ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮಂಗಳೂರು ಗಲಭೆಗೆ ವರ್ಷ

mangalore new .
Published on

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಮಂಗಳೂರಿನಲ್ಲಿ ಹಿಂಸಾತ್ಮಕ ಪ್ರತಿಭಟನೆ ಹಾಗೂ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದು ವರ್ಷವಾಗುತ್ತಿದೆ. ಪ್ರಕರಣದ ಮ್ಯಾಜಿಸ್ಟ್ರಿಯಲ್ ತನಿಖೆಯ ವರದಿ ಸರ್ಕಾರದ ಅಂಗಳಕ್ಕೆ ತಲುಪಿದೆ. ಸಿಐಡಿ ತನಿಖೆಯ ಮೊದಲ ಹಂತದ ವರದಿಯೂ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ.

ಸೆಕ್ಷನ್ 144ರ ನಡುವೆಯೂ 2019ರ ಡಿ.19ರಂದು ನಗರದ ಸ್ಟೇಟ್‌ಬ್ಯಾಂಕ್ ಬಳಿ ಸಂಘಟನೆಯೊಂದರ ಕಾರ್ಯಕರ್ತರು ಏಕಾಏಕಿ ಪ್ರತಿಭಟನೆಗೆ ಮುಂದಾಗಿದ್ದರು. ಸ್ಥಳದಿಂದ ತೆರಳಲು ಪೊಲೀಸರು ಸೂಚಿಸಿದರೂ ಮನ್ನಣೆ ಸಿಗದಿದ್ದಾಗ ಲಾಠಿಚಾರ್ಜ್ ನಡೆದಿತ್ತು. ಬಳಿಕ ಪೊಲೀಸರ ಮೇಲೆ ಕಲ್ಲು, ಗಾಜು ತೂರಾಟ ನಡೆದು ಗಲಭೆ ಉದ್ಭವಿಸಿತ್ತು. ಬಂದರು ಪರಿಸರಕ್ಕೂ ವಿಸ್ತರಿಸಿ ಅಜೀಜುದ್ದೀನ್ ಹಾಗೂ ಬೀಬಿ ಆಲಾಬಿ ರಸ್ತೆಯಲ್ಲಿ ಸಾವಿರಾರು ಮಂದಿ ಜಮಾಯಿಸಿ ಕಲ್ಲು ತೂರಾಟ ನಡೆಸಿದ್ದರು. ಬಂದರು ಠಾಣೆಗೂ ಕಲ್ಲು ತೂರಾಟ ನಡೆಸಿ ಠಾಣೆಗೆ ಮುತ್ತಿಗೆ ಹಾಕುವ ಯತ್ನವೂ ನಡೆದಿತ್ತು. ಪೊಲೀಸರು ಹಲವು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಪೊಲೀಸರ ಮೇಲೆ ದಾಳಿ ಹೆಚ್ಚಾಗುತ್ತಿದ್ದಂತೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದಾಗ ಕಂದಕ್ ನಿವಾಸಿ ಅಬ್ದುಲ್ ಜಲೀಲ್ ಹಾಗೂ ಕುದ್ರೋಳಿಯ ನೌಶೀನ್ ಮೃತಪಟ್ಟಿದ್ದರು. ಪ್ರತಿಭಟನಾಕಾರರು, ಪೊಲೀಸರು ಹಾಗೂ ಸಂಧಾನಕ್ಕೆ ತೆರಳಿದ ಮುಸ್ಲಿಂ ಸಂಘಟನೆ ಮುಖಂಡರೂ ಘಟನೆಯಲ್ಲಿ ಗಾಯಗೊಂಡಿದ್ದರು.

ಎರಡೂ ತನಿಖೆ ಪೂರ್ಣ: ಘಟನೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಸಿಐಡಿ ಹಾಗು ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಿತ್ತು. ಸಿಐಡಿ ಎಸ್ಪಿ ರಾಹುಲ್ ಶಹಾಪುರ್ ನೇತೃತ್ವದ ತಂಡ ಹಿಂಸಾಚಾರ ನಡೆದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ, ಸಾಕ್ಷೃ ಸಂಗ್ರಹಿಸಿತ್ತು. ಕೂಲಂಕಷ ತನಿಖೆ ಬಳಿಕ ಮೊದಲ ಹಂತದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಮ್ಯಾಜಿಸ್ಟ್ರಿರಿಯಲ್ ತನಿಖೆಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರನ್ನು ಸರ್ಕಾರ ತನಿಖಾಧಿಕಾರಿಯನ್ನಾಗಿ ಮಾಡಿತ್ತು. ಅವರು ನವೆಂಬರ್‌ನಲ್ಲಿ ತನಿಖೆ ಪೂರ್ಣಗೊಳಿಸಿ ಎರಡೂವರೆ ಸಾವಿರ ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. 14 ಬಾರಿ ವಿಚಾರಣೆ ನಡೆಸಿದ್ದು, 114 ಸಾಕ್ಷಿಗಳ ಹೇಳಿಕೆ ಪಡೆದಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸಾಕ್ಷಿ ಹೇಳಿದ್ದರು. ಉಭಯ ಕಡೆಗಳ ಸಾಕ್ಷಿ ಸಂಗ್ರಹಿಸಿ ತನಿಖೆ ನಡೆಸಲಾಗಿದ್ದು, ಅಂದಿನ ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷ, ಡಿಸಿಪಿ ಅರುಣಾಂಗ್ಶುಗಿರಿ ಕೂಡ ವಿಚಾರಣೆಗೆ ಹಾಜರಾಗಿದ್ದರು. ಜಾಲತಾಣಗಳ ಕ್ಲಿಪ್ಪಿಂಗ್ಸ್ ಮತ್ತಿತರ ಸಾಕ್ಷ್ಯಾಧಾರಗಳು ತನಿಖಾ ತಂಡಕ್ಕೆ ಸಲ್ಲಿಕೆಯಾಗಿತ್ತು.

ಎರಡೂ ತನಿಖೆಗಳ ವರದಿಗಳಲ್ಲಿ ಘಟನೆಗೆ ಕಾರಣ, ಘಟನಾವಳಿಯ ಸರಣಿ ಹಾಗೂ ಗೋಲಿಬಾರ್‌ಗೆ ಕಾರಣವಾದ ಸನ್ನಿವೇಶದ ಬಗ್ಗೆ ಕೂಲಂಕಷವಾಗಿ ಉಲ್ಲೇಖಿಸಲಾಗಿದೆ. ವರದಿ ಅಂಶಗಳನ್ನು ಗೌಪ್ಯವಾಗಿ ಇರಿಸಲಾಗಿದ್ದು, ಹಿಂಸಾತ್ಮಕ ಘಟನೆ ನಿಯಂತ್ರಿಸಲು ಗೋಲಿಬಾರ್ ಅನಿವಾರ್ಯವಾಗಿತ್ತೇ? ಪೊಲೀಸ್ ಕ್ರಮಕ್ಕೆ ಕ್ಲೀನ್‌ಚಿಟ್ ನೀಡಲಾಗಿದೆಯೇ? ಸರ್ಕಾರ ಈ ವರದಿ ಬಗ್ಗೆ ಏನು ಕ್ರಮ ಕೈಗೊಳ್ಳಲಿದೆ ಇತ್ಯಾದಿ ಕುತೂಹಲಕಾರಿ ಅಂಶಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಾಗಿದೆ.

ಜಾಮೀನಿನಲ್ಲಿ ಬಿಡುಗಡೆ: ಘಟನೆಗೆ ಸಂಬಂಧಿಸಿ ಪೊಲೀಸರು ಬಂದರು ಠಾಣೆಯಲ್ಲಿ 10, ಪಾಂಡೇಶ್ವರದಲ್ಲಿ 3, ಗ್ರಾಮಾಂತರದಲ್ಲಿ 1 ಕೇಸು ಸಹಿತ ಒಟ್ಟು 24 ಪ್ರಕರಣ ದಾಖಲಿಸಿದ್ದಾರೆ. ಕಲ್ಲು ಹಾಗೂ ಬಾಟಲಿ ತೂರಾಟದಲ್ಲಿ ಕರಾವಳಿಯಲ್ಲಿ ಮೊದಲ ಬಾರಿಗೆ ಕಾಶ್ಮೀರಿ ಮಾದರಿಯಲ್ಲಿ ಮುಖಕ್ಕೆ ಮುಸುಕು ಹಾಕಿ ಗಲಭೆಗೆ ಯತ್ನಿಸಿದ ಬಗ್ಗೆ ಪೊಲೀಸರು ದೂರು ನೀಡಿದ್ದರು. 15ಕ್ಕೂ ಅಧಿಕ ವಿವಿಧ ಕಾಯ್ದೆಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಕೇಸು ದಾಖಲಿಸಿದ್ದು, 32 ಮಂದಿ ಬಂಧನವಾಗಿತ್ತು. ಬಹುತೇಕ ಮಂದಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ.

ಪರಿಹಾರಕ್ಕೆ ತಡೆ: ಗೋಲಿಬಾರ್‌ನಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರ ಘೋಷಿಸಿದ್ದ ಪರಿಹಾರ ಧನ, ಮೃತರ ವಿರುದ್ಧವೂ ಕೇಸ್ ದಾಖಲಾದ ಕಾರಣ ತಡೆ ಹಿಡಿಯಲ್ಪಟ್ಟಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಹಾಗೂ ಕೆಲವು ಸಂಘಟನೆಗಳು ವೈಯಕ್ತಿಕವಾಗಿ ಪರಿಹಾರ ನೀಡಿವೆ.

ಮಂಗಳೂರಿನಲ್ಲಿ ಡಿ.19ರಂದು ನಡೆದ ಹಿಂಸಾತ್ಮಕ ಘಟನೆ ಹಾಗೂ ಗೋಲಿಬಾರ್ ಪ್ರಕರಣ ಸಂಬಂಧಿಸಿ ಮ್ಯಾಜಿಸ್ಟ್ರಿಯಲ್ ತನಿಖೆ ಪೂರ್ಣಗೊಳಿಸಲಾಗಿದೆ. ತನಿಖೆಯ ಸಮಗ್ರ ವರದಿಯನ್ನು ನವೆಂಬರ್‌ನಲ್ಲಿ ರಾಜ್ಯ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ.

-ಜಿ.ಜಗದೀಶ್, ಮ್ಯಾಜಿಸ್ಟ್ರಿಯಲ್ ತನಿಖಾಧಿಕಾರಿ

ಮಂಗಳೂರು ಗಲಭೆಗೆ ಸಂಬಂಧಿಸಿ ಮ್ಯಾಜಿಸ್ಟ್ರಿಯಲ್ ತನಿಖೆ ಪೂರ್ಣಗೊಂಡು ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸಿಐಡಿ ತನಿಖೆಯೂ ಪೂರ್ಣಗೊಂಡಿದ್ದು, ಮೊದಲ ಹಂತದ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ತನಿಖೆಯ ಮುಂದುವರಿದ ಭಾಗದ ವರದಿ ಇನ್ನಷ್ಟೇ ಸಲ್ಲಿಕೆಯಾಗಬೇಕಿದೆ.

- ವಿನಯ ಗಾಂವ್‌ಕರ್, ಡಿಸಿಪಿ, ಸಂಚಾರ ಮತ್ತು ಅಪರಾಧ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net