ಅಂತಾರಾಜ್ಯ ಎಟಿಎಂ ಸ್ಕಿಮ್ಮಿಂಗ್‌ ಜಾಲ ಭೇದಿಸಿದ ಮಂಗಳೂರು ಪೊಲೀಸ್‌

Published on

ಮಂಗಳೂರು: ಮಂಗಳೂರು ನಗರದಲ್ಲಿ ಬೃಹತ್ ಎ.ಟಿ.ಎಂ ಸ್ಕಿಮ್ಮಿಂಗ್ ಪ್ರಕರಣವೊಂದನ್ನು ಭೇದಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ಕಿಂಗ್‌ಪಿನ್‌ ಕೇರಳದ ತ್ರಿಶೂರ್‌ನ ಗ್ಲಾಡ್ವಿನ್ ಜಿಂಟೋ ಜಾಯ್(37), ನವದೆಹಲಿಯ ಪ್ರೇಮ್‌ನಗರದ ದಿನೇಶ್ ಸಿಂಗ್ ರಾವತ್(44), ಕಾಸರಗೋಡು ಜಿಲ್ಲೆಯ ಮೀಪುಗುರಿ ನಿವಾಸ್‌ ಅಬ್ದುಲ್ ಮಜೀದ್(27) ಹಾಗೂ ಆಲಪ್ಪುಯದ ಚೆಕ್ಕಿಡಿಕಾಡು ನಿವಾಸಿ ರಾಹುಲ್(24) ಬಂಧಿತ ಆರೋಪಿಗಳು.
ಮಂಗಳವಾರ ಎಟಿಎಂ ಸ್ಕಿಮ್ಮಿಂಗ್‌ ವೇಳೆ ಆರೋಪಿಗಳನ್ನು ಹಿಡಿಯುವ ವೇಳೆ ಕಾಸರಗೋಡಿನ ಅಜ್ಮಲ್‌ ಎಂಬಾತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗುವಾಗ ಬಿದ್ದು ಜಖಂ ಗೊಂಡಿದ್ದು ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಆತ ಗುಣಮುಖನಾಗುವಾಗ ಆತನನ್ನೂ ಬಂಧಿಸಲಾಗುವುದು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಂಟೋಜಾಯ್‌ ಎಂಬಾತ ಬಿಕಾಂ ಪದವೀಧರನಾಗಿದ್ದು ಸ್ಕಿಮ್ಮಿಂಗ್‌ನಲ್ಲಿ ಪರಿಣತಿ ಪಡೆದಿದ್ದಾನೆ, ಆತನೇ ಇದರ ಕಿಂಗ್‌ಪಿನ್‌. ನಿರ್ದಿಷ್ಟ ತಂಡ ಕಟ್ಟಿಕೊಳ್ಳುವ ಬದಲು ಯಾವುದಾದರೂ ಜಾಗಕ್ಕೆ ಹೋಗಿ ಅಲ್ಲಿ ಸ್ವಲ್ಪ ಕಾಲ ಇದ್ದು, ಸ್ಥಳೀಯ ಖದೀಮರ ಗೆಳೆತನ ಬೆಳೆಸಿಕೊಂಡು ಈ ಕೃತ್ಯ ನಡೆಸುತ್ತಿದ್ದ. ನವೆಂಬರ್ ನಿಂದ ಈವರೆಗೆ 60ಕ್ಕೂ ಹೆಚ್ಚು ಕಡೆಗಳಲ್ಲಿ ಸ್ಕಿಮ್ಮಿಂಗ್ ಕೃತ್ಯವನ್ನು ಮಂಗಳೂರು, ದೆಹಲಿ, ಕೊಚ್ಚಿನ್‌, ಮಡಿಕೇರಿ ಮುಂತಾದೆಡೆ ಈತನ ತಂಡ ಹಣ ಲಪಟಾಯಿಸಿದೆ.
ಮಂಗಳೂರು ನಗರದಲ್ಲೇ ಒಟ್ಟು 22 ಪ್ರಕರಣ ದಾಖಲಾಗಿದ್ದು, ಆತನೇ ಇದರ ಹಿಂದಿರುವುದು ದೃಢಪಟ್ಟಿದೆ. ನಿವೃತ್ತ ನೌಕರರು, ವ್ಯವಹಾರಸ್ಥರ ಖಾತೆಗಳೇ ಈತನ ಟಾರ್ಗೆಟ್ ಆಗಿತ್ತು ಎಂದು ಕಮಿಷನರ್‌ ತಿಳಿಸಿದರು.
ಬಂಧಿತರಿಂದ ಸ್ಕಿಮ್ಮಿಂಗ್ ಮೆಷಿನ್, ಕ್ಯಾಮರಾ, ಕಾರ್ಡ್ ರೀಡರ್, ನಕಲಿ ಎ.ಟಿ.ಎಂ ಕಾರ್ಡ್ ವಶ ಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net