10ರಂದು ನಿವಿಯಸ್ ಮಂಗಳೂರು ಮ್ಯಾರಥಾನ್- 2024 - ವಿಜೇತರಿಗೆ ಸಿಗಲಿದೆ ಒಟ್ಟು 12 ಲಕ್ಷ ರೂ. ಬಹುಮಾನ

niviyaus
Published on

ಮಂಗಳೂರು : ಮಂಗಳೂರು ರನ್ನರ್ಸ್ ಕ್ಲಬ್ ಆಶ್ರಯದಲ್ಲಿ ನಿವಿಯಸ್ ಮಂಗಳೂರು ಮ್ಯಾರಥಾನ್- 2024 ನವೆಂಬರ್ 10 ರಂದು ನಡೆಯಲಿದ್ದು, ಸುಮಾರು ಐದು ಸಾವಿರ ಮಂದಿ ಮಂಗಳೂರು ನಗರದಲ್ಲಿ ಮ್ಯಾರಥಾನ್ ನಡೆಸಲಿದ್ದಾರೆ.

ಅಂತಾರಾಷ್ಟ್ರೀಯ ಮಾನದಂಡಗಳ ಮೇಲೆ ಈ ಮ್ಯಾರಥಾನ್ ನಡೆಯಲಿದ್ದು, 8 ರಿಂದ 80 ವರ್ಷದ ವಿವಿಧ ವಯೋಮಾನದವರು ಭಾಗವಹಿಸಲಿದ್ದಾರೆ. ಭಾರತದ 18 ರಾಜ್ಯಗಳಲ್ಲದೆ, ಜಪಾನ್, ಇಥಿಯೋಪಿಯಾ, ಕೀನ್ಯಾ, ಸ್ವಿಟ್ಜಲೆರ್ಂಡ್ ಮತ್ತು ಸ್ಪೇನ್‌ನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮ್ಯಾರಥಾನ್ ನಿರ್ದೇಶಕ ಅಭಿಲಾಷ್ ಡೊಮಿನಿಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಗಳಾ ಸ್ಟೇಡಿಯಂನಿಂದ ಆರಂಭಗೊಂಡು ತಣ್ಣೀರುಬಾವಿ ವರೆಗೆ ಮ್ಯಾರಥಾನ್ ಸಾಗಲಿದೆ. ನಸುಕಿನ 4 ಗಂಟೆಗೆ ಮ್ಯಾರಥಾನ್ ಆರಂಭವಾಗಲಿದ್ದು, 8 ಗಂಟೆಗೆ ಮುಕ್ತಾಯವಾಗಲಿದೆ. ಮ್ಯಾರಥಾನ್ ಸಲುವಾಗಿ ಸಂಚಾರ ವ್ಯವಸ್ಥೆಯಲ್ಲೂ ಮಾರ್ಪಾಟುಗೊಳಿಸಲಾಗಿದೆ ಎಂದರು.

ಪೂರ್ಣ ಮ್ಯಾರಥಾನ್ (42.195 ಕಿ.ಮೀ), 20 ಮೈಲರ್, ಹಾಫ್ ಮ್ಯಾರಥಾನ್ (21.097 ಕಿ.ಮೀ), 10 ಕಿ.ಮೀ, 5 ಕಿಮೀ, 2 ಕೆ ಗಮ್ಮತ್ ಓಟ ಮತ್ತು ವಿದ್ಯಾರ್ಥಿ ಓಟ. 10ಕೆ ವರ್ಗದಲ್ಲಿ ಭಾಗವಹಿಸುವವರಿಗೆ ತಣ್ಣೀರುಬಾವಿ ಜೆಟ್ಟಿಯಿಂದ ಮಂಗಳಾ ಸ್ಟೇಡಿಯಂಗೆ ಉಚಿತ ದೋಣಿ ಸಂಚಾರ ವ್ಯವಸ್ಥೆಗೊಳಿಸಲಾಗಿದೆ. ಮ್ಯಾರಥಾನ್‌ನಲ್ಲಿ ಭಾಗವಹಿಸುವವರಿಗೆ ಒಟ್ಟು 12 ಲಕ್ಷ ರೂ. ಬಹುಮಾನವನ್ನು ವಿವಿಧ ವಿಭಾಗಗಳಲ್ಲಿ ಬಹುಮಾನವಾಗಿ ನೀಡಲಾಗುವುದು. ಪೂರ್ಣ ಮ್ಯಾರಥಾನ್ ವಿಜೇತರಿಗೆ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ 35 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದರು.

ನಿರ್ದೇಶಕರಾದ ರಮೇಶ್ ಬಾಬು, ಅಭಿಷೇಕ್ ಹೆಗ್ಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net