

ಮಂಗಳೂರು: ಕುಖ್ಯಾತ ರೌಡಿ ಆಕಾಶಭವನ ಶರಣ್ ಕಾಲಿಗೆ ಅಪರಾಧ ಪತ್ತೆದಳ ಪೊಲೀಸರು ಗುಂಡು ಹಾರಿಸಿ ಮಂಗಳವಾರ ಬಂಧಿಸಿದ್ದಾರೆ.
ನಗರದ ಜೆಪ್ಪು ಕುಡುಪಾಡಿಯಲ್ಲಿ ಸಾಗುತ್ತಿದ್ದಾಗ ಪೊಲೀಸರು ಬಂಧಿಸಲು ಯತ್ನಿಸಿದಾಗ ಆರೋಪಿ ಪೊಲೀಸರ ಮೇಲೆ ಹಲ್ಲೆಗೈದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಶರಣ್‌ನನ್ನು ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜ.5ರಂದು ಆತನನ್ನು ಬಂಧಿಸಲು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಅವರ ಮೇಲೆ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ ಬಳಿಕ ಆತನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದರು.
ಶರಣ್ ವಿರುದ್ಧ 22 ಪ್ರಕರಣ: ಆಕಾಶಭವನ ಶರಣ್ ವಿರುದ್ದ ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿ, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯಲ್ಲಿ ಒಟ್ಟು 25ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 6 ಕೊಲೆ, 2 ಅತ್ಯಾಚಾರ, 2 ಕೊಲೆ ಯತ್ನ, 2 ದರೋಡೆಗೆ ಯತ್ನ, 4 ಹಲ್ಲೆ, 2 ಅತ್ಯಾಚಾರ, 1 ದರೋಡೆ ಮತ್ತು ಎನ್‌ಡಿಪಿಎಸ್ ಕಾಯ್ದೆ, ಕಳವು, ಹಫ್ತಾ ವಸೂಲಿ ಪ್ರಕರಣಗಳು ದಾಖಲಾಗಿವೆ. 2017 ಫೆ.8ರಿಂದ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು. 2017 ಡಿ.26ರಂದು ಬಿಡುಗಡೆಯಾಗಿದ್ದ. ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಡಾ.ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಈತ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಉಳಿದ ಆರೋಪಿಗಳಿಗೆ ಶಿಕ್ಷೆಯಾಗಿದೆ.