ಅ. 18ರಂದು ಮಂಗಳೂರಿನಲ್ಲಿ ನಡೆಯಲಿದೆ ಮಾದಕ ದ್ರವ್ಯ ವಿರೋಧಿ ವಾಕಥಾನ್

catholic
Published on

ಮಂಗಳೂರು : ಮಾದಕ ದ್ರವ್ಯ ಹಾವಳಿ ತಡೆಗೆ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಪ್ರಯತ್ನಗಳಿಗೆ ಪೂರಕವಾಗಿ ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯ, ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್, ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿ, ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಮತ್ತು ಕ್ಯಾಥೋಲಿಕ್ ಶಿಕ್ಷಣ ಮಂಡಳಿ ಸಹಯೋಗದಲ್ಲಿ ಅ.18ರಂದು ಮಧ್ಯಾಹ್ನ 2 ರಿಂದ 4.30 ರವರೆಗೆ ವಾಕಥಾನ್ ಆಯೋಜಿಸಲಾಗಿದೆ.


ಸಂತ ಅಲೋಶಿಯಸ್ ಮೈದಾನದಲ್ಲಿ ‘ಸೇ ನೋ ಟು ಡ್ರಗ್ಸ್’ ಎಂಬ ಘೋಷಣೆಯೊಂದಿಗೆ ಆರಂಭವಾಗುವ ಪಾದಯಾತ್ರೆಯು ನೆಹರೂ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಫಾ. ಪ್ರವೀಣ್ ಲಿಯೋ ಲಸ್ರಾದೋ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಮಂಗಳೂರು ನಗರದ ಎಲ್ಲಾ ಪ್ರಮುಖ ಶಿಕ್ಷಣ ಸಂಸ್ಥೆಗಳು ಬೆಂಬಲ ನೀಡಿದ್ದು, ಮಾದಕ ದ್ರವ್ಯ ವಿರೋಧಿ ಸಂದೇಶವನ್ನು ಹರಡುವಲ್ಲಿ ಒಗ್ಗಟ್ಟನ್ನು ಸಂಕೇತಿಸುತ್ತದೆ. ಸಂತ ಅಲೋಶಿಯಸ್ ಡೀಮ್ಡ್ ವಿಶ್ವವಿದ್ಯಾನಿಲಯದ ರೆಕ್ಟರ್ ರೆ.ಫಾ. ಮೆಲ್ವಿನ್ ಪಿಂಟೊ ಅವರು ಮಧ್ಯಾಹ್ನ 2 ಗಂಟೆಗೆ ಸಂತ ಅಲೋಶಿಯಸ್ ಮೈದಾನದಲ್ಲಿ ವಿವಿಧ ಪ್ರಮುಖ ಸಂಸ್ಥೆಗಳ ನಿರ್ದೇಶಕರು ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ವಾಕಥಾನ್‌ಗೆ ಚಾಲನೆ ನೀಡಲಿದ್ದಾರೆ. ನೆಹರೂ ಮೈದಾನದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಪಿ. ಮುಲ್ಲೈ ಮುಗಿಲನ್ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಸಂದೇಶ ನೀಡಲಿದ್ದಾರೆ. ಅವರು ವಾಕಥಾನ್‌ನಲ್ಲಿ ಭಾಗವಹಿಸುವವರಿಗೆ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆಯನ್ನು ಭೋಧಿಸಲಿದ್ದಾರೆ ಎಂದು ಅವರು ಹೇಳಿದರು.


ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಡ್ರಗ್ಸ್ ವಿರೋಧಿ ಅಭಿಯಾನದ ಸಂಯೋಜಕ ಲೂವಿ ಜೆ. ಪಿಂಟೋ, ಅಲೋಶಿಯಸ್ ಡೀಮ್ಸ್ ಯೂನಿವರ್ಸಿಟಿ ಡ್ರಗ್ಸ್ ತಡೆ ಸೊಸೈಟಿ ನೋಡೆಲ್ ಅಧಿಕಾರಿ ಡಾ.ರೋಶನ್ ಮೊಂತೆರೋ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಫಾ.ಅಜಿತ್ ಮಿನೇಜಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net