

ಮಂಗಳೂರು: ಮಕ್ಕಳಲ್ಲಿ ಸಚ್ಚಾರಿತ್ರೃ, ಸಂಸ್ಕಾರ ಎಳವೆಯಲ್ಲೇ ಬೆಳೆಸಬೇಕು. ವಿಕಾಸದ ಹಾದಿಯಲ್ಲಿ ಸಾಗುವಾಗ ಹಾದಿ ತಪ್ಪದಂತೆ ಮಕ್ಕಳಿಗೆ ಮೌಲ್ಯ ತುಂಬುವುದು ಅವಶ್ಯ. ಸಂಸ್ಕಾರವಂತ ಮಕ್ಕಳೇ ದೇಶದ ಆಸ್ತಿ ಎಂದು ಆಧ್ಯಾತ್ಮಿಕ ಚಿಂತಕಿ ಚೇತನಾ ಶ್ರೀಕೃಷ್ಣ ಭಟ್ ಹೇಳಿದರು.
ವಿಶ್ವ ಹಿಂದೂ ಪರಿಷತ್ ಕಾವೂರು ಪ್ರಖಂಡ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದವಿನಂಗಡಿ ಸಹಯೋಗದಲ್ಲಿ ಭಾನುವಾರ ಪದವಿನಂಗಡಿ ಬೆನಕ ಬಾಲಸಂಸ್ಕಾರ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪದವಿನಂಗಡಿಯಲ್ಲಿ ಬಾಲ ಸಂಸ್ಕಾರ ಕೇಂದ್ರ ಆರಂಭಗೊಂಡಿರುವುದು ಊರಿಗೆ ಹೆಮ್ಮೆ. ವಾರಕ್ಕೊಂದು ಬಾರಿ ಮಕ್ಕಳ ಜತೆ ಹೆತ್ತವರು ಕೂಡಾ ಈ ಕೇಂದ್ರಕ್ಕೆ ಬರಬೇಕು. ಧರ್ಮದ ಬಗ್ಗೆ ಇರುವ ಗೊಂದಲಗಳು ಇಂತಹ ಶಿಬಿರಗಳಲ್ಲಿ ಪರಿಹಾರ ಕಾಣಲು ಸಾಧ್ಯ. ಶಾಲೆಗಳಲ್ಲಿ ಸಿಗದ ಮೌಲ್ಯ ಶಿಕ್ಷಣ ಇಲ್ಲಿ ದೊರೆಯುತ್ತದೆ ಎಂದರು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ ಮಾತನಾಡಿ, ಬದಲಾಗುತ್ತಿರುವ ಸಮಾಜದಲ್ಲಿ ಹಿಂದೂಗಳು ಒಗ್ಗಟ್ಟಾಗಬೇಕಾದ ಅವಶ್ಯಕತೆ ಇದೆ. ವಿಶ್ವಹಿಂದೂ ಪರಿಷತ್, ಬಜರಂಗದಳ ಈ ನಿಟ್ಟಿನಲ್ಲಿ ಸಂಸ್ಕಾರ ಶಿಬಿರಗಳನ್ನು ಆಯೋಜಿಸಿ ಮಕ್ಕಳಲ್ಲಿ ಸನಾತನ ಸಂಸ್ಕೃತಿ, ಮೌಲ್ಯ ಅಳವಡಿಸುವ ಕೆಲಸದಲ್ಲಿ ನಿರತವಾಗಿದೆ ಎಂದರು.
ಶಿಬಿರದ ಪ್ರಭಾರಿ ಚೈತನ್ಯ ಭಿಡೆ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವಹಿಂದು ಪರಿಷತ್, ಬಜರಂಗದಳದ ವತಿಯಿಂದ ದೇಶದಲ್ಲಿ ಸಾವಿರಕ್ಕೂ ಅಧಿಕ, ಜಿಲ್ಲೆಯಲ್ಲಿ 33 ಹಾಗೂ ಕಾವೂರು ಪ್ರಖಂಡದಲ್ಲಿ 6 ಬಾಲ ಸಂಸ್ಕಾರ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಶಿಸ್ತು, ಸಮಯಪಾಲನೆ ಮತ್ತು ಆವರ್ತನ ತತ್ವದಡಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.
ಶಾಸಕ ಡಾ.ವೈ.ಭರತ್ ಶೆಟ್ಟಿ, ದುರ್ಗಾವಾಹಿನಿ ಕರ್ನಾಟಕ ದಕ್ಷಿಣ ಪ್ರಾಂತದ ಸಂಯೋಜಕಿ ಸುರೇಖಾರಾಜ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಉದಯ ಕುಮಾರ್ ಪಚ್ಚನಾಡಿ, ಮಾಜಿ ಅಧ್ಯಕ್ಷ ರಾಮ ಮುಗ್ರೊಡಿ, ವಿಎಚ್‌ಪಿ ಕಾವೂರು ಪ್ರಖಂಡ ಕಾರ್ಯದರ್ಶಿ ವಿಕೇಶ್, ಶಿಬಿರದ ಬೋಧಕರಾದ ಶೋಭಾ, ಇಂದಿರಾ ಮೊದಲಾದವರು ಉಪಸ್ಥಿತರಿದ್ದರು.
ಮಾತಾಜಿ ಜಯಲಕ್ಷ್ಮೀ ಚಂದ್ರಹಾಸ್ ಸ್ವಾಗತಿಸಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಶಿವರಾಮ ವಂದಿಸಿದರು. ಪೂಜಾ ಪೈ ಕಾರ್ಯಕ್ರಮ ನಿರೂಪಿಸಿದರು.
.