ಏಕಬಳಕೆ ಪ್ಲಾಸ್ಟಿಕ್ ತೊಲಗಿಸಿ ಪ್ಲಾಸ್ಟಿಕ್ ನಿಷೇಧ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮೇಯರ್ ಸುಧೀರ್ ಶೆಟ್ಟಿ ಸೂಚನೆ

mng-july11-mcc
Published on

ಮಂಗಳೂರು : ನಗರದಲ್ಲಿ ಏಕಬಳಕೆ ಪ್ಲಾಸ್ಟಿಕ್‌ನಿಂದ ಅವಾಂತರಗಳು ಸೃಷ್ಟಿಯಾಗುತ್ತಿದ್ದು, ಇದರ ಬಳಕೆಗೆ ಬ್ರೇಕ್ ಹಾಕಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.


ಮನಪಾ ಸಭಾಂಗಣದಲ್ಲಿ ಗುರುವಾರ ಪರಿಸರ ನಿರ್ವಹಣಾ ನೀತಿ ಸಂಶೋಧನಾ ಸಂಸ್ಥೆ-ಎಮ್ರಿ ವತಿಯಿಂದ ಹಮ್ಮಿಕೊಳ್ಳಲಾದ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.


ಪ್ಲಾಸ್ಟಿಕ್ ಉತ್ಪಾದಕರು, ಮಾರಾಟಗಾರರು, ಅಧಿಕಾರಿಗಳು ಹಾಗೂ ಗ್ರಾಹಕರೆಲ್ಲರೂ ಸಹಕಾರ ನೀಡಬೇಕು. ನಮ್ಮೆಲ್ಲರ ಬದುಕಲ್ಲೂ ಪ್ಲಾಸ್ಟಿಕ್ ಹಾಸುಹೊಕ್ಕಾಗಿದೆ, 2022ರ ಜುಲೈನಲ್ಲಿ ಕೇಂದ್ರ ಸರ್ಕಾರ ಏಕಬಳಕೆ ಪ್ಲಾಸ್ಟಿಕ್ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಪ್ಲಾಸ್ಟಿಕ್ ಹಾವಳಿಯಿಂದಾಗಿ ನೆಲದಲ್ಲೆಲ್ಲಾ ಇದು ಸೇರಿಕೊಂಡಿದ್ದು ಸರಿಯಾಗಿ ನೀರು ಕೂಡಾ ಇಂಗದ ಪರಿಸ್ಥಿತಿ ಇದೆ. ಎಲ್ಲರಿಗೂ ಅಭ್ಯಾಸವಾಗಿರುವ ಪ್ಲಾಸ್ಟಿಕ್‌ನ ನಿಷೇಧವನ್ನು ಅನುಷ್ಠಾನ ಪಡಿಸುವುದು ಸವಾಲಿನ ಸಂಗತಿ, ಏಕ ಬಳಕೆ ಪ್ಲಾಸ್ಟಿಕ್ ಚೀಲದ ಬದಲು ಸೆಣಬು, ಬಟ್ಟೆಯ ಚೀಲಗಳನ್ನು ಬಳಸುವುದು, ಆದಷ್ಟೂ ಸ್ಟೀಲ್‌ನ ಲೋಟ ತಟ್ಟೆ, ಬಳಕೆ ಮಾಡುವುದನ್ನು ಜನರು ರೂಢಿಸಿಕೊಳ್ಳಬೇಕು, ಈ ಬಗ್ಗೆ ಪ್ರತಿ ಮನೆ ಮನೆಯಲ್ಲೂ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದರು.


ಜನರ ನಿರ್ಲಕ್ಷೃವೇ ಕಾರಣ: ವಿಜಯ ಹೆಗ್ಡೆ
2016ರಲ್ಲಿ ರಾಜ್ಯ ಸರ್ಕಾರವೇ ಕೇಂದ್ರ ಸರ್ಕಾರಕ್ಕಿಂತಲೂ ಮೊದಲು ಪ್ಲಾಸ್ಟಿಕ್‌ಗೆ ನಿಷೇಧ ಹೇರಿತ್ತು, ಆದರೆ ಇಷ್ಟು ವರ್ಷವಾದರೂ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಲೇ ಹೋಗಿದೆ, ಜನರಿಗೆ ಈ ವಿಚಾರದಲ್ಲಿ ನಿರ್ಲಕ್ಷೃ ಹಾಗೂ ಉದಾಸೀನ ಕಂಡು ಬರುತ್ತಿದೆ, ಆದರೆ ಇನ್ನಾದರೂ ಈ ಬಗ್ಗೆ ಗಂಭೀರವಾಗಿ ಎಲ್ಲರೂ ಚಿಂತಿಸಬೇಕಾಗಿದೆ ಎಂದು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ವಿಜಯ ಹೆಗ್ಡೆ ಹೇಳಿದರು.
ಪರಿಸರ ಅಧಿಕಾರಿ ಮಹೇಂದ್ರ ಉಪಸ್ಥಿತರಿದ್ದರು.

ಆ್ಯಪ್ ಮೂಲಕ ದೂರು ನೀಡಬಹುದು
ಪ್ಲಾಸ್ಟಿಕ್ ನಿಷೇಧ ಕುರಿತಾದ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ, ನಿಷೇಧಿತ ಪ್ಲಾಸ್ಟಿಕ್ ಬಳಕೆ ಕಂಡು ಬಂದರೆ ಈ ಆ್ಯಪ್ ಮೂಲಕ ದೂರು ನೀಡಬಹುದು ಎಂದು ನಿವೃತ್ತ ಪರಿಸರ ಅಧಿಕಾರಿ ಡಾ.ಪ್ರಕಾಶ್ ಹೇಳಿದರು,.


ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಅವರು ಮಾತನಾಡಿ, ಮಂಗಳೂರು ನಗರವೊಂದರಲ್ಲಿ ದಿನಕ್ಕೆ ಒಟ್ಟು ಸರಾಸರಿ 310 ಟನ್ ತ್ಯಾಜ್ಯ ಉತ್ಪಾದನೆಯಾದರೆ ಅದರಲ್ಲಿ 35 ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯವೇ ಇರುತ್ತದೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net