

ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಮತ್ತು ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಮರಣ ವೇದಿಕೆ ಜಂಟಿಯಾಗಿ ಆಯೋಜಿಸುವ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಲೆ ಕಾರ್ಯಕ್ರಮ ಡಿ.14ರಂದು ಸಂಜೆ 5ಕ್ಕೆ ನಗರದ ಕೆನರಾ ಪದವಿ ಪೂರ್ವ ಕಾಲೇಜಿನ ತೆರೆದ ಸಭಾಂಗಣದಲ್ಲಿ ನಡೆಯಲಿದೆ.
ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟರಿಗೆ ‘ಕುಂಬ್ಳೆ ಸಂಸ್ಮರಣ ಪ್ರಶಸ್ತಿ-2024’ ನೀಡಲಾಗುತ್ತದೆ. ಪ್ರಶಸ್ತಿ 25 ಸಾವಿರ ರೂ. ನಗದು, ಸನ್ಮಾನ ಪತ್ರ, ಸ್ಮರಣಿಕೆ ಮುಂತಾದುವನ್ನು ಒಳಗೊಂಡಿದೆ. ಹಿರಿಯ ಯಕ್ಷಗಾನ ಅರ್ಥದಾರಿ ಭಾಸ್ಕರ ರೈ ಕುಕ್ಕುವಳ್ಳಿಯವರು ಕುಂಬ್ಳೆಯವರ ಸಂಸ್ಮರಣೆ ಮಾಡಲಿದ್ದಾರೆ. ಅಗರಿ ಎಂಟರ್‌ಪ್ರೈಸಸ್‌ನ ಮಾಲೀಕ ಅಗರಿ ರಾಘವೇಂದ್ರ ರಾವ್ ಮತ್ತು ಕೆನರಾ ಪದವಿಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ವಹಿಸಲಿದ್ದಾರೆ ಎಂದು ರಂಗಸಂಗಾತಿಯ ಕಾರ‌್ಯದರ್ಶಿ ಶಶಿರಾಜ್ ರಾವ್ ಕಾವೂರು ಬುಧವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಭಾ ಕಾರ್ಯಕ್ರಮದ ನಂತರ ಹಿರಿಯ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ‘ಸುಧನ್ವ ಮೋಕ್ಷ’ ಎಂಬ ತಾಳಮದ್ದಲೆ ನಡೆಯಲಿದೆ. ಹಿಮ್ಮೇಳದಲ್ಲಿ ಹಿರಿಯ ಯಕ್ಷಗಾನ ಭಾಗವತ ದಿನೇಶ ಅಮ್ಮಣ್ಣಾಯ, ಮದ್ದಳೆಯಲ್ಲಿ ಕೃಷ್ಣಪ್ರಕಾಶ ಉಳಿತ್ತಾಯ ಮತ್ತು ಚೆಂಡೆಯಲ್ಲಿ ಶ್ರೇಯಸ್ ಪಾಳಂದೆ ಸಹಕರಿಸಲಿದ್ದು, ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್ ಮತ್ತು ವಾಸುದೇವ ರಂಗಾಭಟ್ ಮಧೂರು ಅರ್ಥ ಹೇಳಲಿದ್ದಾರೆ ಎಂದವರು ವಿವರಿಸಿದರು.
ಕುಂಬ್ಳೆ ಸುಂದರ ರಾವ್ ಸಂಸ್ಮರಣ ವೇದಿಕೆಯ ಸತ್ಯನಾರಾಯಣ ಕೆ, ರಂಗಸಂಗಾತಿಯ ಟ್ರಸ್ಟಿಗಳಾದ ಕರುಣಾಕರ ಶೆಟ್ಟಿ ಮತ್ತು ನಾಗೇಶ್ ಶೆಟ್ಟಿ ಬಜಾಲ್ ಉಪಸ್ಥಿತರಿದ್ದರು.