ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ --- ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

NIA
Published on

ಮಂಗಳೂರು: ರಾಜ್ಯವನ್ನೇ ತಲ್ಲಣಗೊಳಿಸಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೋರ್ವನನ್ನು ಎನ್‌ಐಎ ತಂಡ ಶುಕ್ರವಾರ ದೆಹಲಿಯಲ್ಲಿ ಬಂಧಿಸಿದೆ.

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯಕಾರಿಣಿ ಸದಸ್ಯನಾಗಿದ್ದ ಮಾಣಿ ಬಳಿಯ ಕೊಡಾಜೆ ನಿವಾಸಿ ಮೊಹಮ್ಮದ್ ಶರೀಫ್ (55) ಎಂಬಾತನನ್ನು ನವದೆಹಲಿ ಇಂದಿರಾಗಾಂಧಿ ಅಂ.ರಾ.ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈತ ಕೊಲೆ ಪ್ರಕರಣ ನಡೆದ ಬಳಿಕ ಬಹ್ರೇನ್‌ನಲ್ಲಿ ತಲೆಮರೆಸಿಕೊಂಡಿದ್ದು, ಹಿಂತಿರುಗಿ ಊರಿಗೆ ಬರುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ 2022 ಜು.26ರಂದು ಪ್ರವೀಣ್ ನೆಟ್ಟಾರು ಅವರನ್ನು ಪಿಎಫ್‌ಐ ಕಾರ್ಯಕರ್ತರು ಹತ್ಯೆ ಮಾಡಿದ್ದರು. 2022 ಆ.4ರಂದು ತನಿಖೆ ಕೈಗೆತ್ತಿಕೊಂಡ ಎನ್‌ಐಎ ಇದುವರೆಗೆ 20 ಆರೋಪಿಗಳನ್ನು ಬಂಧಿಸಿದೆ. ಪ್ರಕರಣದಲ್ಲಿ ಮೂವರು ತಲೆಮರೆಸಿಕೊಂಡಿರುವವರು ಸೇರಿದಂತೆ 23 ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.

ಆರೋಪಿಯ ಪತ್ತೆಗಾಗಿ ಎನ್‌ಐಎ ಅಧಿಕಾರಿಗಳು 5 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಈತ ಪ್ರವೀಣ್ ಕೊಲೆಗೆ ಸಂಚು ರೂಪಿಸುತ್ತಿದ್ದ ತಂಡದಲ್ಲಿದ್ದ. ಜೊತೆಗೆ ನಿಷೇಧಿತ ಪಿಎಐ ಸಂಘಟನೆಯ ಮುಖಂಡನಾಗಿದ್ದ. ಎರಡು ಬಾರಿ ಎನ್‌ಐಎ ಅಧಿಕಾರಿಗಳು ಶರೀಫ್ ಮನೆ ಮೇಲೆ ದಾಳಿ ಮಾಡಿದ್ದರು. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಹಚರರ ಸ್ಥಳಗಳ ಮೇಲೆ ಇತ್ತೀಚೆಗೆ ಎನ್‌ಐಎ ದಾಳಿ ಮಾಡಿ ದಾಖಲೆಗಳು ಜಪ್ತಿ ಮಾಡಿಕೊಂಡಿತ್ತು. ಕರ್ನಾಟಕ ಸೇರಿ ತಮಿಳುನಾಡಿನ 16 ಕಡೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದರು. ಹತ್ಯೆಯ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್‌ಗೆ ಇಬ್ಬರು ಆರೋಪಿಗಳು ಆಶ್ರಯ ನೀಡಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿಯಲ್ಲಿರುವ ಆರೋಪಿ ನೌಷದ್ ಮನೆ ಮೇಲೆ ಕೂಡ ಎನ್‌ಐಎ ಅಧಿಕಾರಿಗಳು ಇತ್ತೀಚೆಗೆ ದಾಳಿ ಮಾಡಿದ್ದರು. ದಾಳಿ ವಿಚಾರ ತಿಳಿದು ಮನೆ ಲಾಕ್ ಮಾಡಿ ಕುಟುಂಬ ಪರಾರಿ ಆಗಿತ್ತು. ನೌಷದ್ ಪತ್ತೆಗೂ ಎನ್‌ಐಎ 2 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಎನ್‌ಐಎ ತನಿಖೆಯ ಪ್ರಕಾರ, ಕೊಡಾಜೆ ಮೊಹಮ್ಮದ್ ಶೆರೀಫ್ ಪಿಎಫ್‌ಐನ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಮತ್ತು ಸಂಘಟನೆಯ ಸೇವಾ ತಂಡದ ಮುಖ್ಯಸ್ಥನಾಗಿದ್ದ. ಕೊಡಾಜೆ ಸಹ ಆರೋಪಿಗಳೊಂದಿಗೆ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್‌ನಲ್ಲಿ ಸೇವಾ ತಂಡದ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವಲ್ಲಿ ತೊಡಗಿಸಿಕೊಂಡಿದ್ದ.

ಪಿಎಫ್‌ಐನ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆಯ ನಂತರ ಉದ್ದೇಶಿತ ಹತ್ಯೆಯ ಸೂಚನೆಗಳನ್ನು ತಿಳಿಸುವ ಜವಾಬ್ದಾರಿಯನ್ನು ಕೊಡಾಜೆ ವಹಿಸಿದ್ದ. ಈತನ ಸೂಚನೆ ಮೇರೆಗೆ ಆರೋಪಿ ಮುಸ್ತಫಾ ಪೈಚಾರ್ ಮತ್ತು ಆತನ ತಂಡ ಪ್ರವೀಣ್ ನೆಟ್ಟಾರನ್ನು ಬರ್ಬರವಾಗಿ ಕಡಿದು ಹತ್ಯೆ ಮಾಡಿತ್ತು.

ಸಮಾಜದಲ್ಲಿ ಭಯೋತ್ಪಾದನೆ ಮತ್ತು ಕೋಮು ದ್ವೇಷ ಮತ್ತು ಅಶಾಂತಿಯನ್ನು ಹರಡುವ ಉದ್ದೇಶದಿಂದ ಸಂಚು ರೂಪಿಸಲಾಗಿತ್ತು ಎಂದು ಎನ್‌ಐಎ ತನಿಖೆಯಿಂದ ತಿಳಿದು ಬಂದಿದೆ. ಸಂಪೂರ್ಣ ಷಡ್ಯಂತ್ರವನ್ನು ಬಯಲಿಗೆಳೆಯಲು ಮತ್ತು ತಲೆಮರೆಸಿಕೊಂಡಿರುವವರನ್ನು ಬಂಧಿಸಲು ತನಿಖೆ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net