ಮಂಗಳೂರು ಶಿವನಗರದಲ್ಲಿ ಪ್ರತಿವರ್ಷ ನೆರೆ !

WhatsApp Image 2025-06-16 at 7.26.03 PM
Published on

ಪ್ರಕಾಶ್ ಮಂಜೇಶ್ವರ ಮಂಗಳೂರು

ಸತತ ಸುಮಾರು ಎರಡು-ಮೂರು ತಾಸು ಮಳೆಯಾದರೆ ಮಂಗಳೂರಿನ ಪಾಂಡೇಶ್ವರ ರೈಲ್ವೆ ಹಳಿ ಮಗ್ಗುಲಿನ ಶಿವನಗರದಲ್ಲಿ ವಾಸಿಸುವ ಸುಮಾರು 50 ಮನೆಗಳ ಜನರು ರಾತ್ರಿ ಮಲಗುವಂತಿಲ್ಲ. ಕೃತಕ ನೆರೆ, ಹತ್ತಿರದ ರಾಜಕಾಲುವೆ ನೀರು ಮನೆ ಅಂಗಳ ಪ್ರವೇಶಿಸಿ, ಕೆಲವೊಮ್ಮೆ ಮನೆ ಒಳಗೂ ನುಗ್ಗಿ ಮನೆಯಲ್ಲಿ ಇದ್ದವರು ಉಡುಪು, ಬೆಲೆಬಾಳುವ ವಸ್ತುಗಳನ್ನು ಜೋಪಾನ ಮಾಡಲು ಹೆಣಗಾಡುವ ಪರಿಸ್ಥಿತಿ ಎದುರಾಗುತ್ತದೆ.

ಇತರರು ತುಳಿದುಕೊಂಡು ಓಡಾಡಲು ಕೂಡ ಹಿಂಜರಿಯುವ ಗಲೀಜು ನೀರು ಮನೆ ಒಳಗೆ ಪ್ರವೇಶಿಸಿದರೆ ಅಲ್ಲಿ ವಾಸಿಸುವ ಜನರ ಪರಿಸ್ಥಿತಿ ಹೇಗಾಗಬೇಡ? ಎನ್ನುವ ಪ್ರಶ್ನೆಗೆ ಇಲ್ಲಿಯ ತನಕ ಯಾರಲ್ಲೂ ಉತ್ತರವಿಲ್ಲ. ಇದು ಪ್ರತಿವರ್ಷ ಎದುರಾಗುವ ಸಮಸ್ಯೆ. ಆದರೆ ಈ ಬಾರಿ ಸಮಸ್ಯೆಯ ತೀವ್ರತೆ ಹೆಚ್ಚಿದೆ.

1984ನೇ ಇಸವಿಯಲ್ಲಿ ನಾವು ಈ ಪ್ರದೇಶಕ್ಕೆ ಬರುವ ಸಂದರ್ಭ ಶಿವನಗರ, ಹತ್ತಿರದ ಸುಭಾಸ್ ನಗರ ಆಸುಪಾಸು ಎಲ್ಲ ಗದ್ದೆಗಳು ಇದ್ದವು. ಬಳಿಕ ಈ ಪ್ರದೇಶ ಹಂಚಿಹೋದವು. ಮನೆಗಳು ನಿರ್ಮಾಣವಾದವು. ಎಲ್ಲ ಕಡೆ ಕಟ್ಟಡಗಳು ಮೇಲೆದ್ದವು. ಮನೆ ಹೊರತುಪಡಿಸಿದ ಕಡೆ ಮತ್ತು ರಸ್ತೆಗಳಿಗೆ ಕಾಂಕ್ರೀಟು ಹಾಕಲಾಯಿತು. ಎಮ್ಮೆಕೆರೆ ಸಹಿತ ಸುತ್ತಮುತ್ತಲು ನೀರು ಭೂಮಿಯಲ್ಲಿ ಇಂಗುವ ಪ್ರದೇಶಗಳು ಬಂದ್ ಆದವು. ಹತ್ತಿರದ ಸುಭಾಸ್ ನಗರ ಭಾಗಗಳಲ್ಲಿ ಪರಿಸ್ಥಿತಿ ಇನ್ನೂ ಸ್ವಲ್ಪ ಭಿನ್ನವಾಗಿದೆ. ಈ ಭಾಗದಲ್ಲಿ ಒಬ್ಬರ ಸ್ವಾಧೀನಲ್ಲಿದ್ದ ಎಕರೆಗಟ್ಟಲೆ ಜಾಗ ಸಣ್ಣಸಣ್ಣ ತುಂಡುಗಳಾಗಿ ಹಂಚಿಹೋದವು ಅಲ್ಲಿ ನಡುವೆ ಇದ್ದ ಏಕೈಕ ತೋಡಿನ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಹಾಕಲಾಗಿದೆ. ಇಂತಹ ಸಂಗತಿಗಳು ಈ ಭಾಗದಲ್ಲಿ ನಿಧಾನವಾಗಿ ಸಮಸ್ಯೆಯನ್ನು ಹೆಚ್ಚಿಸುತ್ತಾ ಹೋಗಿದೆ ಎನ್ನುತ್ತಾರೆ ಸ್ಥಳೀಯ ಮುಖಂಡ ನಿತಿನ್ ಕುಮಾರ್.

ಸುಭಾಸ್ ನಗರದ ನಡುವಿನ ತೋಡು ಸ್ವಚ್ಛಗೊಳಿಸಲು ಸೋಮವಾರ ಪಾಲಿಕೆ ಕಾರ್ಮಿಕರು ಬಂದಿದ್ದಾರೆ. ಆದರೆ ತೋಡಿಗೆ ಸ್ಲ್ಯಾಬ್ ಹಾಕಿರುವುದರಿಂದ ನಡುವೆ ತೋಡು ಎಲ್ಲಿ ಬ್ಲಾಕ್ ಆಗಿದೆ ಎಂದು ಪತ್ತೆಹಚ್ಚುವುದು ಕೂಡ ಕಷ್ಟವಾಗಿದೆ ಎನ್ನುತ್ತಾರೆ ಅವರು. ಶಿವನಗರದಲ್ಲಿ ಅಲ್ಲಲ್ಲಿ ತೋಡಿಗೆ ಕಿರು ಸೇತುವೆಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ ಹೆಚ್ಚಿನವುಗಳು ಅತ್ಯಂತ ಕೆಳಭಾಗದಲ್ಲಿ ಇವೆ.

...........

ಶಿವನಗರ ವರ್ಷಂಪ್ರತಿ ನೀರು ನಿಲ್ಲುವ ಪ್ರದೇಶ. ಆದರೆ ಈ ಬಾರಿ ಸಮಸ್ಯೆಯ ತೀವ್ರತೆ ಅಧಿಕವಿತ್ತು. ಇಲ್ಲಿ ಮನೆಗಳು ತಗ್ಗು ಪ್ರದೇಶದಲ್ಲಿ ಇರುವುದರಿಂದ ನೆರೆ ನೀರು ನಿಯಂತ್ರಿಸುವುದು ದೊಡ್ಡ ಸವಾಲಾಗಿದೆ. ಕೆಲ ವರ್ಷಗಳ ಹಿಂದೆ ಈ ಭಾಗದ ರಾಜಕಾಲುವೆ ನೀರು ಹರಿದು ನದಿ ಸೇರುವ ಸ್ಥಳದಲ್ಲಿ ಡ್ರೆಜ್ಜಿಂಗ್ ಕಾಮಗಾರಿ ಮಾಡಲಾಗಿತ್ತು. ಆ ವರ್ಷ ಶಿವನಗರದಲ್ಲಿ ಪ್ರವಾಹ ಸಮಸ್ಯೆ ಕೂಡ ಕಡಿಮೆ ಇತ್ತು. ನಿಯಮಿತವಾಗಿ ಅಲ್ಲಿ ಡ್ರೆಜ್ಜಿಂಗ್ ನಡೆಸಿದರೆ ಪರಿಹಾರ ಸಾಧ್ಯವೇ ಎಂದು ಪರಿಶೀಲಿಸಬೇಕು.

* ಪ್ರೇಮಾನಂದ ಶೆಟ್ಟಿ

ಮನಪಾ ಮಾಜಿ ಸದಸ್ಯ

...........

ಶಿವನಗರದಲ್ಲಿ ಇರುವುದು ಹಲವು ದಶಕಗಳ ಸಮಸ್ಯೆ. ನೀರು ನುಗ್ಗಿದರೆ ರಾಜ ಕಾಲುವೆ ಆಸುಪಾಸು ವಾಸಿಸುವ ನಿವಾಸಿಗಳಿಗೆ ರಾತ್ರಿ ನಿದ್ರೆ ಇಲ್ಲ. ಸಮಸ್ಯೆಗೆ ಶಾಶ್ವತ ಪರಿಹಾರ ನಿಟ್ಟಿನಲ್ಲಿ ಸರ್ಕಾರ ಕಾರ್ಯಯೋಜನೆ ರೂಪಿಸಬೇಕು.

* ದಿನೇಶ್ ಕೆ. ಶಿವನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net