ದೀಪಾವಳಿ ಸಡಗರಕ್ಕೆ ಕರಾವಳಿ ಸಜ್ಜು ಹಣತೆ, ಗೂಡುದೀಪಗಳಿಗೆ ಕುಸಿಯದ ಬೇಡಿಕೆ

mng-nov10-market3
Published on

  • ಮಂಗಳೂರು: ತುಳುನಾಡಿನಲ್ಲಿ ವಿಶೇಷವಾಗಿ ಆಚರಿಸುವ ದೀಪಾವಳಿ ಹಬ್ಬಕ್ಕೆ ನಾಡು ಸಜ್ಜಾಗಿದೆ. ಭಾನುವಾರ ನರಕ ಚತುರ್ದಶಿ, ಅಮಾವಾಸ್ಯೆ, ಸೋಮವಾರ ಪಾಡ್ಯ, ಅಂಗಡಿ ಪೂಜೆ, ಗೋಪೂಜೆಗೆ ಸಿದ್ಧತೆ ನಡೆದಿದ್ದು, ವಿಶೇಷವಾಗಿ ಗ್ರಾಮೀಣ ಭಾಗಗಳು ‘ಪರ್ಬ’ಕ್ಕೆ ಕಳೆಗಟ್ಟಿವೆ.
    ಕೃಷಿ ಕುಟುಂಬಗಳು ಕೃಷಿ ಸಲಕರಣೆಗಳು, ಗದ್ದೆ, ತೋಟ ಮತ್ತಿತರ ಕಡೆ ಪೂಜೆ, ಪೊಲಿ ಪೂಜೆ, ಗೋಪೂಜೆ, ಬಲೀಂದ್ರ ಕರೆಯುವುದು, ದೈವಗಳಿಗೆ ವಿಶೇಷ ಪೂಜೆ, ಹಿರಿಯರಿಗೆ ನಮನ ಮತ್ತಿತರ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆಸಿವೆ. ಪ್ರಮುಖವಾಗಿ ಇದು ಬೆಳಕಿನ ಹಬ್ಬ ಆಗಿರುವುದರಿಂದ ಶುಚಿತ್ವ, ಅಲಂಕಾರ ಮತ್ತು ಹಣತೆ ಸಹಿತ ದೀಪಗಳನ್ನು ಬೆಳಗಲು ಪೂರ್ವತಯಾರಿಗೆ ಚಾಲನೆ ದೊರೆತಿದೆ.
    ಆವೆ ಮಣ್ಣಿನಿಂದ ತಯಾರಿಸಿದ ಹಣತೆಗಳಿಗೆ ಉತ್ತಮ ಬೇಡಿಕೆ ಇದೆ. ರಸ್ತೆ ಬದಿ ಮತ್ತು ತಳ್ಳು ಗಾಡಿಗಳಲ್ಲಿ ಹಣತೆಗಳ ಮಾರಾಟ ನಡೆಯುತ್ತಿದೆ. ಮಣ್ಣಿನ ಹಣತೆಗೆ ವಿನ್ಯಾಸಕ್ಕೆ ಅನುಗುಣವಾಗಿ 3ರಿಂದ 10 ರೂ.ವರೆಗೆ ಬೆಲೆ ಇದೆ. ಪಿಂಗಾಣಿ ಹಣತೆಗಳೂ ಲಭ್ಯವಿದ್ದು, ಮಣ್ಣಿನ ಹಣತೆಗಳಿಗೆ ಹೋಲಿಸಿದರೆ ದರ ತುಸು ಜಾಸ್ತಿ.
    ಹಬ್ಬದ ಪ್ರಮುಖ ಆಕರ್ಷಣೆ ಗೂಡುದೀಪಗಳು ಅಂಗಡಿಗಳಲ್ಲಿ ರಾರಾಜಿಸುತ್ತಿವೆ. ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬಟ್ಟೆ, ಪ್ಲಾಸ್ಟಿಕ್ ಮತ್ತು ಬಣ್ಣದ ಕಾಗದಗಳಿಂದ ತಯಾರಿಸಿದ ಗೂಡುದೀಪಗಳಿವೆ. ಬಟ್ಟೆಯಿಂದ ತಯಾರಿಸಿದ ಗೂಡುದೀಪಗಳಲ್ಲಿ 25ಕ್ಕೂ ಅಧಿಕ ವಿಧಗಳಿದ್ದು, 60 ರೂ.ಗಳಿಂದ 400 ರೂ. ತನಕ ದರವಿದೆ. ಪ್ಲಾಸ್ಟಿಕ್ ಗೂಡುದೀಪಗಳಲ್ಲಿ 150ಕ್ಕೂ ಅಧಿಕ ವಿಧಗಳಿವೆ. 50 ರೂ.ನಿಂದ 500 ರೂ.ವರೆಗೆ ದರ ಇದೆ. 40ಕ್ಕೂ ಹೆಚ್ಚು ಬಣ್ಣಗಳ ಕಾಗದದ ಗೂಡುದೀಪಗಳಿದ್ದು 400ರಿಂದ 450 ರೂ. ದರವಿದೆ.


ಮಾರುಕಟ್ಟೆಯತ್ತ ಗ್ರಾಹಕರ ಚಿತ್ತ
ವಿವಿಧ ವಿನ್ಯಾಸದ ಗೂಡುದೀಪಗಳು, ವೈವಿಧ್ಯಮಯ ಪಟಾಕಿಗಳು, ಬಗೆಬಗೆಯ ಸಿಹಿತಿಂಡಿಗಳು, ಬಣ್ಣಬಣ್ಣದ ಉಡುಪುಗಳಿಂದ ಮಾರುಕಟ್ಟೆಗಳು ಶೋಭಿಸುತ್ತಿವೆ. ಶುಕ್ರವಾರದಿಂದಲೇ ಖರೀದಿಗೆ ಗ್ರಾಹಕರು ಮಳಿಗೆಗಳತ್ತ ಬರಲಾರಂಭಿಸಿದ್ದಾರೆ. ಸಾಧಾರಣವಾಗಿ ನರಕ ಚತುರ್ದಶಿ ಮುನ್ನಾದಿನ ಖರೀದಿ ಭರಾಟೆ ಜೋರು. ಶನಿವಾರ ಮತ್ತು ಭಾನುವಾರ ವ್ಯಾಪಾರ ಭರಾಟೆ ಜೋರಾಗುವ ನಿರೀಕ್ಷೆ ಇದೆ. ಹಬ್ಬದ ಆಚರಣೆಯ ಮಧ್ಯೆಯೂ ಮಂಗಳೂರಿನ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣುಹಂಪಲು ದರ ಸ್ಥಿರವಾಗಿದೆ. ಎರಡು ದಿನಗಳಲ್ಲಿ ಒಂದಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಹೂವಿಗೂ ಬೇಡಿಕೆ ಇರುವುದರಿಂದ ದರ ತುಸು ಹೆಚ್ಚಾಗಲಿದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.

ಹಸಿರು ಪಟಾಕಿ ವ್ಯಾಪಾರ
ಈ ಬಾರಿ ಪಟಾಕಿ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಲು ನಿಯಮ ಬಿಗಿಗೊಳಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ಹೆಚ್ಚು ಶಬ್ದ ಉಂಟು ಮಾಡದ ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ರಖಂ ಹಾಗೂ ಚಿಲ್ಲರೆ ಮಾರಾಟದ ಪಟಾಕಿ ಅಂಗಡಿಗಳು ತೆರೆದುಕೊಳ್ಳಲಾರಂಭಿಸಿದೆ.

ಜಿಲ್ಲಾಧಿಕಾರಿ ಸೂಚನೆ
ಸಾರ್ವಜನಿಕರು 125 ಡಿಬಿ ಅಥವಾ 145 ಡಿಬಿಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸುಡುಮದ್ದುಗಳನ್ನು ಉಪಯೋಗಿಸಬಾರದು. ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಪಟಾಕಿ ಸಿಡಿಸುವಂತಿಲ್ಲ. ದಿನದ ಯಾವುದೇ ಸಮಯದಲ್ಲಿ ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರಗಳ ಸುತ್ತಮುತ್ತ ಶಬ್ದ ಮಾಡುವ ನಿಷೇಧಿತ ಪಟಾಕಿ, ಸುಡುಮದ್ದುಗಳನ್ನು ಬಳಸಬಾರದು. ನಗರ ಮತ್ತು ಪಟ್ಟಣದ ಚಿಕ್ಕ ಬೀದಿಗಳಲ್ಲಿ ಪಟಾಕಿ ಮತ್ತು ಸುಡುಮದ್ದುಗಳನ್ನು, ಬಾಣ, ಬಿರುಸುಗಳನ್ನು ಉಪಯೋಗಿಸುವುದರಿಂದ ಅಲ್ಲಿನ ನಿವಾಸಿಗಳಿಗೆ ಹಾನಿ ಉಂಟಾಗುವ, ಬೆಂಕಿ ಅಥವಾ ಸ್ಪೋಟದಿಂದ ಅಪಾಯಗಳಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಪಟಾಕಿ ಹಾಗೂ ಸುಡುಮದ್ದುಗಳನ್ನು ವಸತಿ ಪ್ರದೇಶಗಳಲ್ಲಿ ಉಪಯೋಗಿಸುವ ಬದಲು ಮೈದಾನಗಳಲ್ಲಿ ಒಟ್ಟಾಗಿ ಸೇರಿ ಸಿಡಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net