

ಮಂಗಳೂರು: ಶ್ರೀ ಕ್ಷೇತ್ರ ಪೆದಮಲೆ ಶ್ರೀ ವಾಜಿಲ್ಲಾಯ-ಧೂಮಾವತಿ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಕುಡುಪು ಅನಂತಪದ್ಮನಾಭ ದೇವಸ್ಥಾನದ ತಂತ್ರಿಗಳಾದ ಶ್ರೀ ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಶುಕ್ರವಾರ ನಡೆಯಿತು. ರಾತ್ರಿ ಮಹಿಂಷತಾಯ, ವಾಜಿಲ್ಲಾಯ ದೈವದ ನೇಮೋತ್ಸವ ಕಾರ್ಯಕ್ರಮ ವೈಭವದಿಂದ ನಡೆಯಿತು.
ಸುಮಾರು 300 ವರ್ಷಗಳ ನಂತರ ದೈವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ, ವೈಭವದ ನೇಮೋತ್ಸವ ನಡೆಯುತ್ತಿದ್ದು ಈ ಅಪೂರ್ವ ಕ್ಷಣಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.
ಬೆಳಗ್ಗೆ ನೂತನ ದೈವಸ್ಥಾನದಲ್ಲಿ ಶ್ರೀವಾಜಿಲ್ಲಾಯ ಧೂಮಾವತಿ ಬಂಟ ಮಹಿಷಂತಾಯ ದೈವಗಳ ಪ್ರತಿಷ್ಠೆ ಕಲಶಾಭಿಷೇಕ ಮತ್ತು ಪ್ರಸನ್ನಪೂಜೆ ನಡೆಯಿತು. ಶ್ರೀ ಧೂಮಾವತಿ ದೈವದ ದರ್ಶನ ಸೇವೆ, ಧ್ವಜಾರೋಹಣ ಮತ್ತು ಪಲ್ಲಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಬಳಿಕ ಸಂದೇಶ್ ನೀರುಮಾರ್ಗ ಹಾಗೂ ಬಳಗದವರಿಂದ ಭಕ್ತಿ ಗಾನಾಮೃತ ನಡೆಯಿತು.
ರಾತ್ರಿ ಶ್ರೀ ಮಹಿಷಂತಾಯ ದೈವದ ನೇಮೋತ್ಸವ, ಶ್ರೀ ವಾಜಿಲ್ಲಾಯ ದೈವದ ಗಗ್ಗರ ಸೇವೆ, ನೇಮೋತ್ಸವ ಮತ್ತು ಬಂಡಿ ಉತ್ಸವ ನಡೆಯಿತು. ಶನಿವಾರ ರಾತ್ರಿ ಶ್ರೀ ಧೂಮಾವತಿ ಬಂಟ ದೈವಗಳ ಗಗ್ಗರಸೇವೆ, ನೇಮೋತ್ಸವ ಮತ್ತು ಬಂಡಿ ಉತ್ಸವ ಜರುಗಿತು. ನಂತರ ಧ್ವಜಾವರೋಹಣ, ಧ್ವಜಮರ ಇಳಿಸಿ, ದೈವಗಳ ಭಂಡಾರ ನಿರ್ಗಮನವಾಯಿತು.
ಈ ಸಂದರ್ಭ ಶ್ರೀ ವಾಜಿಲ್ಲಾಯ ಧೂಮಾವತಿ ದೈವಸ್ಥಾನದ ಟ್ರಸ್ಟ್ ಅಧ್ಯಕ್ಷ ಗಿರಿಧರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮನೋಜ್ ಸರಿಪಲ್ಲ, ಕ್ಷೇತ್ರದ ಟ್ರಸ್ಟ್ ಕಾರ್ಯಾಧ್ಯಕ್ಷ ಆನಂದ ಸರಿಪಲ್ಲ, ಟ್ರಸ್ಟ್ ಗೌರವಾಧ್ಯಕ್ಷ ಭಾಸ್ಕರ್ ಕೆ., ಟ್ರಸ್ಟಿಗಳಾದ ಭಟ್ರಕೋಡಿ ವೆಂಕಟಕೃಷ್ಣ ಭಟ್, ಏಕನಾಥ್ ಕುಲಶೇಖರ, ಶೇಷಾದ್ರಿ ಭಟ್, ಕಿಶೋರ್ ಕುಮಾರ್ ನೀರುಮಾರ್ಗ, ನಾಗೇಶ್ ನೀರುಮಾರ್ಗ, ಮಹೇಶ್ ಚೌಟ, ವಿಶ್ವನಾಥ ಎ., ಪುಷ್ಪರಾಜ್ ಪೂಜಾರಿ ಕುಲಶೇಖರ ಮತ್ತಿತರರು ಉಪಸ್ಥಿತರಿದ್ದರು.
ನಾವೆಲ್ಲ ಭಾಗ್ಯವಂತರು
ಸುಮಾರು 300ವರ್ಷಗಳ ಬಳಿಕ ಈ ಕ್ಷೇತ್ರದ ಜೀರ್ಣೋದ್ಧಾರ, ನೇಮೋತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವ ನಾವೆಲ್ಲ ಭಾಗ್ಯವಂತರು ಎಂದು ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ಕೃಷ್ಣರಾಜ ತಂತ್ರಿ ಹೇಳಿದರು.
ಪ್ರತಿಷ್ಠಾ ಕಲಶಾಭಿಷೇಕ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ಡಾ.ವೈ. ಭರತ್ ಶೆಟ್ಟಿ, ಮೇಯರ್ ಮನೋಜ್ ಕುಮಾರ್, ಕಾರ್ಪೊರೇಟರ್ ಗಣೇಶ್ ಕುಲಾಲ್, ಟ್ರಸ್ಟಿ ಲೀಲಾವತಿ ಪದ್ಮನಾಭ ರಾವ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಗಟ್ಟಿ ಸಮಾಜ ಮುಖಂಡರಾದ ಯಾದವ ಗಟ್ಟಿ, ದೊಡ್ಡಮನೆ ತಲಪಾಡಿಗುತ್ತು ಡಾ. ಜಯಪಾಲ್ ಶೆಟ್ಟಿ, ಉದ್ಯಮಿ ಉದಯಕುಮಾರ್ ಶೆಟ್ಟಿ, ರವಿ ಪ್ರಸನ್ನ, ಸೀತಾರಾಮ್ ಎ., ವಿನಯಾನಂದ ಜೋಗಿ, ಸುಧೀರ್ ಶೆಟ್ಟಿ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು.
ನಿತೇಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ದೇವಿ ಸ್ವಾಗತಿಸಿದರು. ಟ್ರಸ್ಟಿ ಪುಷ್ಪರಾಜ್ ಪೂಜಾರಿ ವಂದಿಸಿದರು.