

ಮಂಗಳೂರು : ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ -2 ಪೊಕ್ಸೋ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು 20 ವರ್ಷಗಳ ಕಠಿನ ಸಜೆ ವಿಧಿಸಿ ಶನಿವಾರ ತೀರ್ಪು ನೀಡಿದ್ದಾರೆ.
ಮೂಲ್ಕಿ ತಾಲೂಕು ಏಳಿಂಜೆ ನಿವಾಸಿ ರವಿ(35) ಶಿಕ್ಷೆಗೊಳಗಾದವನು. ಈತ 2023ರ ಜೂನ್ ತಿಂಗಳಿನಿಂದ ಡಿಸೆಂಬರ್‌ವರೆಗೆ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈ ವೇಳೆ ಆತನ ಗೆಳೆಯನ ಪುತ್ರಿ ಮೂಲತಃ ಚಿಕ್ಕಮಗಳೂರಿನವಳಾದ 17 ವರ್ಷ ವಯಸ್ಸಿನ ಬಾಲಕಿ ಪಿಯುಸಿ ವಿದ್ಯಾಭ್ಯಾಸಕ್ಕೆಂದು ಬಂದು ಆತನ ಮನೆಯಲ್ಲಿ ಉಳಿದುಕೊಂಡಿದ್ದಳು. ಅಪರಾಧಿ ರವಿ ಆಕೆಯನ್ನು 2023ರ ನವೆಂಬರ್‌ನಲ್ಲಿ ಕಾರ್ಕಳ ತಾಲೂಕು ಇನ್ನಾದ ರಸ್ತೆ ಬದಿಯ ಗುಡ್ಡ ಜಾಗಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಅನಂತರ ಆತ 2023ರ ಡಿಸೆಂಬರ್‌ನಿಂದ ಏಳಿಂಜೆಯಲ್ಲಿ ವಾಸವಾಗಿದ್ದ. ಆಗ ಮನೆಯಲ್ಲಿ ಹಲವು ಬಾರಿ ಅತ್ಯಾಚಾರವೆಸಗಿದ್ದ. 2024ರ ಎ.11ರಂದು ಸಂಜೆ ಏಳಿಂಜೆಯ ಹಾಡಿ ಜಾಗಕ್ಕೆ ಕರೆದೊಯ್ದು ಅಲ್ಲಿಯೂ ಅತ್ಯಾಚಾರವೆಸಗಿದ್ದ. ಪರಿಣಾಮವಾಗಿ ಬಾಲಕಿ ಗರ್ಭ ಧರಿಸಿದ್ದಳು.
ಆರೋಪಿ ವಿರುದ್ಧ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಧೀಶರು ಅಪರಾಧಿಗೆ ಪೊಕ್ಸೋ ಕಾಯಿದೆಯ ಕಲಂ 6 ಮತ್ತು ಐಪಿಸಿ 376(3) ಹಾಗೂ 376(2)(ಎಫ್)(ಎನ್) ಅಡಿಯಲ್ಲಿ 20 ವರ್ಷ ಕಠಿನ ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ 4 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಮೊತ್ತವನ್ನು ಬಾಲಕಿಗೆ ನೀಡುವಂತೆ ಹಾಗೂ ಕಾನೂನು ಸೇವಾ ಪ್ರಾಧಿಕಾರದಿಂದ 6.50 ಲಕ್ಷ ರೂ. ಪರಿಹಾರವನ್ನು ಬಾಲಕಿಗೆ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಮೂಲ್ಕಿ ಇನ್ಸ್‌ಪೆಕ್ಟರ್ ಆಗಿದ್ದ ವಿದ್ಯಾಧರ್ ಡಿ. ಬಾಯ್ಕೇರಿಕರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕ ಬದ್ರಿನಾಥ ನಾಯರಿ ಕೆಲವು ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಅವರು ಸಾಕ್ಷಿಗಳನ್ನು ವಿಚಾರಿಸಿ ಸರ್ಕಾರದ ಪರವಾಗಿ ವಾದಿಸಿದ್ದರು.