

ಮಂಗಳೂರು: ಅಪಾಯಕಾರಿ ತಿರುವು, ಇಕ್ಕಟ್ಟಾದ ರಸ್ತೆ, ತೆರೆದ ಚರಂಡಿ, ಕೊಚ್ಚಿ ಹೋದ ಜಲ್ಲಿ…..
ಇದು ಪಂಜಿಮೊಗರು ವಿದ್ಯಾನಗರದಿಂದ ಬರಕಲ, ಗುತ್ತಿನ ಮನೆ ಸಂಪರ್ಕಿಸುವ ಸಾವಿರಾರು ಮಂದಿ ಸಂಚರಿಸುವ ಸುಮಾರು ಅರ್ಧ ಕಿ.ಮೀ. ರಸ್ತೆಯ ದುಸ್ಥಿತಿ.
ವಿದ್ಯಾನಗರದ ಶಾಲಾ ಬಳಿ ಒಂದಷ್ಟು ದೂರ ಇತ್ತೀಚೆಗೆ ರಸ್ತೆಗೆ ಕಾಂಕ್ರೀಟು ಹಾಕಲಾಗಿದೆ. ಮುಂದುವರಿದು ಇಕ್ಕಟ್ಟಾದ ಡಾಂಬರು ರಸ್ತೆ ಇದೆ. ಭಜನಾ ಮಂದಿರದ ಬಳಿಯ ತಿರುವು ಅಪಾಯಕಾರಿಯಾಗಿದೆ. ಇದು ಇಳಿಜಾರು ರಸ್ತೆಯಾಗಿದ್ದು, ಮಳೆ ನೀರು ರಸ್ತೆಯಲ್ಲಿ ಹರಿದು ರಸ್ತೆಯ ಒಂದು ಭಾಗ ಕೊಚ್ಚಿಕೊಂಡು ಹೋಗಿದೆ.
ರಸ್ತೆಯ ಎರಡೂ ಬದಿಗೆ ಕೇವಲ ಜಲ್ಲಿ ತಂದು ಹಾಕಿದ್ದಾರೆ. ಮಳೆ ನೀರಿನೊಂದಿಗೆ ಕೆಲವು ಕಡೆ ಕೊಚ್ಚಿ ಹೋಗಿದೆ. ಜಲ್ಲಿ ತಂದು ಹಾಕಿರುವುದರಿಂದ ಸುಗಮ ಸಂಚಾರಕ್ಕೂ ತೊಂದರೆಯಾಗಿದೆ. ಜಲ್ಲಿ ತಂದು ಹಾಕುವಾಗಲೇ ಡಾಂಬರು ಹಾಕುತ್ತಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
5 ಸಾವಿರಕ್ಕೂ ಅಧಿಕ ಮಂದಿ ವಾಸ: ವಿದ್ಯಾನಗರ, ಬರಕಲ ಪ್ರದೇಶದಲ್ಲಿ ಸುಮಾರು 5 ಸಾವಿರಕ್ಕಿಂತಲೂ ಅಧಿಕ ಮಂದಿ ವಾಸ ಮಾಡುತ್ತಿದ್ದಾರೆ. 400ಕ್ಕಿಂತಲೂ ಅಧಿಕ ಮನೆಗಳಿವೆ. ಈ ಭಾಗದ ಮಂದಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಇಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುತ್ತಿರುತ್ತವೆ. ಆದರೆ ರಸ್ತೆ ಮಾತ್ರ ಸುವ್ಯವಸ್ಥಿತವಾಗಿಲ್ಲ ಎಂಬುದು ಈ ಭಾಗದ ಜನರ ಕೊರಗು.
ಪ್ರತಿದಿನ ನೂರಾರು ಶಾಲಾ ವಿದ್ಯಾರ್ಥಿಗಳು ಇಲ್ಲಿ ನಡೆದುಕೊಂಡು ಹೋಗುತ್ತಾರೆ. ಶಾಲಾ ಬಸ್‌ಗಳು ಬರುತ್ತವೆ. ನಗರದ ವಿವಿಧ ಕಡೆ ಕೆಲಸಕ್ಕೆ ಹೋಗುವವರು ಬಸ್‌ಗಾಗಿ ವಿದ್ಯಾನಗರಕ್ಕೆ ಬರಬೇಕಾಗಿದೆ. ಅವರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದಷ್ಟು ಶೀಘ್ರ ಡಾಂಬರು ಹಾಕಿ ಸರಿ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಒಳಚರಂಡಿ ಇಲ್ಲ: ಈ ಭಾಗದಲ್ಲಿ ಒಳಚರಂಡಿ ಸಂಪರ್ಕ ಇಲ್ಲ. ಕೊಳಚೆ ನೀರು ತೆರೆದ ಚರಂಡಿಗಳಲ್ಲಿ ಹರಿಯುತ್ತಿವೆ. ಈ ಚರಂಡಿಗಳಿಗೆ ಸ್ಲಾೃಬ್ ಕೂಡಾ ಅಳವಡಿಸದ ಕಾರಣ ವಾಸನೆ ಬರುತ್ತಿದೆ. ರಸ್ತೆ ಬದಿಯಲ್ಲೇ ಹರಿಯುವ ಚರಂಡಿಗೆ ಗಟ್ಟಿಯಾದ ಸ್ಲಾೃಬ್ ಅಳವಡಿಸಿ ರಸ್ತೆ ಅಗಲೀಕರಣ ಮಾಡಲು ಅವಕಾಶವಿದೆ. ಮಹಾನಗರ ಪಾಲಿಕೆ ಸದಸ್ಯರು ಆದ್ಯತೆಯಾಗಿ ಈ ಕೆಲಸ ಮಾಡಬೇಕಿದೆ.
ವಿದ್ಯಾನಗರದಿಂದ ಬರಕಲ, ಪಂಜಿಮೊಗರು ಗುತ್ತಿನ ಮನೆ ಸಂಪರ್ಕಿಸುವ ರಸ್ತೆ ಹದಗೆಟ್ಟು ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಅಪಾಯಕಾರಿ ತಿರುವು ಬಳಿ ರಸ್ತೆ ಬದಿಯ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಆದಷ್ಟು ಶೀಘ್ರ ಡಾಂಬರು ಹಾಕಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು.
ಗಣೇಶ್ ಶೆಟ್ಟಿ
ಸ್ಥಳೀಯ ನಿವಾಸಿ
ಬರಕಲ, ಪಂಜಿಮೊಗರು ಗುತ್ತಿನ ಮನೆ ಸಂಪರ್ಕಿಸುವ ರಸ್ತೆ ಕಾಂಕ್ರಿಟೀಕರಣಕ್ಕೆ ಈಗಾಗಲೇ 15 ಲಕ್ಷ ರೂ. ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಚುನಾವಣಾ ನೀತಿ ಸಂಹಿತೆಯಿಂದ ಒಂದಷ್ಟು ವಿಳಂಬವಾಗಿದೆ. ಸಾರ್ವಜನಿಕರು ಸಹಕಾರ ನೀಡಬೇಕು.
ಅನಿಲ್ ಕುಮಾರ್
ಮನಪಾ ಸದಸ್ಯ