ಪಾರ್ಟಿಯಲ್ಲಿ ಅತ್ಯಾಚಾರ ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಮಂಗಳೂರು: ಪಾರ್ಟಿಯೊಂದರಲ್ಲಿ ಅಮಲು ಪದಾರ್ಥ ಸೇವಿಸಿ ಮಲಗಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದು, ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.

ನಗರದ ಲೈಟ್‌ಹೌಸ್‌ಹಿಲ್ ರೋಡ್ ನಿವಾಸಿ ಬ್ರಯಾನ್ ರಿಚರ್ಡ್ ಅಮನ್ನಾ (34) ಶಿಕ್ಷೆಗೊಳಗಾದ ಅಪರಾಧಿ.

ಪ್ರಕರಣದ ಹಿನ್ನೆಲೆ: ಯುವತಿ ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದು, ಆಕೆಗೆ ಬ್ಯಾಂಕ್‌ನ ಗ್ರಾಹಕರಾದ ನೌಕಾಪಡೆಯಲ್ಲಿ ಉದ್ಯೋಗಿಯಾಗಿದ್ದ ಜಾಯಿಲಿನ್ ಗ್ಲಾನೆಲ್ ಪಿಂಟೋ ಎಂಬವರ ಪರಿಚಯವಾಗಿತ್ತು. ಗ್ಲಾನೆಲ್ ಅವರಿಗೆ ಅಂಡಮಾನ್‌ಗೆ ವರ್ಗಾವಣೆಯಾದ ಕಾರಣದಿಂದ 2021ರ ೆ.5ರಂದು ರಾತ್ರಿ ಪುತ್ತೂರಿನ ಕೊಡಿಪ್ಪಾಡಿ ಗ್ರಾಮದ ಕೊಡಿಕಾಡು ಎಂಬಲ್ಲಿರುವ ಗೆಸ್ಟ್‌ಹೌಸ್‌ನಲ್ಲಿ ಸ್ನೇಹಿತರಿಗೆಲ್ಲ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗೆ ಯುವತಿಯನ್ನೂ ಆಹ್ವಾನಿಸಿದ ಕಾರಣ ಜಾಯಿಲಿನ್ ಅವರ ಸ್ನೇಹಿತನ ಕಾರಿನಲ್ಲಿ ಪಾರ್ಟಿಗೆ ತೆರಳಿದ್ದರು. ಸ್ನೇಹಿತರೆಲ್ಲ ಒಟ್ಟಾಗಿ ಪಾರ್ಟಿಯಲ್ಲಿ ತೊಡಗಿದ್ದು, ಈ ಸಂದರ್ಭ ಯುವತಿ ವೈನ್ ಸೇವಿಸಿದ್ದರು.

ಪಾರ್ಟಿಯಲ್ಲಿ ಜಾಯಿಲಿನ್ ಅವರ ಸ್ನೇಹಿತ ಎಂದು ಬ್ರಯಾನ್ ರಿಚರ್ಡ್ ಅಮನ್ನಾ ಪರಿಚಯಿಸಿಕೊಂಡಿದ್ದ. ಪಾರ್ಟಿ ಮುಗಿದ ಬಳಿಕ ಎಲ್ಲರೂ ಗೆಸ್ಟ್ ಹೌಸ್‌ನ ರೂಮಿಗೆ ತೆರಳಿದ್ದರು. ಇದಾದ ಬಳಿಕ ಪಾರ್ಟಿ ಆಯೋಜಿಸಿದ್ದ ಜಾಯಿಲಿನ್ ಮತ್ತು ರೆಬೆಕಾ ಅವರು ಯುವತಿ ಇದ್ದ ರೂಮಿಗೆ ತೆರಳಿ ತುಂಬಾ ಹೊತ್ತು ಮಾತನಾಡಿ, ಮಲಗಿದ್ದಾರೆ. ೆ.6ರಂದು ಮುಂಜಾನೆ 2ಗಂಟೆಗೆ ನೊಂದ ಯುವತಿ ಎಚ್ಚರವಾಗಿ ನೋಡಿದಾಗ ಜಾಯಿಲಿನ್ ಮತ್ತು ರೆಬೆಕಾ ರೂಮಿನಲ್ಲಿರಲಿಲ್ಲ. ಯುವತಿ ಮಾತ್ರ ಏಕಾಂಗಿಯಾಗಿ ಮಲಗಿದ್ದಳು. ರೂಮಿನಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಬ್ರಿಯಾನ್ ರೂಮಿಗೆ ಬಂದಿದ್ದು, ಬಳಿಕ ಆಕೆಯನ್ನು ಅತ್ಯಾಚಾರವೆಸಗಿದ್ದ. ಬೆಳಗ್ಗೆ 5 ಗಂಟೆಗೆ ಎಚ್ಚರಗೊಂಡು ಯುವತಿ ನೋಡಿದಾಗ ಅತ್ಯಾಚಾರವೆಸಗಿರುವುದು ಗೊತ್ತಾಗಿದೆ. ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶಿಕ್ಷೆ ಪ್ರಮಾಣ ಪ್ರಕಟ: ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿದ ಮಾನ್ಯ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್.ವಿ. ಅವರು ಆರೋಪ ಸಾಬೀತುಪಡಿಸಿ ಜ.10ರಂದು ತೀರ್ಪು ಪ್ರಕಟಿಸಿದ್ದಾರೆ. ಅಪರಾಧಿಗೆ ಭಾರತೀಯ ದಂಡ ಸಂಹಿತೆ ಕಲಂ: 376ಕ್ಕೆ 10 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 10,000ರೂ. ದಂಡ, ಭಾರತೀಯ ದಂಡ ಸಂಹಿತೆ ಕಲಂ: 328ಕ್ಕೆ 5 ವರ್ಷ ಜೈಲು ಶಿಕ್ಷೆ ಮತ್ತು ತಲಾ 5000ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕರಾಗಿದ್ದ ತಿಮ್ಮಪ್ಪ ನಾಯ್ಕ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 21 ಸಾಕ್ಷಿದಾರರು ಸಾಕ್ಷಿ ಹೇಳಿದ್ದು, 37 ದಾಖಲೆಗಳನ್ನು, 6 ಮುದ್ದೆಮಾಲುಗಳನ್ನು ಗುರುತಿಸಲಾಗಿತ್ತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಿ. ಶೆಖರ ಶೆಟ್ಟಿ ಮತ್ತು ಚೌಧರಿ ಮೋತಿಲಾಲ್ ವಾದ ಮಂಡಿಸಿದ್ದರು.

ಪರಿಹಾರಕ್ಕೆ ನಿರ್ದೇಶನ: ಸಂತ್ರಸ್ತ ಯುವತಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಪರಿಹಾರ ಪಡೆಯಲು ಅರ್ಹರೆಂದು ನ್ಯಾಯಾಲಯ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net