ತಪ್ಪು ಮಾಹಿತಿ ನೀಡಿ ಸಂತ್ರಸ್ತ ರೈತರ ಹೋರಾಟ ದಿಕ್ಕು ತಪ್ಪಿಸುವ ಯತ್ನಹೋರಾಟ ಸಮಿತಿಗಳ ಒಕ್ಕೂಟ ಆರೋಪ

raitha
Published on

ಮಂಗಳೂರು : ಉಡುಪಿ ಜಿಲ್ಲೆಯ ಎಲ್ಲೂರಿನಲ್ಲಿರುವ ಯುಪಿಸಿಎಲ್ ವಿದ್ಯುತ್ ಸ್ಥಾವರದಿಂದ ಕೇರಳಕ್ಕೆ ವಿದ್ಯುತ್ ಲೈನ್ ಯೋಜನೆಯ ಗುತ್ತಿಗೆದಾರ ಕಂಪೆನಿ ‘ಯುಕೆಟಿಎಲ್-ಸ್ಟೆರ್‌ಲೈಟ್’ ಕಾಮಗಾರಿಯ ಕುರಿತು ತಪ್ಪು ಮಾಹಿತಿ ನೀಡಿ ಸಂತ್ರಸ್ತ ರೈತರ ಹೋರಾಟದ ದಿಕ್ಕು ತಪ್ಪಿಸವ ಯತ್ನ ನಡೆಸುತ್ತಿದೆ ಎಂದು ಹೋರಾಟ ಸಮಿತಿಗಳ ಒಕ್ಕೂಟ ಆರೋಪಿಸಿದೆ.

ಕಂಪೆನಿ ಹೇಳಿಕೊಳ್ಳುತ್ತಿರುವಂತೆ ಕಾಮಗಾರಿಯ ಯಾವುದೇ ಪ್ರಗತಿ ನಡೆಯುತ್ತಿಲ್ಲ. ಕೃಷಿ ಭೂಮಿಯ ಮೇಲೆ ಟವರ್, ಲೈನ್ ಹಾದುಹೋಗುವುದಕ್ಕೆ ಶೇ.95ರಷ್ಟು ರೈತರ ವಿರೋಧವಿದೆ. ಶೀಘ್ರದಲ್ಲೇ ದ.ಕ ಮತ್ತು ಉಡುಪಿ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಹಕ್ಕೊತ್ತಾಯ ಪ್ರತಿಭಟನೆ ನಡೆಸಲಾಗುವುದು ಎಂದು ‘ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ’ದ ಪ್ರಧಾನ ಕಾರ್ಯದರ್ಶಿ ಇನ್ನಾ ಚಂದ್ರಶೇಖರ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಂಪೆನಿ ಹೇಳಿಕೊಂಡಿರುವಂತೆ ಕಾಮಗಾರಿ ಚುರುಕುಗೊಂಡಿಲ್ಲ. ಕೇಂದ್ರ ಸರ್ಕಾರದ ಇಂಧನ ಸಚಿವಾಲಯದ ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ(ಸಿಇಎಒ) ಡಿಸೆಂಬರ್ 2024ರ ಪ್ರಗತಿ ವರದಿಯಲ್ಲಿ ದಾಖಲಾಗಿರುವಂತೆ ಕರ್ನಾಟಕ ರಾಜ್ಯ ವ್ಯಾಪ್ತಿಯ 177 ಟವರ್‌ಗಳ ಪೈಕಿ 128 ಟವರ್ ವ್ಯಾಪ್ತಿ ಪ್ರದೇಶದಲ್ಲಿ ತೀವ್ರತರದ ವಿರೋಧವಿದೆ. ಉಳಿದೆಡೆ ಟವರ್ ಬೇಸ್ ನಿರ್ಮಾಣ ಕಾರ್ಯ ಮಾತ್ರ ನಡೆಯುತ್ತಿದೆ. ಈಗಾಗಲೇ ಅನೇಕ ಮಂದಿ ರೈತರು ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಹತ್ತಿದ್ದಾರೆ. ರೈತರಲ್ಲಿ ಗೊಂದಲ ಮೂಡಿಸಿ ಹೋರಾಟದ ದಿಕ್ಕು ತಪ್ಪಿಸಲು ಕಂಪೆನಿ ತಪ್ಪು ಮಾಹಿತಿ ನೀಡುತ್ತಿದೆ ಎಂದು ಹೇಳಿದರು.

ಎಲ್ಲೂರಿನಿಂದ ಕಾಸರಗೋಡಿನವರೆಗೆ 115 ಕಿ.ಮೀ.ನಲ್ಲಿ 278 ಟವರ್ ನಿರ್ಮಾಣವಾಗಲಿದೆ. ಇದರಲ್ಲಿ 101 ಕೇರಳದಲ್ಲಿ, 177 ಕರ್ನಾಟಕದಲ್ಲಿರುತ್ತದೆ. 46 ಮೀಟರ್ ಕಾರಿಡಾರ್ ಇರುತ್ತದೆ. 1,150 ಎಕರೆ ಕಾರಿಡಾರ್‌ಗೆ ಸೇರಿದಂತೆ 3,450 ಎಕರೆ ನೇರವಾಗಿ ಯೋಜನೆಗೆ ಬಳಕೆಯಾಗಲಿದೆ. ಎಲ್ಲೂರಿನಿಂದ ಪುಣಚದವರೆಗೆ 1.65 ಲಕ್ಷ ಅಡಿಕೆ ಮರ, 10,000 ಕ್ಕೂ ಅಧಿಕ ತೆಂಗಿನ ಮರ, ಇತರ ಸಾವಿರಾರು ಮರಗಳು ಬಲಿಯಾಗಲಿವೆ. ಅರಣ್ಯ ಇಲಾಖೆ ಪ್ರಕಾರ 4,500ಕ್ಕೂ ಅಧಿಕ ಬೃಹತ್ ಮರಗಳಿವೆ. ಅದಕ್ಕಾಗಿ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಹಾಗಾಗಿ ಕೃಷಿ ಭೂಮಿಯ ಬದಲು ಪರ್ಯಾಯ ಮಾರ್ಗದಲ್ಲಿ ಲೈನ್ ಹಾದು ಹೋಗುವಂತೆ ಮಾಡಬೇಕು. ಹಲವೆಡೆ ಗೆಜೆಟ್ ನೋಟಿಫಿಕೇಶನ್‌ನಲ್ಲಿ ಉಲ್ಲೇಖಿಸಲಾದ ಜಾಗವನ್ನು ಹೊರತುಪಡಿಸಿ ಬೇರೆ ಕಡೆ ಟವರ್ ನಿರ್ಮಿಸಲಾಗಿದೆ. ರೈತರನ್ನು ಕತ್ತಲಲ್ಲಿಟ್ಟು ಅವರ ಬದುಕು ನಾಶ ಮಾಡುವ ಯತ್ನ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಜನಪ್ರತಿನಿಧಿಗಳು ಕೂಡ ಮೌನವಾಗಿದ್ದಾರೆ. ವಿಮಾನ ನಿಲ್ದಾಣ ಪ್ರಾಧಿಕಾರಕ್ಕೂ ತಪ್ಪು ಮಾಹಿತಿ ನೀಡಿ ನಿಷೇಧಿತ ವಲಯದಲ್ಲಿ ಟವರ್ ಅಳವಡಿಸುವ ಪ್ರಯತ್ನ ನಡೆಯುತ್ತಿದೆ. ಜ.17ರಂದು ಮಂಗಳೂರಿಗೆ ಮುಖ್ಯಮಂತ್ರಿಯವರು ಆಗಮಿಸುವ ಸಂದರ್ಭದಲ್ಲಿ ರೈತರು ಈ ಬಗ್ಗೆ ಹಕ್ಕೊತ್ತಾಯ ಸಲ್ಲಿಸಲಿದ್ದಾರೆ ಎಂದವರು ಹೇಳಿದರು.

ಒಕ್ಕೂಟದ ಸಂಚಾಲಕರಾದ ಅಲ್ಫೋನ್ಸ್ ಡಿಸೋಜ, ಅಲೆಕ್ಸ್ ಸಿಕ್ವೇರಾ, ಸಂತ್ರಸ್ತೆ ಜೆಸಿಂತಾ ಲೋಬೋ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net