ಹದಗೆಟ್ಟ ರಸ್ತೆಯಿಂದ ಅಪಘಾತವಾದರೆ ಇಲಾಖೆ ವಿರುದ್ಧ ಕೇಸ್ದಲಿತ ಕುಂದು ಕೊರತೆ ಸಭೆಯಲ್ಲಿ ಡಿಸಿಪಿ ದಿನೇಶ್ ಕುಮಾರ್ ಎಚ್ಚರಿಕೆ

mng--22 Sep Sc st meeting
Published on


ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳು ವಿಪರೀತ ಕೆಟ್ಟು ಹೋಗಿದ್ದು, ಅವುಗಳನ್ನು ಸರಿಪಡಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಹದಗೆಟ್ಟ ರಸ್ತೆ ಕಾರಣದಿಂದ ಅಪಘಾತ ಸಂಭವಿಸಿದರೆ ಹೆದ್ದಾರಿ ಇಲಾಖೆ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಹೇಳಿದ್ದಾರೆ.


ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್ ಅಧ್ಯಕ್ಷತೆಯಲ್ಲಿ ನಡೆದ ದಲಿತ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರ ಅಹವಾಲುಗಳಿಗೆ ಪ್ರತಿಕ್ರಿಯಿಸಿದರು.


ಕೇಸ್ ದಾಖಲಿಸಲು ಸೂಚನೆ:
ನಗರದ ಬಹುತೇಕ ಶಾಲೆಗಳ ಬಳಿ ಬೆಳಗ್ಗೆ ಮಕ್ಕಳನ್ನು ಶಾಲಾ ಆವರಣದ ಹೊರಗೆ ರಸ್ತೆಯಲ್ಲೇ ಇಳಿಸುವ ಮೂಲಕ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಕುಮಾರ್, ಈ ಬಗ್ಗೆ ಶಾಲಾ ಆಡಳಿತ ಮಂಡಳಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಾಲಾ ಆವರಣದ ಒಳಗೆ
ಹೋಗದೆ, ಆವರಣದಲ್ಲೇ ಮಕ್ಕಳನ್ನು ಇಳಿಸುವ ವಾಹನಗಳ ವಿಡಿಯೋ ಚಿತ್ರೀಕರಣ ನಡೆಸಿ ಕೇಸು ದಾಖಲಿಸುವಂತೆ ಸಂಚಾರಿ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.


ರಾತ್ರಿ ಗಸ್ತು ಹೆಚ್ಚಳ ಸೂಚನೆ:
ರಸ್ತೆಯಲ್ಲಿ ನಿಂತುಕೊಂಡು ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅಡ್ಡಿಪಡಿಸುವ ಮಂಗಳಮುಖಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಘಟನೆಯೊಂದನ್ನು ಉಲ್ಲೇಖಿಸಿ ದಲಿತ ಮುಖಂಡರೊಬ್ಬರು ಆಗ್ರಹಿಸಿದರು. ಮುಂಗಳಮುಖಿಯರ ಸಹಿತ ಯಾರಾದರೂ ವಾಹನ ಸಂಚಾರಕ್ಕೆ ರಾತ್ರಿ ಅಡ್ಡಿಪಡಿಸಿ ಸುಲಿಗೆಯಂತಹ ಪ್ರಕರಣ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ಡಿಸಿಪಿ ದಿನೇಶ್ ಕುಮಾರ್ ಸೂಚಿಸಿದರು.


ಲೇಡಿಗೋಷನ್ ಹಿಂದಿನಂತೆಯೇ ಬಸ್ ನಿಲುಗಡೆ
ಸಾರ್ವಜನಿಕರ ಆಗ್ರಹದ ಮೇರೆಗೆ ಲೇಡಿಗೋಷನ್‌ನಲ್ಲಿ ಬಸ್ ನಿಲುಗಡೆಯನ್ನು ಹಿಂದಿನಂತೆಯೇ ಮುಂದುವರಿಸಲಾಗಿದೆ ಎಂದು ಡಿಸಿಪಿ ದಿನೇಶ್ ಕುಮಾರ್ ಹೇಳಿದ್ದಾರೆ.
ಸ್ಮಾರ್ಟ್‌ಸಿಟಿ ಶಿಫಾರಸು ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಪ್ರಾಯೋಗಿಕವಾಗಿ ಬದಲಾವಣೆ ತರಲಾಗಿತ್ತು. ಸಮೀಪದಲ್ಲೇ ಬಸ್ ನಿಲ್ದಾಣ ಇರುವುದರಿಂದ ಅಲ್ಲಿಂದಲೇ ಪ್ರಯಾಣಿಕರು ಬಸ್ ಹತ್ತಿಕೊಳ್ಳಬೇಕು. ನಿಲ್ದಾಣದ ಎದುರು ಮತ್ತೆ
ಹತ್ತಿಸಿಕೊಳ್ಳುವುದು ಸರಿಯಲ್ಲ. ಹಾಗಾಗಿ ಲೇಡಿಗೋಷನ್ ಬಸ್ ಸ್ಟಾಪ್‌ನ್ನು ರದ್ದುಗೊಳಿಸುವಂತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಪತ್ರ ಬರೆದು ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಸಂಚಾರ ಮಾರ್ಪಾಟುಗೊಳಿಸಲಾಗಿತ್ತು. ಆದರೆ ಇದರಿಂದ ತೊಂದರೆಯಾಗುತ್ತಿದೆ ಎಂಬ ಜನತೆಯ ದೂರಿನ ಮೇರೆಗೆ ಮತ್ತೆ ಹಿಂದಿನಂತೆಯೇ ಲೇಡಿಗೋಷನ್‌ನಿಂದ ಪ್ರಯಾಣಿಕರಿಗೆ ಬಸ್ ಹತ್ತಲು ಅವಕಾಶ ಕಲ್ಪಿಸಲಾಗಿದೆ ಎಂದರು.


ದ್ವಿಮುಖ ಸಂಚಾರಕ್ಕೆ ಕ್ರಮ:
ನಗರದ ಕ್ಲಾಕ್ ಟವರ್‌ನಿಂದ ಹ್ಯಾಮಿಲ್ಟನ್ ವೃತ್ತದವರೆಗೆ ಈಗ ಇರುವ ಏಕಮುಖ ಸಂಚಾರವನ್ನು ತೆಗೆದು ದ್ವಿಮುಖ ಸಂಚಾರ ಏರ್ಪಡಿಸುವಂತೆ ಹಲವು ಮನವಿಗಳು ಬಂದಿದೆ. ಸುಗಮ ಸಂಚಾರ ದೃಷ್ಟಿಯಿಂದ ಈ ಬದಲಾವಣೆ ಮಾಡಲಾಗಿತ್ತು. ಆದರೆ ಮತ್ತೆ ಹಿಂದಿನಂತೆಯೇ ದ್ವಿಮುಖ ಸಂಚಾರಕ್ಕೆ ಬೇಡಿಕೆ ವ್ಯಕ್ತಗೊಳ್ಳುತ್ತಿರುವುದಿಂದ ಕ್ಲಾಕ್‌ಟವರ್ ವೃತ್ತದಲ್ಲಿ ಬಂದ್ ಮಾಡಿರುವುದನ್ನು ತೆರವುಗೊಳಿಸಿಕೊಡುವಂತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳನ್ನು ಕೋರಲಾಗಿದೆ ಎಂದರು.
ಎಸಿಪಿ ಧನ್ಯಾ ನಾಯಕ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net