

ಮಂಗಳೂರು: ಕನ್ನಡ ಕವಿಗಳು ತಮ್ಮ ತೀಕ್ಷ್ಣವಾದ ರಚನೆಗಳ ಮೂಲಕ ನಾಡನ್ನು ಕಟ್ಟಿದವರು. ದೇಶಕ್ಕೆ ಸ್ವಾತಂತ್ರೃ ತಂದು ಕೊಡುವಲ್ಲೂ ಕವಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಂಯೋಜಕ ಡಾ.ಕೆ. ಮಾಧವ ಹೇಳಿದರು.
ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನ ಕಾಲೇಜಿನ ಕನ್ನಡ ಸಂಘ ‘ಸಂಪದ’ದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಅಂತರ್ ಕಾಲೇಜು ಮಟ್ಟದ ಭಾಷಣ, ನಾಡಗೀತೆ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಅದು ಹೃದಯದ ಭಾಷೆ. ಆಂಗ್ಲ ಭಾಷೆಯ ಕುರುಡು ಮೋಹ ನಮ್ಮ ಭಾಷೆಯನ್ನು ಕೊಲ್ಲುವುದರೊಂದಿಗೆ ಶ್ರೀಮಂತ ಸಂಸ್ಕೃತಿಯನ್ನೂ ಕೊಲ್ಲುತ್ತಿದೆ ಎಂದವರು ಹೇಳಿದರು.
ಎಸ್.ಸಿ.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಯು.ಕೆ ಖಾಲಿದ್ ಮಾತನಾಡಿ, ಪ್ರತಿಯೊಬ್ಬರಲ್ಲೂ ಅವರವರ ಮಾತೃಭಾಷೆಯ ಕುರಿತು ಪ್ರೀತಿ ಹುಟ್ಟಬೇಕಿದೆ. ಆಗ ಮಾತ್ರ ನಮ್ಮತನ ಉಳಿಯುತ್ತದೆ ಎಂದ ಅವರು ಭಾಷೆಯ ಕುರಿತು ನಾಡಿನ ಕುರಿತು ಕಾಳಜಿ ಹುಟ್ಟಲು ನಮ್ಮ ಕವಿಗಳ ರಚನೆಗಳ ಓದುವಿಕೆ ಸಹಕಾರಿಯಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡು ಇದು ಪುಣ್ಯದ ಮಣ್ಣು, ಪುರಾಣ ಪುರುಷರಿಂದ ತೊಡಗಿ ಎಲ್ಲರೂ ಪುಣ್ಯಸಿದ್ಧಿಗೆ ಈ ಕನ್ನಡ ನಾಡಿನ ಬೇರೆ ಬೇರೆ ಪ್ರದೇಶಗಳನ್ನು ಆಯ್ಕೆ ಮಾಡಿರುವುದು ಕಂಡುಬರುತ್ತದೆ ಎಂದರು.
ರಾಜ್ಯೋತ್ಸವ ಸಂಭ್ರಮದ ಭಾಗವಾಗಿ ಕಾಲೇಜಿನ ಕನ್ನಡ ಸಂಘ ’ಸಂಪದ’ ವತಿಯಿಂದ ಆಯೋಜಿಸಲಾಗಿದ್ದ ಅಂತರ್ ಕಾಲೇಜು ಮಟ್ಟದ ಭಾಷಣ ಮತ್ತು ನಾಡಗೀತೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಭಾಷಣ ಸ್ಪರ್ಧೆಯಲ್ಲಿ ಎಸ್.ಡಿ.ಎಂ ಕಾಲೇಜು ಉಜಿರೆ ಇಲ್ಲಿನ ಮಾನಸ ಅಗ್ನಿಹೋತ್ರಿ ಪ್ರಥಮ, ಐ.ಎಂ.ಜೆ ಕಾಲೇಜು ಕುಂದಾಪುರ ರಶಿತಾ ದ್ವಿತೀಯ, ಹಾಗೂ ನೆಹರು ಮೆಮೋರಿಯಲ್ ಕಾಲೇಜಿನ ಗಾನ. ಡಿ ತೃತೀಯ ಸ್ಥಾನ ಪಡೆದುಕೊಂಡರು.
ನಾಡಗೀತೆ ಸ್ಪರ್ಧೆಯಲ್ಲಿ ಡಾ.ಬಿ.ಬಿ ಹೆಗ್ಡೆ ಪ್ರಥಮದರ್ಜೆ ಕಾಲೇಜು ಕುಂದಾಪುರ ಇಲ್ಲಿನ ಶ್ರೇಯಾ ಖಾರ್ವಿ ಪ್ರಥಮ, ಶ್ರೀದೇವಿ ಕಾಲೇಜು ದೃತಿ .ಕೆ ದ್ವಿತೀಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಅನುಜ್ಞಾ ಲಕ್ಷ್ಮಿ ತೃತೀಯ ಸ್ಥಾನವನ್ನು ಪಡೆದುಕೊಂಡರು.
ಎಸ್.ಸಿ.ಎಸ್ ರಿವರ್ಸೈಡ್ ಶೈಕ್ಷಣಿಕ ಸಂಸ್ಥೆಯ ಪ್ರಾಂಶುಪಾಲೆ ಹೆಲೆನ್ ಲೋಬೊ, ’ಸಂಪದ’ಸಂಯೋಜಕ ಪ್ರೊ. ಸುಚಿತ್ರಾ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಕಾರ್ತಿಕ್ ಪ್ರಾಸ್ತಾವಿಕ ಮಾತುಗಳನ್ನಾಡಿ, ವಿದ್ಯಾರ್ಥಿಗಳಾದ ಸುಷ್ಮ, ವೃಂದ ನಿರೂಪಿಸಿದರು. ವಿದ್ಯಾರ್ಥಿ ಅನುಪ್ರಿಯ ಸ್ವಾಗತಿಸಿ, ನಿಖಿಲ್ ವಂದಿಸಿದರು.