ಶಿಕ್ಷಣದ ಜತೆಗೆ ಕೌಶಲ ಅಗತ್ಯ‘ಶ್ರದ್ಧಾ’ ವಿಚಾರ ಸಂಕಿರಣ ಉದ್ಘಾಟಿಸಿ ಬಿ.ಎ.ಎಸ್.ಎಫ್ ಇಂಡಿಯಾದ ನಿರ್ದೇಶಕ ಶ್ರೀನಿವಾಸ್ ಪ್ರಾಣೇಶ್ ಹೇಳಿಕೆ

mng-sep12-ramakrishna matt1
Published on


ಮಂಗಳೂರು: ವೃತ್ತಿ ಜೀವನಕ್ಕೆ ಪೂರಕವಾಗಿ ಶಿಕ್ಷಣದ ಜತೆಗೆ ಕೌಶಲಗಳನ್ನು ಅಳವಡಿಸಿಕೊಳ್ಳುವುದು ಅವಶ್ಯ ಎಂದು ಬಿ.ಎ.ಎಸ್.ಎಫ್ ಇಂಡಿಯಾದ ನಿರ್ದೇಶಕ ಶ್ರೀನಿವಾಸ್ ಪ್ರಾಣೇಶ್ ಹೇಳಿದರು.


ಮಂಗಳಾದೇವಿಯ ರಾಮಕೃಷ್ಣ ಮಠದಲ್ಲಿ ‘ಶಿಕ್ಷಣ ಮತ್ತು ಮಾನವ ಶ್ರೇಷ್ಠತೆ’ ಶೈಕ್ಷಣಿಕ ವಿಚಾರ ಸಂಕಿರಣದ ಎರಡನೇ ದಿನ ಗುರುವಾರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ‘ಶ್ರದ್ಧಾ’ ಉದ್ಘಾಟಿಸಿ ಮಾತನಾಡಿದರು.


ಸ್ನಾತಕೋತ್ತರ ಪದವಿ ಬಳಿಕ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿಷಯಗಳಲ್ಲಿ ಹೆಚ್ಚಿನ ಪರಿಣಿತಿಯನ್ನು ಪಡೆದಾಗ ಯಶಸ್ವಿಯಾಗಲು ಸಾಧ್ಯ. ರಾಸಾಯನಿಕ ವಸ್ತುವಿಲ್ಲದೆ ಈ ಜಗತ್ತು ಮುನ್ನಡೆಯಲು ಸಾಧ್ಯವಿಲ್ಲ. ಪ್ರತಿಯೊಂದು ವಸ್ತು ಕೂಡ ರಾಸಾಯನಿಕಗಳಿಂದ ಉತ್ಪತ್ತಿಯಾಗುತ್ತಿವೆ. ರೋಗ ಬಂದಾಗ ಸೇವನೆ ಮಾಡುವ ಔಷಧಿಗಳು ಕೂಡಾ ರಾಸಾಯನಿಕ ಒಳಗೊಂಡಿರುತ್ತದೆ. ಪ್ರತಿ ವಿಷಯಗಳ ಬಗ್ಗೆಯೂ ಆಳವಾದ ಜ್ಞಾನವನ್ನು ಹೊಂದಿರುವುದು ಅವಶ್ಯವಾಗಿದೆ ಎಂದರು.


ಕಾನ್ಪುರ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಶ್ರೀ ಆತ್ಮಶ್ರದ್ಧಾನಂದಜಿ ಮಾತನಾಡಿ, ಬದುಕಿನಲ್ಲಿ ಇನ್ನೊಬ್ಬರನ್ನು ದೂಷಣೆ ಮಾಡುವುದು ಸಲ್ಲದು. ನಮ್ಮ ಪಾತ್ರ ಏನು ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ದೇವರು ಪ್ರತಿಯೊಬ್ಬರಿಗೂ ಅಗಾಧವಾದ ಶಕ್ತಿಯನ್ನು ನೀಡಿದ್ದಾನೆ. ಅದನ್ನು ಸದ್ಭಳಕೆ ಮಾಡಿಕೊಳ್ಳುವುದು ನಮ್ಮ ಕೈಯ್ಯಲ್ಲಿದೆ. ಸ್ವ ನಂಬಿಕೆ, ಆತ್ಮವಿಶ್ವಾಸ ಬೆಳೆಸಿಕೊಂಡು ಮುನ್ನಡೆದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದರು.
ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಉತ್ತಮ ಗುಣ ನಡತೆ, ಮಾನವೀಯ ಗುಣ, ಒಳ್ಳೆಯ ಚಿಂತನೆಗಳನ್ನು ವಿದ್ಯಾರ್ಥಿ ದಿಸೆಯಿಂದಲೇ ಮೈಗೂಡಿಸಿಕೊಳ್ಳಬೇಕು. ನಡೆ, ನುಡಿ ಉನ್ನತ ಮಟ್ಟದ್ದಾಗಿರಬೇಕು. ಮನಸ್ಸಿನ ಏಕಾಗ್ರತೆಯಿಂದ ದೈವೀ ಶಕ್ತಿಯನ್ನು ನಿತ್ಯ ಜೀವನದಲ್ಲಿ ಅಭಿವ್ಯಕ್ತಗೊಳಿಸಬೇಕು ಎಂದರು.


ಹೈದರಾಬಾದ್‌ನ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ ಹಾಗೂ ತಂತ್ರಜ್ಞ ಎಸ್.ಎನ್.ಶ್ರೀನಿವಾಸ್, ಎಂ.ಆರ್.ಪಿ.ಎಲ್.ನ ಲೀಡ್ ಎಚ್.ಆರ್. ಸ್ಟೀವನ್ ಪಿಂಟೋ, ಬೆಂಗಳೂರು ನಿಮ್ಹಾನ್ಸ್‌ನ ಮಾನಸಿಕ ಆರೋಗ್ಯ ಶಿಕ್ಷಣಾಧಿಕಾರಿ ಸುಭಾಷ್ ಎಚ್.ಜೆ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.


ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ರಾಮಕೃಷ್ಣ ಮಿಷನ್‌ನ ಮುಖ್ಯ ಸಂಯೋಜಕ ರಂಜನ್ ಬೆಳ್ಳರ್ಪಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net