ಆರೋಪಿ ಪತ್ತೆಗೆ ಮಂಗಳೂರು ಪೊಲೀಸ್ ತಂಡ ಬಾಗಲಕೋಟೆಗೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ನಗರದ ಸೂಟರ್ ಪೇಟೆ ಬಳಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಎಳೆದು ಪರಾರಿಯಾಗಿರುವ ಪ್ರಕರಣದಲ್ಲಿ ಬಂಧಿತನಾಗಿ, ಶುಕ್ರವಾರ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿರುವ ಆರೋಪಿಗಾಗಿ ವಿವಿಧ ಆಯಾಮಗಳಲ್ಲಿ ಶೋಧ ಮುಂದುವರಿದಿದೆ. ಪಾಂಡೇಶ್ವರ ಪೊಲೀಸರ ತಂಡವೊಂದು ಆತನ ಶೋಧ ಕಾರ್ಯಕ್ಕೆ ಬಾಗಲಕೋಟೆಗೆ ತೆರಳಿದೆ.
ಬಾಗಲಕೋಟೆಯ ಅಲ್ತಾಫ್ ಹುಸೈನ್ (40) ಪರಾರಿಯಾಗಿರುವ ಆರೋಪಿ. ಈ ಪ್ರಕರಣದ ಇನ್ನುಳಿದ ಇಬ್ಬರು ಆರೋಪಿಗಳಾದ ಉತ್ತರ ಪ್ರದೇಶದ ರವಿ ಬೌರಾ (39) ಮತ್ತು ಗೊಂಡಾ ಜಿಲ್ಲೆ ಮೊಹಮ್ಮದ್ ಸಾಹೀಲ್ ಅಲಿಯಾಸ್ ಸಿದ್ದಿಕಿ (26) ಈಗಾಗಲೇ ಬಂಧಿಸಲಾಗಿದೆ.
ವ್ಯಾಪಾರಿಗಳೆಂದು ಸುಳ್ಳು ಹೇಳಿದ್ದರು: ಶುಕ್ರವಾರ ಮುಂಜಾನೆ 7 ಗಂಟೆ ವೇಳೆಗೆ ಪಾಂಡೇಶ್ವರ ರೊಸಾರಿಯೊ ಶಾಲಾ ರಸ್ತೆಯ ಬದಿಯಲ್ಲಿ ಮೂವರು ಅನುಮಾನಾಸ್ಪದವಾಗಿ ಕಂಡು ಬಂದ ಹಿನ್ನೆಲೆಯಲ್ಲಿ, ಗಸ್ತಿನಲ್ಲಿನಲ್ಲಿ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದಾಗ ಆರಂಭದಲ್ಲಿ ತಾವು ವ್ಯಾಪಾರಕ್ಕೆ ಬಂದವರು ಎಂದು ಸುಳ್ಳು ಹೇಳಿದ್ದರು.
ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸರ ಕಳ್ಳತನ ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದರು. ಈ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಕರೆ ತರುತ್ತಿದ್ದ ವೇಳೆ ಅಲ್ತಾಫ್ ಹುಸೈನ್ ಪೊಲೀಸರನ್ನು ತಳ್ಳಿ ನೆಲಕ್ಕೆ ಬೀಳಿಸಿ ಸ್ಥಳದಿಂದ ಓಡಿ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಆರೋಪಿಯ ಪತ್ತೆಗೆ 2 ತಂಡವನ್ನು ರಚಿಸಲಾಗಿದ್ದು, ತನಿಖೆ ಆರಂಭಿಸಿದ್ದಾರೆ. ಪಾಂಡೇಶ್ವರ ಪೊಲೀಸರ ತಂಡ ಆರೋಪಿಯ ಸ್ವಂತ ಊರಾದ ಬಾಗಲಕೋಟೆಗೆ ತೆರಳಿ ಶೋಧ ನಡೆಸುತ್ತಿದೆ. ಪರಾರಿಯಾಗುವ ವೇಳೆ ಆತನ ಕೈಯಲ್ಲಿ ಹಣ ಕೂಡಾ ಇರಲಿಲ್ಲ ಎಂಬ ಮಾಹಿತಿ ಲಭಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net