

ಮಂಗಳೂರು: ರಾಜ್ಯದಲ್ಲಿ 1-7-2022 ರಿಂದ 31-7-2024 ರ ಅವಧಿಯಲ್ಲಿ ನಿವೃತ್ತರಾದ ಸರ್ಕಾರಿ ಅಧಿಕಾರಿ/ನೌಕರ ವರ್ಗದ 26,700 ನಿವೃತ್ತರಿಗೆ 7 ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯ ನೀಡಲು ಮುಖ್ಯಮಂತ್ರಿಗಳಿಗೆ ಆಗ್ರಹಿಸಿ ಫೆ.28 ರಿಂದ ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಬೃಹತ್ ಪ್ರತಿಭಟನೆ, ಹೋರಾಟ ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿಗಳು 10 ದಿನಗಳ ಒಳಗಡೆ ನಮ್ಮ ಬೇಡಿಕೆ ಈಡೇರಿಕೆ ಕುರಿತು ಚರ್ಚೆಗೆ ಆಹ್ವಾನಿಸದಿದ್ದಲ್ಲಿ ಹೋರಾಟಗಾರರಾದ ಅಣ್ಣಾ ಹಜಾರೆ ಮತ್ತು ಡಾ.ಸಂತೋಷ ಹೆಗಡೆ ಅವರುಗಳ ನೇತೃತ್ವದಲ್ಲಿ ಬೆಂಗಳೂರು ಚಲೋ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ, ಹೋರಾಟವನ್ನು ಅನಿರ್ಧಿಷ್ಟ ಅವಧಿಗೆ ನಡೆಸಲು ನಿಶ್ಚಯಿಸಿದ್ದೇವೆ ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಪ್ರಧಾನ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಭಿನ್ನ ರೀತಿಯ ಬೆಂಗಳೂರು ಚಲೋ: ಮುಖ್ಯಮಂತ್ರಿಗಳು ಒಂದು ವಾರದೊಳಗಾಗಿ ಬೇಡಿಕೆ ಈಡೇರಿಕೆ ಕುರಿತು ಚರ್ಚೆಗೆ ಆಹ್ವಾನಿಸದಿದ್ದಲ್ಲಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಿ ಫೆ.28ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಪ್ರಮುಖ ಮಠಾಧೀಶರು, ಸಾಮಾಜಿಕ ಹೋರಾಟಗಾರರಾದ ಬಿ. ಡಿ. ಹಿರೇಮಠ,, ಎಸ್. ಆರ್. ಹಿರೇಮಠ ಮುಂತಾದವರ ಬೆಂಬಲ ಕೋರಿ ಬೆಂಗಳೂರು ಚಲೋ ರಾಜ್ಯ ಮಟ್ಟದ ಅನಿರ್ಧಿಷ್ಟಾವಧಿ ಬೃಹತ್ ಪ್ರತಿಭಟನೆ-ಹೋರಾಟ ಸಮಾವೇಶ ನಡೆಸಲಾಗುತ್ತದೆ. ದಕ ಜಿಲ್ಲೆಯಿಂದ 600ಕ್ಕೂ ಅಧಿಕ ಮಂದಿ ಅವರ ಕುಟುಂಬದ ಜತೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಿರಿಲ್ ರಾಬರ್ಟ್ ಡಿಸೋಜ ಮಾಹಿತಿ ನೀಡಿದರು.
ಈ ಸಂದರ್ಭ ನಿವೃತ್ತ ಸರ್ಕಾರಿ ನೌಕರರಾದ ಸ್ಟ್ಯಾನಿ ತಾವ್ರೋ, ಮೋಹನ ಬಂಗೇರಾ ತೊಕೊಟ್ಟು, ನಾರಾಯಣ ತಲಪಾಡಿ, ಉಮೇಶ್ ಕುಮಾರ್, ರಾಜಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.
ನಿವೃತ್ತ ಸರಕಾರಿ ನೌಕರರ ಸಂಘದ ಬೆಂಬಲ: ನಿವೃತ್ತ ಸರ್ಕಾರಿ ನೌಕರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇದರ ಜತೆಯಲ್ಲಿ ವೇತನ ಆಯೋಗ ಶಿಫಾರಸು ಮಾಡಿದಂತೆ ನಿವೃತ್ತ ನೌಕರರಿಗೆ ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆ ಜಾರಿಗೆ ಬರುವ ತನಕ ಮಾಸಿಕ 500 ವೈದ್ಯಕೀಯ ಭತ್ತೆ ನೀಡುವುದು, 70ರಿಂದ 80 ವರ್ಷ ಪೂರ್ತಿಗೊಳಿಸಿದ ನಿವೃತ್ತರಿಗೆ ಶೇ.10ರಷ್ಟು ಹೆಚ್ಚುವರಿ ಪಿಂಚಣಿಗೆ ಆದೇಶ ನೀಡಬೇಕು ಎಂದು ದ.ಕ.ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಸೀತಾರಾಮ್ ಆಗ್ರಹಿಸಿದ್ದಾರೆ.
ಇಂದು ಡಾ.ಹೆಗ್ಗಡೆ ಭೇಟಿ
ಈ ಹೋರಾಟಕ್ಕೆ ಬೆಂಬಲ ಪಡೆಯಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರನ್ನು ಫೆ.26ರಂದು ಭೇಟಿಯಾಗಲಿದ್ದೇವೆ. ತಾವು ನಿವೃತ್ತ ಸರಕಾರಿ ನೌಕರರ ಧ್ವನಿಯಾಗಬೇಕು ಎಂದು ಅವರನ್ನು ಆಗ್ರಹಿಸಲಿದ್ದೇವೆ. ಅವರ ಬೆಂಬಲ ಪಡೆದುಕೊಂಡು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಸಿರಿಲ್ ರಾಬರ್ಟ್ ಡಿಸೋಜ ತಿಳಿಸಿದರು.