

ಮಂಗಳೂರು: ಹರಿತ ಆಯುಧಗಳಂತೆ ರಸ್ತೆ ಮಗ್ಗುಲಿಗೆ ಎದ್ದು ನಿಂತಿರುವ ಕಬ್ಬಿಣದ ಕಂಬಿಗಳು... ಫುಟ್‌ಪಾತ್‌ಗಳ ನಿರೀಕ್ಷೆಯಲ್ಲಿ ಬಾಯಿ ತೆರೆದ ಕಾಂಕ್ರೀಟ್ ತೋಡುಗಳ ಸ್ಥಬ್ಧಚಿತ್ರಗಳು... ವಾಹನ ಚಾಲಕರನ್ನು ಆಗಾಗ ಬೆಸ್ತು ಬೀಳಿಸುವಂತೆ ದಿಢೀರ್ ಕೊನೆಗೊಳ್ಳುವ ಮುಖ್ಯ ರಸ್ತೆಗಳ ಸಂಪರ್ಕ... ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದ ಬಳಿಕ ಮಂಗಳೂರು ನಗರದ ಹೃದಯಭಾಗದ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ. ಜನ ಸುತ್ತು ಬಳಸಿ ಸಂಚರಿಸುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ದಿನನಿತ್ಯ ಸಾವಿರಾರು ಜನ ಭೇಟಿ ನೀಡುವ ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ, ಆಸ್ಪತ್ರೆಗಳು ಈ ಪ್ರದೇಶದಲ್ಲೇ ಇವೆ.
-ಅಬ್ದುಲ್ ರವೂಫ್, ಪ್ರತಿಪಕ್ಷ ನಾಯಕರು, ಮಹಾನಗರ ಪಾಲಿಕೆ, ಮಂಗಳೂರು
ಇಡೀ ಪ್ರಕರಣ ನಿಭಾಯಿಸುವಲ್ಲಿ ಜಿಲ್ಲಾಡಳಿತ ವಿಫಲಗೊಂಡಿದೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಒಂದೇ ಸರ್ಕಾರವಿದೆ. ಸರ್ಕಾರದ ಅಡ್ವಕೇಟ್ ಜನರಲ್ ಇದ್ದಾರೆ. ನ್ಯಾಯಾಲಯಕ್ಕೆ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದರೆ ಸಮಸ್ಯೆ ದೀರ್ಘಕಾಲ ಮುಂದುವರಿಯಲು ಅವಕಾಶ ಇರುತ್ತಿಲಿಲ್ಲ.
-ಹನುಮಂತ ಕಾಮತ್, ಅಧ್ಯಕ್ಷರು, ನಾಗರಿಕ ಹಿತರಕ್ಷಣಾ ಸಮಿತಿ
ಪರಿಸರ ಬಗ್ಗೆ ನ್ಯಾಯಾಲಯ ಕಾಳಜಿ ವಹಿಸುವುದು ಅಗತ್ಯ. ಅದರ ಜತೆ ನಗರದ ಹೃದಯ ಭಾಗದ ಹಲವು ಕಾಮಗಾರಿಗಳು ದಿಢೀರ್ ಸ್ಥಗಿತಗೊಂಡರೆ ಜನರಿಗೆ ಉಂಟಾಗುವ ಸಮಸ್ಯೆಯನ್ನೂ ಪರಿಗಣಿಸಬೇಕು.
-ಅಕ್ಷಯ್ ಶ್ರೀಧರ್, ವ್ಯವಸ್ಥಾಪಕ ನಿರ್ದೇಶಕರು (ಪ್ರಭಾರ) ಸ್ಮಾರ್ಟ್ ಸಿಟಿ ಕಂಪನಿ
ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಜನರಿಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸಲು ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ. ಪಚ್ಚನಾಡಿಯಲ್ಲೇ ಪ್ರತ್ಯೇಕ ಸ್ಥಳದಲ್ಲಿ ರಸ್ತೆ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದ್ದು, ಈ ಬಗ್ಗೆ ಜ.21ರಂದು ವಿಚಾರಣೆ ಸಂದರ್ಭ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುವುದು. ಶೀಘ್ರ ಸಮಸ್ಯೆ ಬಗೆಹರಿಯಬಹುದು.
33 ಕಾಮಗಾರಿ: ಸಾರ್ವಜನಿಕ ಹಿತಾಸಕ್ತಿ ಮೇಲಿನ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಸ್ಮಾರ್ಟ್ ಸಿಟಿ ಕಾಮಗಾರಿ ಸಂದರ್ಭ ಪರಿಸರ ಕಾಯ್ದೆ ಉಲ್ಲಂಘನೆಯಾಗಿದೆ. ರಸ್ತೆ ತ್ಯಾಜ್ಯಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಕೆಲಸ ಮಾಡಲಾಗುತ್ತಿದೆ ಎಂದು ಪರಿಗಣಿಸಿ ನಗರದಲ್ಲಿ ನಡೆಯುತ್ತಿರುವ ಎಲ್ಲ 33 ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಜನವರಿ 21ರಂದು ಪ್ರಕರಣ ನ್ಯಾಯಾಲಯದಲ್ಲಿ ಮರು ವಿಚಾರಣೆಗೆ ಬರಲಿದ್ದು, ನ್ಯಾಯಾಲಯಕ್ಕೆ ತೃಪ್ತಿಕರ ಉತ್ತರ ನೀಡಲು ಸ್ಮಾರ್ಟ್ ಸಿಟಿ ಕಂಪನಿ ಸಿದ್ಧತೆ ಮಾಡಿಕೊಂಡಿದೆ.