ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಮಂಗಳೂರು: ಅಂಗಡಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ(ಎಫ್‌ಟಿಎಸ್‌ಸಿ-1) ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಶನಿವಾರ ನ್ಯಾಯಾಧೀಶರಾದ ವಿನಯ್ ದೇವರಾಜ್ ತೀರ್ಪು ಪ್ರಕಟಿಸಿದ್ದಾರೆ.

ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಅಬ್ದುಲ್ ಅಶ್ರಫ್ (42) ಶಿಕ್ಷೆಗೊಳಗಾದ ಅಪರಾಧಿ. ಈತ 2024ರ ಆ.11ರಂದು ಈತನ ಅಂಗಡಿಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಮನೆಯಲ್ಲಿ ನೊಂದು ಕುಳಿತಿದ್ದ ಬಾಲಕಿಯನ್ನು ತಾಯಿ ಪ್ರಶ್ನಿಸಿದಾಗ ನಡೆದ ಘಟನೆಗಳನ್ನು ತಿಳಿಸಿದ್ದಳು. ಈ ಬಗ್ಗೆ ಆ.12ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪಿಎಸ್‌ಐ ರತನ್ ಕುಮಾರ್ ಎಂ. ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯ ಮೇಲಿನ ಆರೋಪ ಸಾಬೀತಾಗಿರುವುದಾಗಿ ತೀರ್ಮಾನಿಸಿ ಆರೋಪಿ ಅಶ್ರಪ್‌ಗೆ ಬಿಎನ್‌ಎಸ್ ಕಲಂ 74ರಡಿ 3 ವರ್ಷ ಸಾದಾ ಸಜೆ, 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ, ಪೊಕ್ಸೋ ಕಾಯಿದೆಯ ಕಲಂ 10ರಡಿಯಲ್ಲಿ 5 ವರ್ಷ ಸಾದಾ ಸಜೆ, 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ, ಪೊಕ್ಸೋ ಕಲಂ 12ರ ಪ್ರಕಾರ 3 ತಿಂಗಳ ಸಾದಾ ಸಜೆ ಮತ್ತು 10,000 ರೂ.ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ನೊಂದ ಬಾಲಕಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದ ಮಂಡಿಸಿದ್ದರು. ಪ್ರಕರಣ ದಾಖಲಾದ 5 ತಿಂಗಳ ಅವಧಿಯಲ್ಲಿ ನ್ಯಾಯಾಲಯ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net