

ಮಂಗಳೂರು: ಧರ್ಮದಲ್ಲಿ ಆಧ್ಯಾತ್ಮಿಕ ಶಕ್ತಿಯ ಮೂಲಕ ಹೊಸ ಚೈತನ್ಯ ತುಂಬುವ ಕೆಲಸ ಮಾಡಿದ ಸ್ವಾಮಿ ವಿವೇಕಾನಂದರು ಯುವಕರಿಗೆ ಸದಾ ಪ್ರೇರಕ ಶಕ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳಾದೇವಿ ಶ್ರೀ ರಾಮಕೃಷ್ಣ ಮಠದಲ್ಲಿ ಶುಕ್ರವಾರ ರಾಷ್ಟ್ರೀಯ ಯುವ ದಿನಾಚರಣೆ ಉದ್ಘಾಟಿಸಿ, ಅವರು ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಕೊಡುಗೆ ನಿರ್ಣಾಯಕ. ತಮ್ಮ ಇಚ್ಛಾಶಕ್ತಿ, ಸಂಕಲ್ಪ ಶಕ್ತಿ, ಕ್ರಿಯಾಶಕ್ತಿಗಳನ್ನು ಬಳಸಿ, ಸೃಜನಶೀಲತೆಯಿಂದ ಮುನ್ನಡೆಯುವುದರ ಮೇಲೆ ದೇಶದ ಭವಿಷ್ಯ ಅಡಗಿದೆ ಎಂದು ಕರೆ ನೀಡಿದ್ದ ಸ್ವಾಮಿ ವಿವೇಕಾನಂದರ ಮಾತುಗಳು ಎಲ್ಲಾ ಕಾಲಕ್ಕೂ ಸಲ್ಲುವಂತಿದೆ ಎಂದರು.
ವಿವೇಕಾನಂದರು ಶಿಕ್ಷಣಕ್ಕೆ ಅಪಾರ ಮಹತ್ವ ಕೊಟ್ಟಿದ್ದರು. ರಾಷ್ಟ್ರ ನಿರ್ಮಾಣಕ್ಕೆ ಇರುವ ಏಕೈಕ ಮಾರ್ಗ ಈ ಬಹುಸಂಖ್ಯಾತರಿಗೆ ಶಿಕ್ಷಣ ನೀಡಿ ಮೇಲೆತ್ತುವುದೇ ಆಗಿದೆ ಎಂಬುದನ್ನು ಅವರು ಬಲವಾಗಿ ನಂಬಿದ್ದರು. ಅವರ ದೃಷ್ಟಿಯ ಈ ಬಹು ಸಂಖ್ಯಾತರು ಶಿಕ್ಷಣ ವಂಚಿತ, ನೋವುಂಡ, ತುಳಿತಕ್ಕೆ ಒಳಗಾದ ಸಮುದಾಯವೇ ಆಗಿತ್ತು. ಸ್ವಾಭಿಮಾನದ ಮರುಸ್ಥಾಪನೆಗೂ ಶಿಕ್ಷಣವೇ ರಾಜಮಾರ್ಗವೆಂದು ಸ್ವಾಮೀಜಿ ಪುನರುಚ್ಚರಿಸಿದ್ದರು. ಶಿಕ್ಷಣ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಅದು ಧೈರ್ಯ ತುಂಬುವಂತೆ ಇರಬೇಕು. ಜೀವನದ ಗಹನ ಸವಾಲುಗಳನ್ನು ಎದುರಿಸಬಲ್ಲ ಶಕ್ತಿಯಾಗಬೇಕು. ಶಿಕ್ಷಣ ಹೆದರಿಕೆಯನ್ನು ತೊಲಗಿಸಬೇಕು. ಇವೆಲ್ಲವೂ ವಿವೇಕಾನಂದರ ಕನಸುಗಳಾಗಿದ್ದವು ಎಂದು ಸಚಿವರು ಹೇಳಿದರು.
ಎನ್‌ಐಟಿಕೆಯ ನಿರ್ದೇಶಕ ಪ್ರೊ.ಬಿ.ರವಿ ರಾಮಕೃಷ್ಣ ಮಠದ 2024ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಶ್ನಿಸುವ ಮೂಲಕ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ ಹಾಗೂ ಕೆ.ಹರೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆನಂದ ಕೆ. ಅತಿಥಿಗಳಾಗಿದ್ದರು. ಲಂಡನ್ ವೇದಾಂತ ಸೆಂಟರ್‌ನ ಮುಖ್ಯಸ್ಥ ಸ್ವಾಮಿ ಸರ್ವಸ್ಥಾನಂದ ಮಹಾರಾಜ್ ಅವರು ‘ಸ್ಪೂರ್ತಿಯ ಗಣಿ ಸ್ವಾಮಿ ವಿವೇಕಾನಂದರು’ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನಾಡಿದರು.
ಮಂಗಳೂರು ವಿವಿ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಚಂದ್ರು ಹೆಗ್ಡೆ, ತಂತ್ರಜ್ಞ ಪ್ರವೀಣ್ ಉಡುಪ, ಸಾಮಾಜಿಕ ಜಾಲತಾಣದ ಅರುಣ್ ಪ್ರಭು ಅವರನ್ನು ಗೌರವಿಸಲಾಯಿತು.
ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ದಿಕ್ಸೂಚಿ ಭಾಷಣಗೈದರು. ರಂಜನ್ ಬೆಳ್ಳರ್ಪಾಡಿ ವಂದಿಸಿದರು. ರಜಿನಾ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.
ಎರಡನೇ ಅವಧಿಯಲ್ಲಿ ಮೋಕ್ಷೃ ಯೂಟ್ಯೂಬ್ ಚಾನೆಲ್ ನ ಸಂಸ್ಥಾಪಕ ನಮೃತಾ ರಾವ್ ಅವರು ಪೊಸೆಟಿವ್ ಕಂಟೆಂಟ್ಸ್ ಫಾರ್ ಇನ್ಕ್ರೆಡಿಬಲ್ ಭಾರತ್ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ನಂತರ ಪುನರಪಿ ಇಕೋ ಟೈಲ್ಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕರಾದ ಡಾ. ಹರಿಣಿ ಸೂರಜ್, ದಿ ವೆಬ್ ಪೀಪಲ್ ನ ಸಂಸ್ಥಾಪಕರಾದ ಆದಿತ್ಯ ಕಲ್ಲೂರಾಯ ಹಾಗೂ ಸ್ವದೇಶಿ ಮಾರ್ಟ್ ನ ಸಂಸ್ಥಾಪಕ ಪ್ರಣವ್ ಭಟ್ ವಿಚಾರ ಮಂಡಿಸಿದರು. ನಗರದ ವಿವಿಧ ಶಾಲಾ-ಕಾಲೇಜುಗಳಿಂದ 600ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.