

ಮಂಗಳೂರು: ರಾಜ್ಯದಲ್ಲಿ ಲಕ್ಷಕ್ಕಿಂತಲೂ ಅಧಿಕ ಪೊಲೀಸರಿದ್ದು, ಶೇ.45ರಷ್ಟು ಪೊಲೀಸರಿಗೆ ಮಾತ್ರ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಶೇ.100ರಷ್ಟು ಗುರಿ ಸಾಧಿಸುವುದು ಸರ್ಕಾರದ ಉದ್ದೇಶವಾಗಿದ್ದು, ಇದಕ್ಕಾಗಿ 5 ಸಾವಿರ ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಪೊಲೀಸ್ ಲೇನ್‌ನಲ್ಲಿ ಶನಿವಾರ ಮಂಗಳೂರು ನಗರ ಪೊಲೀಸ್ ನೂತನ ವಸತಿ ಗೃಹ ಸಮುಚ್ಛಯ, ಸುಬ್ರಹ್ಮಣ್ಯ, ಬಂಟ್ವಾಳ ಸಂಚಾರ ಠಾಣೆ ಕಟ್ಟಡ ಹಾಗು ಬೆಳ್ಳಾರೆ ಪೊಲೀಸ್ ವಸತಿ ಸಮುಚ್ಛಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈ ಬಾರಿ ರಾಜ್ಯದಲ್ಲಿ 1600 ಗೃಹಗಳ ನಿರ್ಮಾಣವಾಗಿದ್ದು, ಇದಕ್ಕಾಗಿ 500 ಕೋಟಿ ರೂ. ನೀಡಲಾಗಿದ್ದು, ಮುಂದಿನ ವರ್ಷವೂ ಸಾವಿರ ಕೋಟಿ ನೀಡುತ್ತೇವೆ. ದ.ಕ. ಜಿಲ್ಲೆಯಲ್ಲಿ 6 ಕೋಟಿ ರೂ. ವೆಚ್ಚದ ಪೊಲೀಸ್ ಕಟ್ಟಡ ಉದ್ಘಾಟನೆ ಮಾಡಲಾಗಿದೆ. ಸಮಾಜಕ್ಕಾಗಿ ಕೆಲಸ ಮಾಡುವ ಪೊಲೀಸರನ್ನು ಸರ್ಕಾರ ಗುರುತಿಸಿ, ಅವರಿಗೆ ಉತ್ತಮ ಜೀವನಕ್ಕೆ ಅವಕಾಶ ಕಲ್ಪಿಸುತ್ತಿದೆ ಎಂದರು.
ಮತೀಯ ಶಕ್ತಿಗಳಿಗೆ ಕಡಿವಾಣ
ಮುಂಬೈ ಮಹಾನಗರಕ್ಕೆ ಸಮಾನವಾಗಿ ಬೆಳೆಯುವ ಎಲ್ಲಾ ಅರ್ಹತೆಯೂ ದ.ಕ. ಜಿಲ್ಲೆಗಿದೆ. ಅದಕ್ಕೆ ತೊಡಕಾಗಿರುವ ಮತೀಯ ಶಕ್ತಿಗಳನ್ನು ಹತ್ತಿಕ್ಕಿ ಶಾಂತಿಯ ತೋಟ ನಿರ್ಮಾಣ ಮಾಡುವಲ್ಲಿ ಪೊಲೀಸ್ ಇಲಾಖೆ ಕ್ರಮ ವಹಿಸಬೇಕು. ಇಲ್ಲಿನ ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕಲು ಕಮ್ಯೂನಲ್ ಟಾಸ್ಕ್ ಪೋರ್ಸ್ ರಚನೆ ಮಾಡಿದ್ದೆ. ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಇದರಿಂದಾಗಿ ಶೇ. 50ರಷ್ಟು ಕೋಮು ಸಂಘರ್ಷಗಳನ್ನು ಹತ್ತಿಕ್ಕಲು ಸಾಧ್ಯವಾಗಿದೆ ಎಂದರು.
ಜನಸ್ನೇಹಿ ಪೊಲೀಸ್ ಠಾಣೆಗೆ ತಲಾ 1 ಲಕ್ಷ ರೂ.
ಜನರು ಪೊಲೀಸ್ ಠಾಣೆಗೆ ಬರುವವರನ್ನೆಲ್ಲಾ ಕಳ್ಳನೆಂದು ತಿಳಿಯುವ ಮನಸ್ಥಿತಿ ಬದಲಾಗಬೇಕು. ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಬರುವವರಿಗೆ ಚಹಾ ಕಾಫಿ ಸೇರಿದಂತೆ ಆದರದ ವ್ಯವಸ್ಥೆಗೆ ತಲಾ 1 ಲಕ್ಷ ರೂ. ಈ ಹಿಂದೆ ನೀಡಲಾಗುತ್ತಿತ್ತು. ಅದನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ. ಅದನ್ನು ಮತ್ತೆ ಮುಂದುವರಿಸಲಾಗುವುದು ಎಂದು ಸಚಿವರು ಹೇಳಿದರು.
ಕರ್ನಾಟಕ ಪೊಲೀಸ್ ಬೆಸ್ಟ್
ದೇಶದಲ್ಲಿಯೇ ಕರ್ನಾಟಕ ಪೊಲೀಸರು ಬೆಸ್ಟ್. ಆಧುನಿಕ ತಂತ್ರಜ್ಞಾನ ಇಲಾಖೆಯನ್ನು ಮತ್ತಷ್ಟು ಸದೃಢಗೊಳಿಸಿದೆ. ಇಲಾಖೆಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಆಧುನಿಕ ಜಗತ್ತಿಗೆ ತಕ್ಕಂತೆ ಇಲಾಖೆ ಬೆಳೆದಿದೆ. ಆರ್ಟಿಫಿಶಿಯಲ್ ಇಂಟೆಲೆಜೆನ್ಸಿ ಚಾಲಿತ ಕ್ಯಾಮರಾಗಳ ಮೂಲಕ ತನಿಖೆ ನಡೆಸಲಾಗುತ್ತಿದೆ. ಇದರಿಂದ ಪೊಲೀಸರನ್ನು ಸ್ಮಾರ್ಟ್ ಆಗಿಸಿದೆ ಎಂದು ಹೇಳಿದ ಸಚಿವರು, ಕಾರ್ಯಕ್ರಮ ನಿರೂಪಣೆ ಮಾಡಿದ ಪೊಲೀಸ್ ಸಿಬ್ಬಂದಿ ವಿವೇಕ್‌ರನ್ನು ಪ್ರಶಂಸಿಸಿದರು.
ಪೊಲೀಸರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ ಐಪಿಎಸ್, ಐಎಎಸ್ ಸೇರಿದಂತೆ ಉನ್ನತ ಸ್ಥಾನಕ್ಕೇರಿಸುವ ಸಂಕಲ್ಪ ಮಾಡಬೇಕು ಎಂದು ಸಚಿವರು ಹೇಳಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಬಂಟ್ವಾಳ ಶಾಸಕ ರಾಜೇಶ್ ನಾಕ್, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಎಸ್ಪಿ ಯತೀಶ್ ಎನ್., ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ದಿನೇಶ್ ಕುಮಾರ್, ಕೋಸ್ಟ್‌ಗಾರ್ಡ್ ಕಮಾಂಡರ್ ಎಂ.ಎ. ಅಗರವಾಲ್, ಪೊಲೀಸ್ ಹೌಸಿಂಗ್ ಕಾರ್ಪೋರೇಶನ್‌ನ ಮುಖ್ಯ ಅಭಿಯಂತರ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ವಂದಿಸಿದರು. ಬಂಟ್ವಾಳ ನಗರ ಠಾಣೆ ಕಾನ್‌ಸ್ಟೇಬಲ್ ವಿವೇಕ್ ಕೆ. ಕಾರ್ಯಕ್ರಮ ನಿರೂಪಿಸಿದರು.
ಪುತ್ತೂರು ‘ಬಿ’ ಕೆಟಗರಿ ಮಹಿಳಾ ಠಾಣೆಗೆ 1 ಕೋಟಿ ರೂ.
ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಜಾಗ ಗುರುತಿಸಲಾಗಿದ್ದು, ಠಾಣೆ ನಿರ್ಮಾಣಕ್ಕೆ ಅನುದಾನ ಒದಗಿಸಬೇಕೆಂಬ ಶಾಸಕ ಅಶೋಕ್ ರೈ ಅವರ ಬೇಡಿಕೆಗೆ ಸ್ಪಂದಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ, ‘ಬಿ’ ಕೆಟಗರಿಯಡಿ ಮಹಿಳಾ ಠಾಣೆ ನಿರ್ಮಾಣಕ್ಕೆ ಒಂದು ಕೋಟಿ ರೂ. ಒದಗಿಸಲಾಗುವುದು. ಡಿಎಆರ್ ಕಚೇರಿ ಸ್ಥಳಾಂತರದ ಬೇಡಿಕೆಯ ಬಗ್ಗೆ ಅಧಿಕಾರಿಗಳಲ್ಲಿ ಪರಿಶೀಲನೆಗೆ ತಿಳಿಸುವುದಾಗಿ ಸಚಿವರು ಭರವಸೆ ನೀಡಿದರು.