

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳಿಕೆಯಾಗಿರುವ 166 ಎಕ್ರೆ (ಡಿಪ್ರೆಸ್ಡ್ ಕ್ಲಾಸ್) ಡಿಸಿ ಮನ್ನಾ ಭೂಮಿಗೆ ಸಂಬಂಧಿಸಿ ಪಿಟಿಸಿಎಲ್ ಕಾಯ್ದೆಯಡಿ ನಿಯಮಾವಳಿ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ದಲಿತ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಉಳಿಕೆಯಾಗಿರುವ ಡಿಸಿ ಮನ್ನಾ ಜಮೀನನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕೆಂದು ದಲಿತ ನಾಯಕರು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ಮುಖಂಡರಾದ ದೇವದಾಸ್ ಎಂ.ರವರು ವಿಷಯ ಪ್ರಸ್ತಾಪಿಸಿ, ಬ್ರಿಟಿಷರ ಕಾಲದಲ್ಲಿಯೇ ಪ್ರತಿ ಗ್ರಾಮದಲ್ಲಿಯೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಡಿಸಿ ಮನ್ನಾ ಭೂಮಿಯನ್ನು ಮೀಸಲಿಟ್ಟು ಹಂಚಿಕೆ ಮಾಡುತ್ತಾ ಬರಲಾಗಿದೆ. ಆದರೆ ಸಾಕಷ್ಟು ದಲಿತ ಕುಟುಂಬಗಳಿಗೆ ಇನ್ನೂ ಈ ಡಿಸಿ ಮನ್ನಾ ಭೂಮಿ ಹಂಚಿಕೆ ಮಾಡಲಾಗಿಲ್ಲ. ಈಗಾಗಲೇ ಸಾಕಷ್ಟು ಭೂಮಿ ಒತ್ತುವಾರಿಯಾಗಿರುವ ಜತೆಗೆ ಅನ್ಯ ಕಾರ್ಯಗಳಿಗೆ ಬಳಕೆಯಾಗಿದೆ. 1970ರಲ್ಲಿ ಭೂ ಮಸೂದೆ ಕಾಯ್ದೆಯಡಿ ಬೆರಳೆಣಿಕೆ ದಲಿತರಿಗೆ ಮಾತ್ರವೇ ಅನುಕೂಲ ಆಗಿದೆ. ಹಾಗಾಗಿ ಬಾಕಿ ಉಳಿದ ಡಿಸಿ ಮನ್ನಾ ಭೂಮಿಗೆ ಪ್ರತ್ಯೇಕ ನಿಯಮಾವಳಿ ರೂಪಿಸಿ ಅದನ್ನು ದಲಿತರಿಗೇ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಡಿಸಿಮನ್ನಾ ಭೂಮಿ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿಯೂ ಪ್ರತ್ಯೇಕ ಸಭೆ ನಡೆದಿದೆ. ಪ್ರತ್ಯೇಕ ನಿಯಮಾವಳಿಗೆ ಪ್ರಸ್ತಾವನೆಯೂ ಸಲ್ಲಿಕೆಯಾಗಿತ್ತು. ಸರ್ಕಾರದ ಕಾರ್ಯದರ್ಶಿಯವರು ಹಿಂದೆ ಕೊಟ್ಟಿರುವಂತೆ ಹಂಚಿಕೆಗೆ ಪತ್ರ ಬರೆದಿದ್ದಾರೆ. ಪಿಟಿಸಿಎಲ್ ಕಾಯ್ದೆಯಡಿ ಪ್ರತ್ಯೇಕವಾಗಿ ನಿಯಮಾವಳಿ ರೂಪಿಸುವ ಕುರಿತಂತೆ ಸಭೆಯಲ್ಲಿ ವ್ಯಕ್ತವಾದ ಆಗ್ರಹದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಜತೆಗೆ ಅರ್ಹ ಫಲಾನುಭವಿಗಳ ಪಟ್ಟಿ ಮಾಡಲು ತಹಶೀಲ್ದಾರರಿಗೆ ತಿಳಿಸಲಾಗುವುದು ಎಂದರು.
ಡಿಸಿ ಮನ್ನಾ ಭೂಮಿ ಎಷ್ಟಿದೆ?
ದ.ಕ. ಜಿಲ್ಲೆಯಲ್ಲಿ ಒಟ್ಟು 8509.728 ಎಕರೆ ಡಿಸಿ ಮನ್ನಾ ಭೂಮಿ ಗುರುತಿಸಲಾಗಿತ್ತು. ಅದರಲ್ಲಿ 5698.774 ಎಕರೆ ಭೂಮಿಯನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ, 625.254 ಎಕರೆ ಇತರರಿಗೆ, 382.136 ಎಕರೆ ಡೀಮ್ಡ್ ಫಾರೆಸ್ಟ್‌ಗಾಗಿ, 195 ಎಕರೆ ಗೇರು ಅಭಿವೃದ್ಧಿಗಾಗಿ, 238.372 ಎಕರೆ ಭೂಮಿ ಸಾರ್ವಜನಿಕ ಉದ್ದೇಶಕ್ಕೆ ಹಾಗೂ 226.640 ಇತರ ಉದ್ದೇಶಕ್ಕೆ ಬಳಕೆಯಾಗಿದೆ. ಉಳಿಕೆಯ 1143.553 ಎಕರೆ ಭೂಮಿಯಲ್ಲಿ 977.195 ಎಕರೆ ಅತಿಕ್ರಮಣವಾಗಿದ್ದು, ಇದೀಗ 166.358 ಎಕರೆ ಭೂಮಿ ಉಳಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಕಾಲ ಮಿತಿಯಲ್ಲಿ ಅಂಬೇಡ್ಕರ್ ಸರ್ಕಲ್
ಅಂಬೇಡ್ಕರ್ ಸರ್ಕಲ್ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದು ಎರಡು ತಿಂಗಳಾದರೂ ಕಾಮಗಾರಿ ಆರಂಭವಾಗಿಲ್ಲ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ರವರಿಗೆ ಈ ರೀತಿಯ ಅವಮಾನವನ್ನು ಸಹಿಸಲಾಗದು. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಉತ್ತರ ನೀಡಬೇಕು ಎಂದು ಜಿನ್ನಪ್ಪ ಬಂಗೇರ ಆಗ್ರಹಿಸಿದಾಗ ದಲಿತ ನಾಯಕರನೇಕರು ದನಿಗೂಡಿಸಿದರು.
ಈಗಾಗಲೇ ದಲಿತ ಸಂಘಟನೆಗಳಿಂದ ವೃತ್ತ ನಿರ್ಮಾಣಕ್ಕೆ ಸಂಬಂಧಿಸಿ ನೀಡಲಾಗಿರುವ ನೀಲ ನಕಾಶೆ ಕುರಿತಂತೆ ಪ್ರಾಯೋಗಿಕವಾಗಿ ಇಟ್ಟಿಗೆ ಇರಿಸಿ ಪರಿಶೀಲಿಸಲಾಗಿದೆ. ಅದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಪಾಲಿಕೆ ಆಯುಕ್ತ ಆನಂದ್ ತಿಳಿಸಿದರು.
ಈ ಬಗ್ಗೆ ಸಮರ್ಪಕ ನಿರ್ಣಯಕ್ಕೆ ಬಂದು ಟ್ರಾಫಿಕ್ ಅನುಮತಿ ಪಡೆದುಕೊಂಡು ಕಾಲ ಮಿತಿಯಲ್ಲಿ ವೃತ್ತವನ್ನು ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳಿಗೆ ಸೂಚಿಸಿದರು.
ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಯಾವುದೇ ಬ್ಯಾಂಕ್‌ನವರು ನೀಡುವ ಹಣ ಬಳಕೆ ಮಾಡಬಾರದು. ಪಾಲಿಕೆಯಲ್ಲಿ ನಿರ್ಣಯಿಸಿ ಮೀಸಲಟ್ಟ ಹಣದಿಂದಲೇ ಕಾಮಗಾರಿ ಮಾಡುವ ಮೂಲಕ ಸಂವಿಧಾನ ಶಿಲ್ಪಿಗೆ ಗೌರವ ನೀಡಬೇಕು ಎಂದು ಮನಪಾ ಮಾಜಿ ಸದಸ್ಯೆ ಅಪ್ಪಿ ಒತ್ತಾಯಿಸಿದರು.
ಪಾಲಿಕೆಯ ಸಾಮಾನ್ಯ ನಿಧಿ ಅಥವಾ ಸ್ಮಾರ್ಟ್ ಸಿಟಿ ಹಣದಲ್ಲಿ ಕಾಮಗಾರಿ ನಡೆಸಬಹುದು. ಆದರೆ ಎಸ್‌ಸಿ, ಎಸ್‌ಟಿ ಮೀಸಲು ಹಣವನ್ನು ಅದಕ್ಕಾಗಿ ಬಳಕೆ ಮಾಡುವುದು ಸರಿಯಲ್ಲ ಎಂದು ದಲಿತ ನಾಯಕರನೇಕರು ತಿಳಿಸಿದಾಗ, ಈ ಬಗ್ಗೆ ಪಾಲಿಕೆಯಲ್ಲಿ ಚರ್ಚಿಸಿ ಶೀಘ್ರ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
20 ವರ್ಷವಾದರೂ ಸ್ಮಶಾನವಾಗಿಲ್ಲ
ಉಳ್ಳಾಲದ ತಲಪಾಡಿಯಲ್ಲಿ 20 ವರ್ಷಗಳ ಹಿಂದೆ ಸ್ಮಶಾನಕ್ಕೆ ಮೀಸಲಿಟ್ಟ 65 ಸೆಂಟ್ಸ್ ಜಾಗದಲ್ಲಿ ಇನ್ನೂ ಸರಿಯಾಗಿ ತಡೆಗೋಡೆ ಆಗಿಲ್ಲ. ಚಿತಾಗಾರ ನಿರ್ಮಾಣ ಮಾಡಿಲ್ಲ ಎಂದು ದಲಿತ ನಾಯಕ ಎಸ್.ಪಿ. ಆನಂದ್ ದೂರಿದರು.
ತಡೆಗೋಡೆ ನಿರ್ಮಾಣವಾಗಿದ್ದು, ಸ್ವಲ್ಪ ಬಾಕಿ ಇದೆ. ಆದರೆ ಸ್ಥಳೀಯರು ಅದು ದಾರಿ ಎಂದು ಆಕ್ಷೇಪ ಮಾಡಿದ್ದಾರೆ. ಈ ಬಗ್ಗೆ ಪಂಚಾಯಿತಿನಲ್ಲೂ ನಿರ್ಣಯವಾಗಿದೆ ಎಂದು ಸ್ಥಳೀಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದಾಗ, ಸ್ಮಶಾನಕ್ಕೆ ಮೀಸಲಿಟ್ಟ ಭೂಮಿಯನ್ನು ಕಾಯ್ದಿರಿಸಿದ ಉದ್ದೇಶಕ್ಕೇ ಬಳಕೆ ಮಾಡಬೇಕು. ಬಾಯಿ ಮಾತಿನಲ್ಲಿ ಹೇಳುವ ಆಕ್ಷೇಪಕ್ಕೆ ಯಾವುದೇ ಮಹತ್ವ ಇಲ್ಲ. ಪಂಚಾಯಿತಿಯಿಂದಲೇ ಮೀಸಲಿಟ್ಟ ಭೂಮಿಗೆ ಮತ್ತೆ ಪಂಚಾಯಿತಿಯಲ್ಲಿ ನಿರ್ಣಯ ಮಾಡಿದರೂ ಅದನ್ನು ಪರಿಗಣಿಸಲಾಗದು. ಈಗಾಗಲೇ ಭೂಮಿಯ ಕೊರತೆ ಇರುವುದರಿಂದ ಅದಕ್ಕೆ ಬಳಸುವ ನಿಟ್ಟಿನಲ್ಲಿ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.
ಕಾವೂರು ಗ್ರಾಮದ ಸೂಜಿಕಲ್ಲು ಗುಡ್ಡದ ಬಳಿ ಇಳಿಜಾರು ಪ್ರದೇಶದಲ್ಲಿರುವ ಸುಮಾರು 70 ಮನೆಗಳಿಗೆ ಇನ್ನೂ ಒಳಚರಂಡಿ ವ್ಯವಸ್ಥೆ ಆಗಿಲ್ಲ. ಕೊಳಚೆ ನೀರು ಹರಿದು ಬರುವುದರಿಂದ ಕೆಳಗಿರುವ ಮನೆಯವರಿಗೆ ತೊಂದರೆಯಾಗುತ್ತಿದೆ. ಒಳಚರಂಡಿ ಶೀಘ್ರ ನಿರ್ಮಾಣ ಮಾಡಬೇಕು ಎಂದು ದಲಿತ ಮುಖಂಡ ರಮೇಶ್ ಕೋಟ್ಯಾನ್ ಆಗ್ರಹಿಸಿದರು.
ಈ ಬಗ್ಗೆ ಕ್ರಮ ವಹಿಸುವುದಾಗಿ ಪಾಲಿಕೆ ಅಧಿಕಾರಿ ಭರವಸೆ ನೀಡಿದಾಗ, ಆರ್ಥಿಕ ವ್ಯವಸ್ಥೆ ಮಾಡದೆ ಅಧಿಕಾರಿಗಳು ಕೇವಲ ಭರವಸೆ ನೀಡಲು ಆಗುವುದಿಲ್ಲ. ಸಭೆಯಲ್ಲಿ ಮಂಡಿಸಿ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.
ತೋಕೂರು ಗ್ರಾಮದ ಪಡುಪಣಂಬೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಬೋರ್‌ವೆಲ್‌ನಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ದಲಿತ ನಾಯಕರೊಬ್ಬರು ಆರೋಪಿಸಿದಾಗ, ನೀರಿನ ಗುಣಮಟ್ಟ ಪರಿಶೀಲಿಸಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕುದುರೆಮುಖ ರಕ್ಷಿತಾರಣ್ಯದ ಸಮೀಪ ವಾಸವಿರುವ ಕೆಲ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಸೋಲಾರ್ ದೀಪ ವಿತರಣೆಯಾಗಿದ್ದರೂ ಅದು ಸಮರ್ಪವಾಗಿ ಉರಿಯುವುದಿಲ್ಲ ಎಂದು ಶೇಖರ್ ಲಾಯಿಲ ದೂರಿದಾಗ, ಈಬಗ್ಗೆ ಸಿಎಂ ನೇತೃತ್ವದಲ್ಲಿ ಸಭೆ ಆಗಿದೆ. ಏಳು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚೆ ಆಗಿದ್ದು, ಭೂಗತ ವ್ಯವಸ್ಥೆಯಡಿ ಕ್ರಮಕ್ಕೆ ನಿರ್ಣಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಲ್ಲಿಯೂ ಹೊರಗುತ್ತಿಗೆ ನೇಮಕಾತಿ ವ್ಯವಸ್ಥೆಯಡಿ ಎಸ್‌ಸಿ, ಎಸ್‌ಟಿಗಳಿಗೆ ಮೀಸಲಾತಿಗೆ ಆದೇಶವಾಗಿ ಎಂಟು ತಿಂಗಳಾದರೂ ಕ್ರಮ ಆಗಿಲ್ಲ ಎಂದು ಶೇಖರ್ ಕುಕ್ಕೇಡಿ ಸಭೆಯ ಗಮನ ಸೆಳೆದರು.
ದಲಿತ ಮುಖಂಡರಾದ ಈಶ್ವರಿ, ವಿಶ್ವನಾಥ್, ಪ್ರೇಮನಾಥ್ ಸೇರಿದಂತೆ ಹಲವರು ವಿವಿಧ ವಿಷಯಗಳ ಕುರಿತು ಮನವಿ ಸಲ್ಲಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಅಪರ ಜಿಲ್ಲಾಧಿಕಾರಿ ಡಾ.ಜಿ. ಸಂತೋಷ್ ಕುಮಾರ್, ಡಿಎಫ್‌ಒ ಆ್ಯಂಟನಿ ಮರಿಯಪ್ಪ, ಎಸ್ಪಿ ಯತೀಶ್ ಎನ್., ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿ ಹರ್ಷವರ್ಧನ್ ಉಪಸ್ಥಿತರಿದ್ದರು.