ಮಾಡೆಲಿಂಗ್​ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಯುವತಿಯ ಬಾಯ್​ಫ್ರೆಂಡ್​ ಸೇರಿ ಮೂವರು ಪೊಲೀಸರ ವಶಕ್ಕೆ

preksha
Published on

ಮಂಗಳೂರು: ಮಾಡೆಲಿಂಗ್​ ಕ್ಷೇತ್ರದ ಕನಸು ಹೊತ್ತುಕೊಂಡು ಬೆಂಗಳೂರು ಹೊರಟಿದ್ದ ವಿದ್ಯಾರ್ಥಿನಿ ನೇಣಿಗೆ ಕೊರಳೊಡ್ಡಿದ ಪ್ರಕರಣದ ಸುತ್ತ ಅನುಮಾನಗಳ ಹುತ್ತ ಬೆಳೆಯಲಾರಂಭಿಸಿದೆ. ಗುರುವಾರದಂದು ಬೆಂಗಳೂರಿನಲ್ಲಿ ಮಾಡೆಲಿಂಗ್​ ಕೆಲಸವೊಂದರಲ್ಲಿ ಕಾಣಿಸಬೇಕಿದ್ದ ಯುವತಿ, ಬುಧವಾರದಂದೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಪ್ರಕರಣದ ಸಂಬಂಧ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು ಹೊರವಲಯದ ಕುಂಪಲ ಆಶ್ರಯ ಕಾಲನಿಯ ನಿವಾಸಿ ಚಿತ್ತಪ್ರಸಾದ್ ಎಂಬವರ ಪುತ್ರಿ ಪ್ರೇಕ್ಷಾ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಯತಿರಾಜ್ ಹೆಸರಿನ ಯುವಕನೊಂದಿಗೆ ಪ್ರೀತಿಯಲ್ಲಿದ್ದಳು. ಯತಿರಾಜ್​ ಡ್ರಗ್ಸ್​ ವ್ಯಸನಿಯಾಗಿದ್ದು, ಪ್ರೇಕ್ಷಾಳಿಗೆ ಮಾಡೆಲಿಂಗ್​ ಮಾಡದಿರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆತ​ ತನ್ನ ಸ್ನೇಹಿತ ಸೌರವ್ ಮತ್ತು ಇನ್ನೋರ್ವ ಯುವಕನ ಜತೆ ಬುಧವಾರದಂದು ಪ್ರೇಕ್ಷಾಳ ಮನೆ ಬಳಿ ಬಂದಿದ್ದ. ಆ ವೇಳೆ ಬೆಂಗಳೂರಿಗೆ ಹೋಗುವ ಕುರಿತಾಗಿ ಪ್ರೇಕ್ಷಾ ಮತ್ತು ಯತಿರಾಜ್​ ನಡುವೆ ಜಗಳವಾಗಿದೆ ಎನ್ನಲಾಗಿದೆ. ಅದಾದ ನಂತರ ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಯತಿರಾಜ್​, ಸೌರವ್ ಮತ್ತೋರ್ವ ಯುವಕನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆಕೆಯ ಸಾವಿಗೆ ನಿಜವಾದ ಕಾರಣವೇನು ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net