

ಮಂಗಳೂರು: ಭಾರತೀಯರು ಭಾರತೀಯರಾಗಿ, ಭಾರತ ಭಾರತವಾಗಿ ಉಳಿಯಬೇಕಾದರೆ ಸಂಸ್ಕೃತ ಅತ್ಯಗತ್ಯ ಎಂದು ಕರ್ಣಾಟಕ ಬ್ಯಾಂಕ್ ನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಎಸ್ ಮಹಾಬಲೇಶ್ವರ ಹೇಳಿದರು.
ಅವರು ನಗರದ ಸಂಘನಿಕೇತನದಲ್ಲಿ ಸೋಮವಾರ ಸಂಸ್ಕೃತ ಭಾರತಿ ಮತ್ತು ಕೇಶವ ಸ್ಮತಿ ಸಂವರ್ಧನ ಸಮಿತಿಯ ಸಂಯೋಗದಲ್ಲಿ ನಡೆದ ಸಂಸ್ಕೃತೋತ್ಸವದ ಅಂಗವಾಗಿ ಪಂಡಿತ್ ಎಂ. ನರಸಿಂಹ ಆಚಾರ್ಯರನ್ನು ಸನ್ಮಾನಿಸಿ ಮಾತನಾಡಿದರು.
ಸಂಸ್ಕೃತ ಭಾಷೆ ಮಾತನಾಡಲು ಆರಂಭಿಸಿದರೆ ವ್ಯಾಕರಣ ತಾನಾಗಿಯೇ ಬರುತ್ತದೆ. ಈ ಮೂಲಕ ಭಾರತದ ಸಾಂಸ್ಕೃತಿಕ ವೈಭವ ಮರಳಿ ಬರುವಂತೆ ಮಾಡಬೇಕು ಎಂದರು.
ಸನ್ಮಾನ ಸ್ವೀಕರಿಸಿದ ಪಂಡಿತ ಎಂ.ನರಸಿಂಹ ಆಚಾರ್ಯರು ಮಾತನಾಡಿ, ಸಂಸ್ಕೃತ ಭಾರತಿಯ ವತಿಯಿಂದ ಮನಮನೆಯಲ್ಲಿ ಸಂಸ್ಕೃ ತ ಕಲಿಸುವ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನ ನಡೆಯಬೇಕು ಎಂದರು.
ಖಗೋಲಶಾಸ್ತ್ರದಲ್ಲಿ ನಮ್ಮ ದೇಶ ಎಷ್ಟೇ ಮುಂದುವರೆದಿದ್ದರೂ ಅದರ ಕಲಿಕೆಗೆ ಈವರೆಗೆ ಪ್ರತ್ಯೇಕ ವಿಭಾಗ ಇರಲಿಲ್ಲ. ಪ್ರಸ್ತುತ ದೀನ ದಯಾಳ್ ಉಪಾಧ್ಯಾಯ ವಿಶ್ವ ವಿದ್ಯಾಲಯದಲ್ಲಿ ಆ ಅವಕಾಶ ಇದ್ದುದರಿಂದ ನನ್ನ ಕಲಿಕೆ ಸಾಧ್ಯವಾಯಿತು ಎಂದರು. ಸಂಸ್ಕೃತ ಕಲಿಕೆಗೆ ಇರುವ ಅವಕಾಶಗಳನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರು.
ಮಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕರಾದ ಡಾ. ಪಿ.ಎಸ್ . ಸೂರ್ಯನಾರಾಯಣ ಭಟ್ ಮಾತನಾಡಿ, ಸಂಸ್ಕೃತ ಭಾಷೆ ಬಹಳ ಪುರಾತನವಾದುದು. ಅದರಲ್ಲಿ ಕೃಷಿ, ವಿಜ್ಞಾನ, ತಂತ್ರಜ್ಞಾನ, ಆಯುರ್ವೇದ ಸೇರಿದಂತೆ ಎಲ್ಲ ವಿಚಾರಗಳ ಉಲ್ಲೇಖವಿದೆ. ಅದು ಮೃತ ಭಾಷೆ ಎಂಬ ಅಪವಾದ ಇದೆ. ಅದು ಅಮೃತ ಭಾಷೆ ಎಂದು ಅರಿತು ಎಲ್ಲರೂ ಅದನ್ನು ತಮ್ಮ ಭಾಷೆಯನ್ನಾಗಿ ಮಾಡಿಕೊಳ್ಳಬೇಕು ಎಂದರು.
ಶೃಂಗೇರಿ ಸುರಸ್ವತೀ ಸಭಾ ವತಿಯಿಂದ ನಡೆದ ವಿವಿಧ ಹಂತದ ಸಂಸ್ಕೃತ ಪರೀಕ್ಷೆಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿದ್ಯಾಪಾರ್ವತಿ ಅವರು ವಿದ್ಯಾರ್ಥಿಗಳ ಹೆಸರು ಓದಿದರು. ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಅಧ್ಯಕ್ಷ ಡಾ. ವಾಮನ ಶೆಣೈ ಶುಭ ಹಾರೈಸಿದರು. ಸಂಸ್ಕೃತ ಭಾರತಿಯ ಅಖಿಲಭಾರತ ಪ್ರಶಿಕ್ಷಣ ಪ್ರಮುಖರಾದ ಡಾ. ವಿಶ್ವಾಸ ಎಚ್. ಆರ್ ಪ್ರಸ್ತಾವಿಕ ಮಾತುಗಳನ್ನಾಡಿದರು. ವಿಜಯಾ ಮಸಾಲಾ ಯಜಮಾನಿನಿ ಮತ್ತು ಸಂಸ್ಕೃತ ವಿದ್ಯಾರ್ಥಿ ವಿಜಯಾ ಬಾಳಿಗಾ ಅವರು ಪಂಡಿತ ಎಂ. ನರಸಿಂಹ ಆಚಾರ್ಯ ಅವರನ್ನು ಪರಿಚಯಿಸಿದರು. ಪ್ರೇಮಾ ಪ್ರಸಾದ್ ಸ್ವಾಗತಿಸಿದರು. ದೇವಾನಂದ ಕಾರ್ಯಕ್ರಮ ನಿರ್ವಹಿಸಿದರು.