

ವಿಜಯವಾಣಿ ಸುದ್ದಿಜಾಲ ಮಂಗಳೂರು
ಸುಬ್ರಹ್ಮಣ್ಯ-ಸಕಲೇಶಪುರ 55 ಕಿ.ಮೀ ಘಾಟ್ ಪ್ರದೇಶ ಸಹಿತ ಮಂಗಳೂರು- ಹಾಸನ ನಡುವಿನ ರೈಲ್ವೆ ಮಾರ್ಗ ವಿದ್ಯುದ್ದೀಕರಣ ಕಾಮಗಾರಿ ಮುಂದಿನ ಜೂನ್‌ನಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಆರಂಭಗೊಳ್ಳಲಿದೆ ಎಂದು ನೈಋತ್ಯ ರೈಲ್ವೆ ಮೈಸೂರು ಹೆಚ್ಚುವರಿ ವಿಭಾಗೀಯ ರೈಲ್ವೆ ಪ್ರಬಂಧಕಿ ಇ.ವಿಜಯಾ ಹೇಳಿದರು.
ನಗರದ ದ.ಕ.ಜಿ.ಪಂ.ಸಭಾಂಗಣದಲ್ಲಿ ಶನಿವಾರ ಸ್ಥಳೀಯ ಸಂಸದರ ಅಧ್ಯಕ್ಷತೆಯಲ್ಲಿ ಜರುಗಿದ ರೈಲ್ವೆ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಘಾಟ್ ಪ್ರದೇಶದ ರೈಲ್ವೆ ವಿದ್ಯುದ್ದೀಕರಣ (ಆರ್‌ಇ) ಸರ್ವೇ ಪೂರ್ಣಗೊಂಡಿದ್ದು, ಜನವರಿಯಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇರುವುದಾಗಿ ಅವರು ತಿಳಿಸಿದರು.
ಮಂಗಳೂರು ಬಂದರಿನಲ್ಲಿದ್ದ ರೈಲು ಗೂಡ್ಸ್ ತಂಗುದಾಣ ವಿಭಾಗ ಉಳ್ಳಾಲಕ್ಕೆ ಸ್ಥಳಾಂತಗೊಂಡ ಹಿನ್ನೆಲೆಯಲ್ಲಿ ಮಂಗಳೂರು ಬಂದರಿನಲ್ಲಿ ರೈಲ್ವೆ ಪ್ರದೇಶವನ್ನು ಪ್ರಯಾಣಿಕರ ರೈಲುಗಳ ದುರಸ್ತಿ ಹಾಗೂ ತಂಗುದಾಣವಾಗಿ ಬಳಸಲು ಉದ್ದೇಶಿಸಲಾಗಿದೆ. ಮಂಗಳೂರು ಸೆಂಟ್ರಲ್ ಮತ್ತು ಬಂದರ್ ನಡುವೆ ಪಾಂಡೇಶ್ವರದಲ್ಲಿ ಹಾದುಹೋಗುವ ಮುಖ್ಯ ರಸ್ತೆ ಇರುವ ಕಡೆ ಮೇಲ್ಸೇತುವೆ ನಿರ್ಮಿಸುವುದು ಸೂಕ್ತ ಎಂದು ಪಾಲಕ್ಕಾಡ್ ವಿಭಾಗ ಎಡಿಆರ್‌ಎಂ ತಿಳಿಸಿದರು.
ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಸಂಜೆ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರಸ್ತೆಯವರೆಗೆ ವಿಸ್ತರಿಸಿ ಮರುದಿನ ಬೆಳಗ್ಗೆ ಮಂಗಳೂರು ಕಡೆಗೆ ಹೊರಡುವ ಸಾರ್ವಜನಿಕರ ಬೇಡಿಕೆಗೆ ಪ್ರತಿಕ್ರಿಯಿಸಿದ ವಿಜಯಾ ಅವರು, ಕಬಕ ಪುತ್ತೂರು ಮತ್ತು ಸುಬ್ರಹ್ಮಣ್ಯ ರಸ್ತೆ ನಿಲ್ದಾಣ ನಡುವಿನ ರೈಲ್ವೆ ವಿದ್ಯುದ್ದೀಕರಣ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಅದರ ನಂತರ ದಕ್ಷಿಣ ರೈಲ್ವೆಯು ಮಂಗಳೂರು-ಸುಬ್ರಹ್ಮಣ್ಯ ರಸ್ತೆ ನಿಲ್ದಾಣ ಸೆಕ್ಟರ್‌ನಲ್ಲಿ ಪ್ರಯಾಣಿಕ ರೈಲಿನಂತೆ ಕಾರ್ಯನಿರ್ವಹಿಸಲು ಮುಖ್ಯ ಲೈನ್ ಇಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ (ಮೆಮು) ರೇಕ್ ಅನ್ನು ಒದಗಿಸಬಹುದು ಮತ್ತು ನಿರ್ವಹಿಸಬಹುದು ಎಂದು ಅವರು ಹೇಳಿದರು.
ಪರಂಗಿಪೇಟೆಯಲ್ಲಿ ಮುಚ್ಚಿರುವ ರೈಲು ನಿಲ್ದಾಣವನ್ನು ಮತ್ತೆ ತೆರೆಯಬೇಕು, ಅಲ್ಲಿರುವ ರೈಲ್ವೆಯ 30 ಎಕರೆ ಜಾಗವನ್ನು ಅಭಿವೃದ್ಧಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್ ಒತ್ತಾಯಿಸಿದರು. ಶಿಕ್ಷಣ ಸಂಸ್ಥೆಗಳು ಮತ್ತು ಜನದಟ್ಟಣೆ ಅಧಿಕವಿರುವ ಈ ಭಾಗದಲ್ಲಿ ನಿಲ್ದಾಣ ಪುನರಾರಂಭಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಪಾಲಕ್ಕಾಡ್ ವಿಭಾಗೀಯ ರೈಲ್ವೆ ಪ್ರಬಂಧಕ ಅರುಣ್ ಕುಮಾರ್ ಚತುರ್ವೇದಿ, ಹೆಚ್ಚುವರಿ ವಿಭಾಗೀಯ ರೈಲ್ವೆ ಪ್ರಬಂಧಕ ಜಯಕೃಷ್ಣನ್, ಕೊಂಕಣ ರೈಲ್ವೆ ಸೀನಿಯರ್ ರೀಜನಲ್ ಟ್ರಾಫಿಕ್ ಮೆನೇಜರ್ ವಿನಯಕುಮಾರ್, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಅನಿಲ್ ಶಾಸ್ತ್ರಿ, ಸಾಮಾಜಿಕ ಕಾರ್ಯಕರ್ತರಾದ ಲಕ್ಷ್ಮೀನಾರಾಯಣ ಬಂಟ್ವಾಳ, ಅನಿಲ್ ಹೆಗ್ಡೆ, ರಾಮದಾಸ್ ಮುಂತಾದವರು ರೈಲ್ವೆ ಅಗತ್ಯಗಳ ಬಗ್ಗೆ ಚರ್ಚಿಸಿದರು. ಪ್ರವಾಸೋದ್ಯಮ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಮಾಣಿಕ್ಯ ಕಾರ್ಯಕ್ರಮ ನಿರ್ವಹಿಸಿದರು.
ಪ್ರಧಾನಿಗಳಿಂದ ಪ್ಲಾಟ್‌ಫಾರ್ಮ್ ಲೋಕಾರ್ಪಣೆ?
ಮಂಗಳೂರು ಸೆಂಟ್ರಲ್ 4 ಮತ್ತು 5ನೇ ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುವ ಸಾಧ್ಯತೆ ಇದೆ. ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಮಾಸಾಂತ್ಯದಲ್ಲಿ ಚಾಲನೆ ಸಿಗಬಹುದು ಎಂದು ಸಭೆಯ ಬಳಿಕ ಸಂಸದರು ತಿಳಿಸಿದರು. ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳು ಉದ್ಘಾಟನೆ ಬಳಿಕ ಮುಂಬೈ ಸಿಎಸ್‌ಟಿ-ಮಂಗಳೂರು ಜಂಕ್ಷನ್, ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್, ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ಹಗಲು ರೈಲು ಹಾಗೂ ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ರೈಲುಗಳನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲಾಗುವುದು ಎಂದರು.