

ಮಂಗಳೂರು: ಸಹಾಯ ಮಾಡುವ ನೆಪದಲ್ಲಿ ಆಸ್ಪತ್ರೆಯಲ್ಲೇ ರೋಗಿಯ ಅತ್ಯಾಚಾರ ಮಾಡಿದ ಆರೋಪಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಹೊಸದುರ್ಗ ಪುಲ್ಲೂರು ಗ್ರಾಮದ ನಿವಾಸಿ ಸುಜಿತ್ ಬಂಧಿತ ಆರೋಪಿ. ಪಿಸ್ತುಲದಿಂದ ಬಳಲುತ್ತಿದ್ದ ಕಾಸರಗೋಡು ಮೂಲದ ಮಹಿಳೆ ಚಿಕಿತ್ಸೆ ಪಡೆಯಲೆಂದು ಮಾ.13ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಆರೋಪಿ ಸುಜಿತ್ನೊಂದಿಗೆ ಬಂದಿದ್ದರು. ಮಾ.16ರಂದು ರಾತ್ರಿ 8ಗಂಟೆಗೆ ಆಸ್ಪತ್ರೆಗೆ ಬಂದಿದ್ದ ಸುಜಿತ್ ಬಲವಂತವಾಗಿ ಮಹಿಳೆಯ ಬಟ್ಟೆಗಳನ್ನು ತೆಗೆದು ಅತ್ಯಾಚಾರ ಮಾಡಿ ಆಕೆಯ ನಗ್ನ ಫೋಟೋಗಳನ್ನು ಸೆರೆ ಹಿಡಿದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಗ್ನ ಫೋಟೋಗಳನ್ನು ಆಕೆಗೆ ತೋರಿಸಿದ ಸುಜಿತ್ ಮತ್ತೆ ಮಂಗಳೂರಿಗೆ ಬರುವಂತೆ ಒತ್ತಾಯಿಸಿ ಕರೆಸಿದ್ದ. ಏ.4ರಿಂದ 8ರವರೆಗೆ ಮಂಗಳೂರಿನ ಖಾಸಗಿ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದು ಅಲ್ಲಿಯೂ ಹೆದರಿಸಿ, ಅತ್ಯಾಚಾರ ಮಾಡಿದ್ದಾನೆ. ಈ ವೇಳೆಯೂ ನಗ್ನ ಫೋಟೋಗಳನ್ನು ತೆಗೆದುಕೊಂಡಿದ್ದ. ಮಹಿಳೆ ಮೇ 8ರಿಂದ 10ರವರೆಗೆ ಮತ್ತೊಂದು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅಲ್ಲಿಗೂ ಬಂದಿದ್ದ ಆರೋಪಿ, ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ವಿಚಾರ ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿರುವ ಕದ್ರಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.