

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ನ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಣಿಯಲ್ಲಿ ಮಂಗಳವಾರ ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಮನೆ ದರೋಡೆ ನಡೆಸಿದ ನಾಲ್ವರು (ಚಡ್ಡಿ ಗ್ಯಾಂಗ್) ಆರೋಪಿಗಳನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಧ್ಯಪ್ರದೇಶದ ಗುಣಾ ಜಿಲ್ಲೆಯ ರಗೋಗರ್ ತಾಲೂಕು ವಿಶ್ವನಗರದ ರಾಜು ಸಿಂಗ್ವಾನಿಯ (24), ಭೂಪಾಲ್, ಗುಲಾಬ್ಗಂಜ್ನ ಮಯೂರ್ (30), ಆಶೋಕನಗರ ಮಾಧವ್ಗಡ್ ನಿವಾಸಿ ಬಾಲಿ (22), ಗುಣಾ ಜಿಲ್ಲೆಯ ವಿಕ್ಕಿ (21) ಬಂಧಿತರು.
ಪ್ರಕರಣದ ವಿವರ: ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ ಸುಮಾರು 30 ರಿಂದ 40 ವರ್ಷ ಪ್ರಾಯದ 4 ಜನ ಯುವಕರು (ಚೆಡ್ಡಿ ಗ್ಯಾಂಗ್) ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯ ವಿಕ್ಟರ್ ಮೆಂಡೋನ್ಸಾ ಎಂಬವರ ಮನೆಯ ಕಿಟಕಿಯ ಗ್ರಿಲ್ ಅನ್ನು ತುಂಡರಿಸಿ ಒಳ ಪ್ರವೇಶಿಸಿತ್ತು. ವಿಕ್ಟರ್ ಮೆಂಡೋನ್ಸಾ ಹಾಗೂ ಅವರ ಪತ್ನಿ ಪ್ಯಾಟ್ರಿಸಿಯಾ ಮೆಂಡೋನ್ಸ ರವರಿಗೆ ಹಲ್ಲೆ ನಡೆಸಿ, ಬೊಬ್ಬೆ ಹಾಕದಂತೆ ಹಾಗೂ ಫೋನ್ ಮಾಡದಂತೆ ಬೆದರಿಸಿ ಮನೆಯಲ್ಲಿದ್ದ 3 ಮೊಬೈಲ್ ಫೋನ್ ಗಳನ್ನು ನೆಲಕ್ಕೆ ಬಡಿದು ಜಖಂಗೊಳಿಸಿ ಕಪಾಟಿನ ಲಾಕರ್ ಒಳಗೆ ಇರಿಸಿದ್ದ ಸುಮಾರು 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ಮತ್ತು 1 ಲಕ್ಷ ರೂ. ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, 3000 ರೂ. ನಗದು ಸುಲಿಗೆ ಮಾಡಿ, ಮನೆಯ ವೆರಾಂಡದಲ್ಲಿದ್ದ ಕಾರಿನ ಸಮೇತ ಪರಾರಿಯಾಗಿದ್ದರು.
ಮಿಂಚಿನ ಕಾರ್ಯಾಚರಣೆ: ಪ್ರಕರಣ ನಡೆದ ಮಾಹಿತಿ ಬಂದ ಕೂಡಲೇ ಉರ್ವಾ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಯವರು ತಕ್ಷಣ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಿದ್ದ ಮಾಹಿತಿಯನ್ನು ನಗರ ನಿಸ್ತಂತು ಕೊಠಡಿಗೆ ನೀಡಿದ್ದು, ಮುಲ್ಕಿ ಬಸ್ಸು ನಿಲ್ದಾಣದ ಸಮೀಪ ನಿಲ್ಲಿಸಿದ್ದ ಕಳವು ಮಾಡಲ್ಪಟ್ಟ ಕಾರನ್ನು ಪತ್ತೆಮಾಡಿ ವಶಕ್ಕೆ ಪಡೆದು ಸ್ಥಳದ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆ.ಎಸ್.ಅರ್.ಟಿ.ಸಿ ಬಸ್ಸಿನಲ್ಲಿ ಶಂಕಿತ ಆರೋಪಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು.
ಕೆ.ಎಸ್.ಅರ್.ಟಿ.ಸಿ ಅಧಿಕಾರಿಗಳನ್ನು ಸಂಪರ್ಕಿಸಿ, ಬೆಳಗಿನ ಜಾವ ಮುಲ್ಕಿ ಕಡೆಯಿಂದ ಮಂಗಳೂರಿಗೆ ಬಂದ ಕೆ.ಎಸ್.ಅರ್.ಟಿ.ಸಿ ಬಸ್ಸುಗಳ ಮಾಹಿತಿ ಪಡೆಯಲಾಗಿ ಬಾಗಲಕೋಟೆ ಕಡೆಯಿಂದ ಮಂಗಳೂರಿಗೆ ಬಂದ ಕೆ.ಎಸ್.ಅರ್.ಟಿ.ಸಿ ಬಸ್ಸಿನ ನಿರ್ವಾಹಕರು ಅವರ ಬಸ್ಸಿನಲ್ಲಿ ಮುಲ್ಕಿಯಿಂದ 4 ಜನರು ಒಟ್ಟಿಗೆ ಪ್ರಯಾಣಿಸಿದ ಮಾಹಿತಿ ತಿಳಿಸಿದ್ದಾರೆ. ಈ ವ್ಯಕ್ತಿಗಳು ಅವರಲ್ಲಿ ಬೆಂಗಳೂರಿಗೆ ಹೋಗುವ ಬಸ್ಸಿನ ಬಗ್ಗೆ ಮಾಹಿತಿ ಕೇಳಿದ ಬಗ್ಗೆ ತಿಳಿಸಿದ್ದು, ಅವರ ಮಾಹಿತಿಯಂತೆ ತಕ್ಷಣ ಮಂಗಳೂರಿನಿಂದ ಬೆಂಗಳೂರಿಗೆ ಹೋದ ಬಸ್ಸಿನ ಬಗ್ಗೆ ವಿವರ ಪಡೆದು, ಬಸ್ಸು ನಂಬ್ರ ಕೆಎ-19-ಎಫ್-3575 ದ ನಿರ್ವಾಹಕರನ್ನು ಸಂಪರ್ಕಿಸಿ ಅವರು ತಿಳಿಸಿದ ಮಾಹಿತಿಯಂತೆ ವಿಷಯವನ್ನು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಿಳಿಸಲಾಯಿತು. ಸಕಲೇಶಪುರ ಡಿವೈಎಸ್ಪಿ, ಸಿಪಿಸಿ ಹಾಗೂ ಸಿಬ್ಬಂದಿಗಳ ತಂಡ ಸಕಲೇಶಪುರ ಸಮೀಪ ಈ ಬಸ್ಸನ್ನು ತಡೆದು ನಿಲ್ಲಿಸಿ ಅದರಲ್ಲಿ ಪ್ರಯಾಣಿಸುತ್ತಿದ್ದ 4 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಅವರುಗಳು ಕೃತ್ಯವೆಸಗಿದ ಬಗ್ಗೆ ಒಪ್ಪಿದ್ದಾರೆ. ಅವರ ವಶದಲ್ಲಿದ್ದ ಮಂಗಳೂರು ನಗರದಲ್ಲಿ ಸುಲಿಗೆ ಮಾಡಿದ್ದ ಎಲ್ಲಾ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್ ಗಳು ಹಾಗೂ ಹಣವನ್ನು ವಶಪಡಿಸಿ ಉರ್ವಾ ಪೊಲೀಸ್ ಅಧಿಕಾರಿಗಳಿಗೆ ವಶಕ್ಕೆ ನೀಡಿರುತ್ತಾರೆ. ಉರ್ವ ಪೊಲೀಸರು ಮುಂದಿನ ತನಿಖೆ ನಡೆಸಲಿದ್ದಾರೆ.