

ಮಂಗಳೂರು: ಟಿವಿ ನೋಡಲು ಬರುತ್ತಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಗರ್ಭಿಣಿಯಾಗಿಸಿದ ಆರೋಪ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ. 2 ಫೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.
ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ನಿವಾಸಿ ಕೆ.ಸುಧೀರ್ (27) ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣದ ಹಿನ್ನೆಲೆ: ಸುಧೀರ್ ವಾಸವಾಗಿದ್ದ ಮನೆಗೆ 13 ವರ್ಷದ ಬಾಲಕಿ ಟಿವಿ ನೋಡಲು ಬರುತ್ತಿದ್ದು, 2021 ಡಿಸೆಂಬರ್ ಕೊನೇ ವಾರದಲ್ಲಿ ಬಾಲಕಿಯನ್ನು ಅಂಗಡಿಗೆಂದು ಕರೆದೊಯ್ದು ವಾಸವಿಲ್ಲದ ಅಪರಾಧಿಯ ಅಜ್ಜಿ ಮನೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ತಾಯಿಗೆ ಹೇಳುತ್ತೇನೆ ಎಂದು ಬಾಲಕಿ ಹೇಳಿದಾಗ ನೀನೆ ನನ್ನ ಬಳಿ ಬಂದದ್ದು ಎಂದು ಹೇಳಿ ನಿನಗೆ ಪೊಲೀಸ್ ದೂರು ಕೊಡುತ್ತೇನೆ ಎಂದು ಹೆದರಿಸಿದ್ದ. ಬಳಿಕ ರಜಾ ದಿನಗಳಲ್ಲಿ ಬಾಲಕಿ ಟಿವಿ ನೋಡಲು ಹೋದಾಗ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಸುಧೀರ್ ಅತ್ಯಾಚಾರ ನಡೆಸಿದ್ದ. ಪರಿಣಾಮ 2022 ಆಗಸ್ಟ್ ತಿಂಗಳಲ್ಲಿ ಬಾಲಕಿ ಗರ್ಭಿಣಿಯಾಗಿ ವಾಂತಿ ಮಾಡಲು ಪ್ರಾರಂಭವಾದ ಕಾರಣ ಈ ವಿಚಾರ ಅಪರಾಧಿಗೆ ತಿಳಿದು ಇನ್ನೊಂದು ಬಾರಿ ಲೈಂಗಿಕ ಕ್ರಿಯೆ ನಡೆಸಿದರೆ ಸರಿಯಾಗುತ್ತದೆ ಎಂದು ಹೇಳಿ ಅಜ್ಜಿಯ ಮನೆಯಲ್ಲಿ ಮತ್ತೊಂದು ಬಾರಿ ನೊಂದ ಬಾಲಕಿ ಜತೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ.
ಪತ್ನಿ ಎಂದು ಗರ್ಭಪಾತ ಮಾಡಿಸಿದ್ದ: ಬಾಲಕಿಗೆ ವಾಂತಿ ಮುಂದುವರಿದಾಗ ತನ್ನ ತಾಯಿಗೆ ವಿಷಯ ತಿಳಿಸಿ ಚಿಕ್ಕಮಗಳೂರು ಕಡೆ ಎಲ್ಲಾದರೂ ಗರ್ಭಪಾತ ಮಾಡಿಸಿದರೆ ಉತ್ತಮ ಎಂದು ಮನಗಂಡು ಆಸ್ಪತ್ರೆಯವರಿಗೆ ತನ್ನ ಪತ್ನಿ ಎಂದು ಬಿಂಬಿಸಲು ಆಕೆಗೆ ಕಾಲುಂಗುರ, ಬೆಳ್ಳಿಯ ಕರಿಮಣಿ ಸರ ಹಾಕಿಸಿ ಮದುಮಗಳಂತೆ ಅಲಂಕಾರ ಮಾಡಿಸಿ ಫೋಟೊ ತೆಗೆಸಿದ್ದ. 2022 ಡಿ.17ರಂದು ಚಿಕ್ಕಮಗಳೂರಿನ ಆಸ್ಪತ್ರೆಗೆ ತೆರಳಿ ಬಾಲಕಿಯನ್ನು ಪತ್ನಿ ಎಂದು ವೈದ್ಯರಿಗೆ ತಿಳಿಸಿ ಗರ್ಭಪಾತ ಮಾಡಿಸಿದ್ದ. ನಂತರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನ ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ಮತ್ತು ಸತ್ಯನಾರಾಯಣ ಕೆ. ಅವರು ತನಿಖೆ ನಡೆಸಿ, ಸುಧೀರ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ. 2 ಫೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 24 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿದೆ. 62 ದಾಖಲೆಗಳನ್ನು ಗುರುತಿಸಲಾಗಿದೆ. ಸಾಕ್ಷೃ, ದಾಖಲೆಗಳು ಹಾಗೂ ಪೂರಕ ಸಾಕ್ಷೃ ಮತ್ತು ವಾದ ಪ್ರತಿವಾದ ಆಲಿಸಿ ಆರೋಪಿ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಶಿಕ್ಷೆ ಪ್ರಕಟಿಸಿದ್ದಾರೆ.
ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಪೋಕ್ಸೋ ಕಾಯ್ದೆಯಂತೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 40 ಸಾವಿರ ರೂ. ದಂಡ ವಿಧಿಸಿದೆ. ಸಾಕ್ಷೃ ನಾಶ ಮಾಡಿದ ಅಪರಾಧಕ್ಕೆ 3 ವರ್ಷಗಳ ಕಾಲ ಸಾದಾ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡದ ಹಣ 50 ಸಾವಿರ ರೂ. ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ದಂಡ ಪ್ರಕ್ರಿಯೆ ಸಂಹಿತೆಯ ಪ್ರಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 2 ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಬದರಿನಾಥ ನಾಯರಿ ವಾದ ಮಂಡಿಸಿದ್ದರು.