದು ಹೇಳಿಕೊಂಡು ಬ್ಲಾೃಕ್ ಮೇಲ್ ಮಾಡಿದ ಘಟನೆ ನಡೆದಿದ್ದು, ಈ ಬಗ್ಗೆ ಕ್ರಮ ವಹಿಸಬೇಕು ಎಂದು ಎಸ್.ಪಿ.ಆನಂದ ಒತ್ತಾಯಿಸಿದರು.

ವೆನ್ಲಾಕ್ ಆಸ್ಪತ್ರೆಗೆ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿರುವುದರಿಂದ ಐಸಿಯು ಲಭ್ಯವಾಗದೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ವಹಿಸಬೇಕು ಎಂದು ದಲಿತ ಮುಖಂಡ ಪ್ರೇಮನಾಥ್ ಬಳ್ಳಾಲ್‌ಬಾಗ್ ಆಗ್ರಹಿಸಿದರು.

ಕ್ರಿಮಿನಲ್‌ಗೆ ಪಾಸ್‌ಪೋರ್ಟ್‌ಗೆ ಪೊಲೀಸ್ ಕ್ಲಿಯರೆನ್ಸ್

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕ್ರಿಮಿನಲ್ ಕೇಸ್ ಹೊಂದಿರುವ ವ್ಯಕ್ತಿಗೆ ಪಾಸ್‌ಪೋರ್ಟ್‌ಗೆ ಪೊಲೀಸ್ ಕ್ಲಿಯರೆನ್ಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಾದೇಶಿಕ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಡಿಸಿಪಿ ಸಿದ್ಧಾರ್ಥ ಗೋಯಲ್ ಸಭೆಯ ಬಳಿಕ ಸುದ್ದಿಗಾರರಲ್ಲಿ ತಿಳಿಸಿದರು.

ಪೊಲೀಸ್ ತಪಾಸಣೆ ವೇಳೆ ಅರ್ಜಿದಾರನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾದ ಬಗ್ಗೆ ಮಾಹಿತಿ ಅಪ್‌ಡೇಟ್ ಆಗಿರಲಿಲ್ಲ. ಹಾಗಾಗಿ ನಿರಕ್ಷೇಪಣಾ ಪತ್ರ ನೀಡುವಾಗ ಕ್ರಿಮಿನಲ್ ಕೇಸ್‌ನ ಮಾಹಿತಿ ಬಂದಿರಲಿಲ್ಲ. ಬಳಿಕ ಕ್ರಿಮಿನಲ್ ಕೇಸು ಇರುವ ಮಾಹಿತಿ ಲಭ್ಯವಾಗಿದ್ದು, ಕೂಡಲೇ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ದಾಖಲೆ ಸಹಿತ ಮಾಹಿತಿ ನೀಡಲಾಗಿದೆ ಎಂದು ಡಿಸಿಸಿ ಸಿದ್ಧಾರ್ಥ ಗೋಯಲ್ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net