ಜಾತ್ಯತೀತ, ಪಕ್ಷತೀತ ಸೇವೆಯಿಂದ ಸಹಕಾರಿ ಕ್ಷೇತ್ರದಲ್ಲಿ ಗೌರವ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಸಚಿವ ಕೆ.ಎನ್.ರಾಜಣ್ಣ ಸಲಹೆ

mng Nov 18 Sahakari
Published on

ಮಂಗಳೂರು: ಸಹಕಾರಿ ಕ್ಷೇತ್ರದಲ್ಲಿ ಜಾತ್ಯತೀತವಾಗಿ, ಪಕ್ಷತೀತವಾಗಿ ಸಾಮಾನ್ಯ ಜನರಿಗೆ ಸೇವೆ ಕಲ್ಪಿಸಿದಾಗ ಹೆಚ್ಚಿನ ಗೌರವ ಪ್ರಾಪ್ತಿಯಾಗುತ್ತದೆ ಎಂದು ರಾಜ್ಯ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಸಲಹೆ ನೀಡಿದ್ದಾರೆ.


ರಾಜ್ಯ ಸಹಕಾರ ಮಹಾಮಂಡಲ ನಿಯಮಿತ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ವಿವಿಧ ಸಹಕಾರ ಸಂಘಗಳ ಸಹಯೋಗದಲ್ಲಿ ನಗರದ ಉರ್ವ ಮಾರ್ಕೆಟ್ ಮೈದಾನದಲ್ಲಿ ಶನಿವಾರ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಸಹಕಾರಿ ಆಂದೋಲನ ಜನರ ಆಂದೋಲನ ಆಗಬೇಕು ಎನ್ನುವುದು ನಮ್ಮ ಉದ್ದೇಶ. ಈ ಕ್ಷೇತ್ರ ಸೀಮಿತ ಜನರ ಕೈಯಲ್ಲಿ ಇರುವುದು ಸರಿಯಲ್ಲ. ಅದಕ್ಕಾಗಿ ಹೆಚ್ಚೆಚ್ಚು ಯುವಕರು, ಮಹಿಳೆಯರು ಈ ಕ್ಷೇತ್ರಕ್ಕೆ ಬರಬೇಕಿದೆ ಎಂದು ರಾಜಣ್ಣ ಕರೆ ನೀಡಿದರು.


ಜಾತ್ಯತೀತ, ಪಕ್ಷತೀತ ಸೇವೆಗೆ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾದರಿ. ಅವರ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿದ ಕಾರಣ ಉತ್ತಮ ಸಹಕಾರಿ ಆಗಿ ಎಲ್ಲ ಸಮುದಾಯ, ಪಕ್ಷ ಮುಖಂಡರ ಗೌರವ ಪಡೆಯುತ್ತಿದ್ದಾರೆ. ಸೇವೆ ಗುರುತಿಸಿ ಜನರು ನಾಯಕತ್ವ ನೀಡುತ್ತಾರೆ. ಯುವಕರು ಮತ್ತು ಮಹಿಳೆಯರು ಸಹಕಾರಿ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.


ದೇಶದ ಆರ್ಥಿಕತೆ ಹೆಚ್ಚಿಸುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ಹಳ್ಳಿಯಲ್ಲಿ ಹೆಚ್ಚು ಆರ್ಥಿಕ ಚಟುವಟಿಕೆ ನಡೆಯಬೇಕು. ಬೇಸಾಯದ ಕುಟುಂಬಗಳು ಉಪಕಸುಬು ಮಾಡಲು ಸ್ವಸಹಾಯ ಸಂಘಗಳ ಹಣಕಾಸಿನ ನೆರವು ಹೆಚ್ಚಾಗಬೇಕು. ಅವರು ಬೆಳೆದ ವಸ್ತುಗಳಿಗೆ ಮಾರುಕಟ್ಟೆ ದೊರಕಿಸಿದಾಗ ಹಳ್ಳಿ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ. 38 ಸಾವಿರ ನವೋದಯ ಸ್ವ ಸಹಾಯ ಸಂಘಗಳ ಮೂಲಕ ಹಳ್ಳಿಗಳಲ್ಲಿ ಮಹಿಳೆಯರು ಸ್ವಾವಲಂಬನೆಯ, ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರು.


ಸಹಕಾರಿ ಕ್ಷೇತ್ರದ ಕೊಡುಗೆ ಅನನ್ಯ
ವಿಧಾನಸಭಾ ಉಪಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಸಹಕಾರಿ ಸಪ್ತಾಹ ಯಶಸ್ವಿಯಾಗಿ ಆಯೋಜನೆಗೊಂಡಿದೆ. ಜನಸಾಮಾನ್ಯರು ಸ್ವಾವಲಂಬನೆ ಜೀವನ ಸಾಗಿಸಲು ಸಹಕಾರಿ ಕ್ಷೇತ್ರದ ಕೊಡುಗೆ ಮಹತ್ತರ. ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ನೂರಾರು ದಾಖಲೆಗಳಿಲ್ಲದೆ ಜನರ ಮುಖ ನೋಡಿ ಸಾಲ ಕೊಡುವುದಿದ್ದರೆ ಅದು ಸಹಕಾರಿ ಬ್ಯಾಂಕ್ ಮಾತ್ರ. ಎಸ್‌ಸಿಡಿಸಿಸಿ ಬ್ಯಾಂಕ್ ಎಲ್ಲ ತಂತ್ರಜ್ಞಾನ ಒಳಗೊಂಡು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಬೆಳೆದಿದೆ ಎಂದರು.


ರಾಷ್ಟ್ರದ ಸಹಕಾರಿ ರುವಾರಿ
ಸಹಕಾರಿ ಧ್ವಜಾರೋಹಣ ನೆರವೇರಿಸಿದ ಶಾಸಕ ಹಾಗೂ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, ರಾಜ್ಯದಲ್ಲೆ ಯಶಸ್ವಿ ಸಹಕಾರಿ ಆಂದೋಲನವು ಡಾ.ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿದೆ. ನಂಬಿಕೆ, ವಿಶ್ವಾಸ ಗಳಿಸಿರುವ ರಾಜೇಂದ್ರ ಕುಮಾರ್ ರಾಷ್ಟ್ರದ ಸಹಕಾರಿ ರುವಾರಿಯಾಗಿದ್ದಾರೆ. ಸಹಕಾರಿ ಕ್ಷೇತ್ರದ ಏಕೈಕ ನಾಯಕ ಆಗಿ ಹೊರಹೊಮ್ಮಿದ್ದಾರೆ. ಯುವಕರು ಹೆಚ್ಚೆಚ್ಚು ಸಕ್ರೀಯರಾಗಿ ನಂಬಿಕೆ, ವಿಶ್ವಾಸದಿಂದ ಸಹಕಾರ ಕ್ಷೇತ್ರವನ್ನು ಮುನ್ನಡೆಸಬೇಕಾಗಿದೆ ಎಂದರು.


ಸಹಕಾರಿ ಕ್ಷೇತ್ರದಿಂದ ಅಭಿವೃದ್ಧಿ
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂಎನ್ ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಕಟ್ಟ ಕಡೆಯ ಅಭಿವೃದ್ಧಿ ಸಹಕಾರಿ ಕ್ಷೇತ್ರದಿಂದ ಮಾತ್ರ ಸಾಧ್ಯ. ಇದನ್ನು ಮನಗಂಡ ಕೇಂದ್ರ ಸರ್ಕಾರ ಕೇಂದ್ರ ಸಹಕಾರ ಇಲಾಖೆಯನ್ನು ಆರಂಭಿಸಿದೆ. ಅಮಿತ್ ಶಾ ಅವರು ಸಹಕಾರ ಸಚಿವರಾಗಿದ್ದಾರೆ. ಜಿಲ್ಲೆಯಲ್ಲಿ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸ್ವಸಹಾಯ ಸಂಘಗಳಿಂದ ಸಾಧ್ಯವಾಗಿದೆ ಎಂದರು.
ಅತ್ಯುತ್ತಮ ಸಹಕಾರಿ ಬ್ಯಾಂಕ್‌ಗಳನ್ನು, ಸ್ವ ಸಹಾಯ ಸಂಘಗಳನ್ನು ಗೌರವಿಸಲಾಯಿತು. ನಂದಿನಿಯ ಹೊಸ ಉತ್ಪನ್ನ ರಸ ಕದಂ, ಶೇಂಗಾ ಬರ್ಫಿ ಬಿಡುಗಡೆ ಮಾಡಲಾಯಿತು. ಕರಾವಳಿ ಸಹಕಾರಿ ಪತ್ರಿಕೆಯ ವಿಶೇಷ ಪುರವಣಿಯನ್ನು ಈ ಸಂದರ್ಭ ಸಚಿವ ಕೆ.ಎನ್.ರಾಜಣ್ಣ ಬಿಡುಗಡೆ ಮಾಡಿದರು.


ಶಾಸಕರಾದ ವೇದವ್ಯಾಸ ಕಾಮತ್, ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ಅಭಯ ಚಂದ್ರ ಜೈನ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಬಿಲ್ಡರ್ ರೋಹನ್ ಮೊಂತೆರೋ, ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ನವೀನ್, ನಿರ್ದೇಶಕರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಆರ್.ಶ್ರೀಧರ್, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ.ನಿರಂಜನ್, ಟಿ.ಜಿ.ರಾಜಾರಾಮ ಭಟ್, ಭಾಸ್ಕರ ಎಸ್.ಕೋಟ್ಯಾನ್, ಎಂ.ವಾದಿರಾಜ ಶೆಟ್ಟಿ, ಎಸ್.ರಾಜು ಪೂಜಾರಿ, ಶಶಿಕುಮಾರ್ ರೈ ಬಿ., ಎಸ್.ಬಿ.ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಹರಿಶ್ಚಂದ್ರ, ಎಂ.ಮಹೇಶ್ ಹೆಗ್ಡೆ, ಕೆ.ಜೈರಾಜ್ ಬಿ.ರೈ, ಬಿ.ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್., ಸಿಇಒ (ಪ್ರಭಾರ) ಕೆ.ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.


ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ವಂದಿಸಿದರು. ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net