

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ 11 ವರ್ಷಗಳಿಂದ ಅತಿ ಗಣ್ಯ ವ್ಯಕ್ತಿಗಳು ಆಗಮಿಸುವ ಸಂದರ್ಭದಲ್ಲಿ ಹಾಗೂ ಇತರ ಪ್ರಮುಖ ಬಂದೋಬಸ್ತ್ ಕರ್ತವ್ಯದಲ್ಲಿ ಸ್ಪೋಟಕ ಪತ್ತೆ ಕರ್ತವ್ಯ ಯಶಸ್ವಿಯಾಗಿ ನಿರ್ವಹಿಸುತ್ತಿದ್ದ ಶ್ವಾನ ಗೀತಾ ಶನಿವಾರ ಅಸೌಖ್ಯದಿಂದ ಮೃತಪಟ್ಟಿದೆ.
ಲ್ಯಾಬ್ರಡಾರ್ ರಿಟ್ರೀವರ್ ತಳಿಯ ಶ್ವಾನ ಮಂಗಳೂರಿಗೆ ರಾಷ್ಟ್ರಪತಿ, ಪ್ರಧಾನಿ, ಸಿಎಂ, ರಾಜ್ಯಪಾಲರು, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಮೊದಲಾದ ಅತಿಗಣ್ಯ ವ್ಯಕ್ತಿಗಳು ಆಗಮಿಸುವಾಗ ಗೀತಾ ಸ್ಪೋಟಕ ಪರಿಶೀಲನೆ ಕರ್ತವ್ಯ ನಿರ್ವಹಣೆ ಮಾಡುತ್ತಿತ್ತು. ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ನಗರ ಪೊಲೀಸ್ ಮೈದಾನದಲ್ಲಿ ಭಾನುವಾರ ಬೆಳಗ್ಗೆ 8 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾವಪೂರ್ಣ ಅಂತಿಮ ನಮನ ನಡೆಯಲಿದೆ.
11 ವರ್ಷ 2 ತಿಂಗಳು ವಯಸ್ಸಿನ ಗೀತಾ 2011 ಮೇ 21ರಂದು ಜನಿಸಿತ್ತು. 2011 ಆ.19ರಂದು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿತ್ತು. 2011 ಆ.19ರಿಂದ 2012 ಜು.19ರ ತನಕ 11 ತಿಂಗಳು ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿ ನೀಡಲಾಗಿತ್ತು. ಎ.ಎಚ್.ಸಿ ಹರೀಶ್ ಅವರು ಹ್ಯಾಂಡ್ಲರ್ ಆಗಿದ್ದರು.